ಮೆಣಸಿನಕಾಯಿ ಬೆಳೆಯಲ್ಲಿ ರಸ ಹೀರುವ ಕೀಟ; ಹತೋಟಿಗೆ ಸಲಹೆಗಳು
ಬಳ್ಳಾರಿ, ಅಕ್ಟೋಬರ್ 05; ಬಳ್ಳಾರಿ ಜಿಲ್ಲೆಯಲ್ಲಿ ರೈತರು ಮೆಣಸಿನಕಾಯಿ ಬೆಳೆಯಲ್ಲಿ ಕಂಡುಬರುವ ರಸ ಹೀರುವ ಕೀಟಗಳ ನಿರ್ವಹಣೆಗೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆ ಹೇಳಿದೆ. ಕೀಟ ಹತೋಟಿ ಕ್ರಮಗಳನ್ನು ತಿಳಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗೆ ಸೊರಗು ರೋಗ, ಕರಿಹೇನಿನ ಹಾವಳಿ, ರಸ ಹೀರುವ ಕೀಟಗಳ ಕಾಟ ಜಾಸ್ತಿಯಾಗಿದೆ. ಆದ್ದರಿಂದ ರೈತರು ಹತೋಟಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ ಹೀರುವ ಕೀಟಗಳ ನಿರ್ವಹಣೆ ಕ್ರಮ; ಹೊಲದ ಸುತ್ತಲೂ 2-3 ಸಾಲು ಜೋಳ, ಮೆಕ್ಕೆಜೋಳ, ಸಜ್ಜೆಯನ್ನು ಬೇಲಿ ಬೆಳೆಯಾಗಿ ಅಡವಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು. ಹೊಲ ಮತ್ತು ಬದುಗಳ ಸ್ವಚ್ಛತೆಯಿಂದ ಥ್ರೀಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿರ್ಮೂಲನೆ ಮಾಡಬಹುದು.
ಸೂಕ್ತ ಅಂತರ (90*30 ಸೆಂ.ಮೀ./60*45 ಸೆಂ.ಮೀ.) ಕಾಪಾಡಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂದ್ರ ಕೀಟನಾಶಕದಿಂದ (2-3 ಕೆ.ಜಿ/ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು.
ಬೇವಿನ ಹಿಂಡಿ (200 ಕೆ.ಜಿ/ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆ.ಜಿ/ಎಕರೆಗೆ) ಮಣ್ಣಿನಲ್ಲಿ ಬೆರೆಸುವುದರಿಂದ ನಿರೋದಕ ಶಕ್ತಿ ವೃದ್ಧಿಗೊಳ್ಳುತ್ತದೆ. ಶಿಫಾರಸ್ಸು ಪ್ರಮಾಣದ ರಸಗೊಬ್ಬರದೊಂದಿಗೆ ಪೊಟ್ಯಾಶ್‍ನ ಬಳಕೆ ವೃದ್ಧಿಸುವುದರಿಂದ ಕೀಟ ನಿರೋಧಕ ಶಕ್ತಿ ಹೆಚ್ಚುತ್ತದೆ.
ನೀಲಿ ಅಂಟಿನ ಬಲೆಗಳನ್ನು 25-30 ಎಕರೆಗೆ ಬೆಳೆಯ ಎತ್ತರಕ್ಕೆ ಅಳವಡಿಸಬೇಕು. ನಂತರದಲ್ಲಿ ಕುಂಟೆಯೊಡೆಯುವುದರಿಂದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು. ಸಾಧ್ಯವಾದಲ್ಲಿ ಕಾಲುವೆ ಮುಖಾಂತರ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಬೇಕು.
ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್) ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುವುದನ್ನು ತಡೆಯಬಹುದು. ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತು ಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು. ಪರಭಕ್ಷಕ/ಮಿತ್ರ ಕೀಟಗಳ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳ ಬದಲು ಪರಿಸರ ಸ್ನೇಹಿ ಕೀಟನಾಶಕಗಳಾದ ಶೇ.5 ರ ಬೇವಿನ ಬೀಜದ ಕಷಾಯ, ಬೇವಿನ ಎಣ್ಣೆ (1500 ಪಿ.ಪಿ.ಯಂ) 3 ಮಿ.ಕೀ/ ಲೀ. ಹೊಂಗೆ ಎಣ್ಣೆ 3 ಮಿ.ಲೀ/ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೇಂದ್ರ ಕೀಟನಾಶಕಗಳಾದ ಬಿವೇರಿಯಾ ಬಸ್ಸಿಯಾನ ಅಥವಾ ಲೆಕ್ಯಾನಿಸಿಲಿಯಂ ಲೆಕ್ಯಾನಿ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೇಯನ್ನು 5 ಗ್ರಾಂ/ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಅವಶ್ಯಕತೆಗನುಸಾರವಾಗಿ ಶಿಫಾರಸ್ಸು ಮಾಡಿರುವ ರಾಸಾಯನಿಕ ಕೀಟನಾಶಕಗಳದ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಅಥವಾ 0.3 ಗ್ರಾಂ. ಥಯಾಮಿಥೋಕ್ಸಾಮ್ 25 ಡಬ್ಲ್ಯೂ.ಜಿ. ಅಥವಾ 1.0 ಮಿ.ಲೀ. ಫಿಪ್ರೋರೀನಿಲ್ 5 ಎಸ್.ಸಿ. ಅಥವಾ 1.0 ಗ್ರಾಂ. ಡಯಾಫೆನ್ಥಯೂರಾನ್ 50 ಡಬ್ಲ್ಯೂ.ಪಿ. ಅಥವಾ 0.6 ಮಿ.ಲೀ. ಸ್ಪೈನೊಟೆರಾವ್ 11.7 ಎಸ್.ಸಿ. ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಜಿಪಂ ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ತಿಳಿಸಿದ್ದಾರೆ.












Click it and Unblock the Notifications