Tungabhadra Dam: ರೈತರಿಗೆ ಸಿಹಿಸುದ್ದಿ, 10 ದಿನದಲ್ಲಿ ತುಂಗಭದ್ರಾ ಡ್ಯಾಂ ಭರ್ತಿ
ಬಳ್ಳಾರಿ, ಆಗಸ್ಟ್ 29: ಮೂರು ರಾಜ್ಯಗಳ ಜನರು, ರೈತರಿಗೆ ಸಿಹಿಸುದ್ದಿಯೊಂದಿದೆ. ಕೊಪ್ಪಳದ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಡ್ಯಾಂ ಮುಂದಿನ 10 ದಿನಗಳಲ್ಲಿ ಭರ್ತಿಯಾಗಲಿದೆ. 19ನೇ ಕ್ರೆಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿ ಡ್ಯಾಂ ಖಾಲಿ ಆಗುವ ಆತಂಕ ಉಂಟಾಗಿತ್ತು. ಆದರೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ, ಸುಮಾರು 30 ಟಿಎಂಸಿ ನೀರು ಉಳಿಸಿದ್ದಲ್ಲದೇ, ನದಿಗೆ ಹರಿದು ಹೋಗುತ್ತಿದ್ದ ನೀರನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಡ್ಯಾಂ ಮತ್ತೆ ಭರ್ತಿಯಾಗುವ ಭರವಸೆ ಸಿಕ್ಕಿದೆ. ಈ ಕುರಿತು ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿ ಫೇಸ್‌ಬುಕ್ ಪೋಸ್ಟ್ ಹಾಕಿದೆ. ಡ್ಯಾಂ ಗುರುವಾರದ ನೀರಿನ ಮಟ್ಟದ ಕುರಿತು ಮಾಹಿತಿ ನೀಡಿದೆ.

ಪೋಸ್ಟ್‌ನಲ್ಲಿ, 'ತುಂಗಭದ್ರಾ ಡ್ಯಾಂನಲ್ಲಿ 90TMC ನೀರು ಬಂದಿದೆ. ಬರುವ 10 ದಿನಗಳಲ್ಲಿ ತುಂಬುವ ಸಾಧ್ಯತೆ ಇದೆ' ಎಂದು ಮಾಹಿತಿ ನೀಡಲಾಗಿದೆ.
ದಿನಾಂಕ: 29.08.2024
ಸಮಯ: 6 ಗಂಟೆ
Present Level (Feet): 1628.97
Present to Storage (TMC): 90.238
Hourly Inflow: 30337
Total Outflow: 10254
Avg. Inflows: *28832* ಎಂದು ಪೋಸ್ಟ್ ತಿಳಿಸಿದೆ.
ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿತ್ತು. ಆದ್ದರಿಂದ ಒಂದು ಗೇಟ್‌ನಿಂದಲೇ ಅಧಿಕ ನೀರು ನದಿಗೆ ಹರಿದು ಹೋಗುತ್ತಿತ್ತು. ಹೊಸಪೇಟೆಯಲ್ಲಿಯೇ ಗೇಟ್ ತಯಾರಿಸಿ ಒಂದು ವಾರದಲ್ಲಿ ಅದನ್ನು ಯಶಸ್ವಿಯಾಗಿ ಕೂರಿಸಿ, ನದಿಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ನಿಲ್ಲಿಸಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿ, 'ಅಂತಿಮವಾಗಿ ಸ್ಟಾಪ್ ಲಾಗ್ ಗೇಟ ಅನ್ನು ಕೂರಿಸಲಾಗಿದೆ. ಈ ಕೆಲಸವನ್ನು ಕನ್ನಯ್ಯ ನಾಯ್ಡು ನಿವೃತ್ತ ಅಧಿಕಾರಿಗಳು ತುಂಗಭದ್ರಾ ಸ್ಟೀಲ್ ಪ್ಲಾಂಟ್ಸ್ ಹೊಸಪೇಟೆ ಇವರ ನಿರ್ದೇಶನದಲ್ಲಿ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸಲಾಗಿರುತ್ತದೆ. 30 ಟಿಎಂಸಿಗೂ ಹೆಚ್ಚು ನೀರು ಉಳಿತಾಯವಾಗಿರುತ್ತದೆ. ಜಿಲ್ಲಾಡಳಿತ ಎಲ್ಲರಿಗೂ ಆಭಾರಿಯಾಗಿರುತ್ತದೆ. ಈ ಕಾರ್ಯದಲ್ಲಿ ಒಂದು ವಾರದಿಂದ ರಾತ್ರಿ ಹಗಲು ಶ್ರಮಿಸಿದ ಎಲ್ಲರಿಗೂ ಗೌರವಪೂರ್ವಕ ಅಭಿನಂದನೆಗಳು' ಎಂದು ಹೇಳಿತ್ತು.
ಆಗಸ್ಟ್ 22ರಂದು ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ಗೇಟ್ ಅಳವಡಿಕೆಯನ್ನು ಮೂರ್ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಲಾಗಿದೆ. ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದುಬಂದರೆ, ಜಲಾಶಯ ಶೇ 95 ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ" ಎಂದು ಹೇಳಿದ್ದರು.
ತುಂಗಭದ್ರಾ ಡ್ಯಾಂಗೆ ಶಿವಮೊಗ್ಗದಲ್ಲಿರುವ ತುಂಗ, ಭದ್ರಾ ಡ್ಯಾಂ ನೀರು ಆಧಾರವಾಗಿದೆ. ಈ ಎರಡೂ ಡ್ಯಾಂಗಳು ಈಗಾಗಲೇ ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗಿದೆ. ಗುರುವಾರದ ಮಾಹಿತಿಯಂತೆ ಭದ್ರಾ ಜಲಾಶಯದ ಹೊರ ಹರಿವು 3942 ಕ್ಯುಸೆಕ್, ಗಾಜನೂರಿನಲ್ಲಿರುವ ತುಂಗ ಜಲಾಶಯದ ಹೊರಹರಿವು 19,371 ಕ್ಯೂಸೆಕ್ ಆಗಿದೆ. ಆದ್ದರಿಂದ ನದಿಗೆ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ಡ್ಯಾಂಗೆ ಒಳಹರಿವು ಸಹ ಹೆಚ್ಚಿದೆ.












Click it and Unblock the Notifications