ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ರೈತ ಕುಲದ ಸಂಕಷ್ಟಗಳು; ಒಂದು ಅವಲೋಕನ

|
Google Oneindia Kannada News

ಕಳೆದ ವರ್ಷ ನರೇಂದ್ರ ಮೋದಿ ನೇತೃತ್ವದ ಭಾಜಪ ಸರ್ಕಾರ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ತಂದು ರೈತರ ಕೆಂಗಣ್ಣಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ದೇಶದ ಎಲ್ಲಾ ರೈತ ಸಂಘಟನೆಗಳು ಆ ಕಾಯಿದೆಗಳ ವಿರುದ್ಧ ಚಳವಳಿ ಹೂಡಿದ ಹಿನ್ನೆಲೆಯಲ್ಲಿ ಒಕ್ಕೂಟ ಸರ್ಕಾರ ಅವುಗಳನ್ನು ಸಂಸತ್‌ನಲ್ಲಿ ಹಿಂಪಡೆದಿದೆ.

ಚಳವಳಿ ಹೂಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಹೋರಾಟವನ್ನು ಹಿಂಪಡೆಯುವ ಮುನ್ನ ಕನಿಷ್ಟ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವುದು, ವಿದ್ಯುಚ್ಛಕ್ತಿ ನೀತಿಗೆ ತರಲಿರುವ ಬದಲಾವಣೆಯನ್ನು ರದ್ದು ಮಾಡಬೇಕು ಎಂಬುದೂ ಸೇರಿದಂತೆ ಏಳು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದೆ. ಅವೆಲ್ಲ ಬೇಡಿಕೆಗಳಿಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದೆ. ಮುಂದೇನಾಗುವುದೆಂದು ಕಾದು ನೋಡೋಣ.

 ಭಾರತದ ಕೃಷಿ ಬಿಕ್ಕಟ್ಟಿನ ಇತಿಹಾಸ

ಭಾರತದ ಕೃಷಿ ಬಿಕ್ಕಟ್ಟಿನ ಇತಿಹಾಸ

ಭಾರತದ ಕೃಷಿ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳಲು ನಾವು ಹಸಿರು ಕ್ರಾಂತಿಯ ದಿನಗಳಿಂದ ಅಧ್ಯಯನ ಆರಂಭಿಸಬೇಕು. ಕೃಷಿ ಎಂಬುದು ಈ ದೇಶದ ರೈತ ಕುಲದ ಜೀವನ ಕ್ರಮದಂತಿದ್ದ ದಿನಗಳಿಂದ ಅದೊಂದು ಉದ್ಯಮವಾಗಿ ರೂಪುಗೊಂಡ ಬಗೆಯನ್ನೂ ಪರಿಶೀಲಿಸಬೇಕು.

1960ರ ದಶಕ. ಭಾರತದಲ್ಲಿ ತೀವ್ರ ಬರಗಾಲವಿತ್ತು. ಅನ್ನಾಹಾರಗಳನ್ನು ವಿದೇಶದಿಂದ ತರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ. ಅದಾಗ ಭಾರತಕ್ಕೆ ship to mouth ಎಂಬ ಕಳಂಕ ಅಂಟಿತ್ತು. (ಶಿಪ್ ಟು ಮೌತ್ ಅಂದರೆ ಆಹಾರ ಪದಾರ್ಥಗಳು ಹೊರಗಿನಿಂದ ಆಮದಾದಲ್ಲಿ ಒಪ್ಪತ್ತಿನ ಊಟ ಎಂದರ್ಥ). ಅಂಥ ಪರಿಸ್ಥಿತಿಯಲ್ಲಿ ಆಗಿನ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸಂದರ್ಶನ ಮಾಡುತ್ತಿರುವಾಗ ಅಮೆರಿಕದ ಪತ್ರಕರ್ತರೊಬ್ಬರು ಹಾಕಿದ ಒಂದು ಪ್ರಶ್ನೆ ಮತ್ತೊಂದು ಆಘಾತಕ್ಕೆ ಕಾರಣವಾಯಿತು.

ಅದೊಂದು ಅಮಾನವೀಯ ಕೃತ್ಯ ಎಂದಿದ್ದ ಶಾಸ್ತ್ರೀಜಿ

ಅದೊಂದು ಅಮಾನವೀಯ ಕೃತ್ಯ ಎಂದಿದ್ದ ಶಾಸ್ತ್ರೀಜಿ

"ಅಮೆರಿಕ ವಿಯೆಟ್ನಾಂ ವಿರುದ್ಧ ಮಾಡುತ್ತಿರುವ ಯುದ್ಧವನ್ನು ನೀವು ಯಾವ ರೀತಿಯಾಗಿ ನೋಡುತ್ತೀರಿ?" ಎಂಬ ಪ್ರಶ್ನೆ ಅದು. ಅದಕ್ಕೆ ಶಾಸ್ತ್ರೀಜಿ 'ಅದೊಂದು ಅಮಾನವೀಯ ಕೃತ್ಯ' ಎಂಬುದಾಗಿ ಬಣ್ಣಿಸಿದರು. ಮರುದಿನ ಸುದ್ದಿ ಪ್ರಕಟವಾಯಿತು. ಅದನ್ನು ಓದಿದ ಆಗಿನ ಅಮೆರಿಕದ ಅಧ್ಯಕ್ಷ ಭಾರತಕ್ಕೆ ಆಹಾರ ಧಾನ್ಯಗಳನ್ನು (ಗೋಧಿ) ಹೊತ್ತು ತರುತ್ತಿದ್ದ ಹಡಗನ್ನು ಹಿಂದಿರುಗಿ ಬರಲು ಸೂಚಿಸಿದರು. ಅರ್ಥಾತ್ go back ಅಂದರು.

ಆಗಿನ ಭಾರತದ ಕೃಷಿ ಸಚಿವರು ಅಮೆರಿಕ ಅಧ್ಯಕ್ಷರಿಗೆ ಪತ್ರ ಬರೆದು ಆಹಾರ ಧಾನ್ಯ ಕಳುಹಿಸಿಕೊಡಿ, ಇಲ್ಲವಾದರೆ ಹಸಿವಿನಿಂದ ಜನ ಸಾಯುವ ಪರಿಸ್ಥಿತಿ ತಲೆದೋರುತ್ತದೆ, ನಮಗೆ ಸಹಾಯ ಮಾಡಿ ಎಂದೆಲ್ಲಾ ಕೇಳಿಕೊಂಡರು. ಇದು ಅಂದಿನ ಭಾರತದ ಸ್ಥಿತಿ.

ಕೆಲ ಕಾಲದ ನಂತರ ಶಾಸ್ತ್ರೀಜಿ ಇಹಲೋಕ ತ್ಯಜಿಸಿದರು.ಇಂದಿರಾ ಗಾಂಧಿ ಪ್ರಧಾನಿಯಾದರು. ಭಾರತದ ಮಟ್ಟಿಗೆ ಆಹಾರ ಸ್ವಾವಲಂಬನೆ ಸಾಧಿಸುವುದು ಇಂದಿರಾ ಅವರ ಆದ್ಯತೆಯ ವಿಷಯಗಳಲ್ಲೊಂದಾಯಿತು. ಡಾ. ಸ್ವಾಮಿನಾಥನ್ ನೇತೃತ್ವದ ಒಂದು ತಂಡ ರಚಿಸಿ ಭಾರತಕ್ಕೆ ಹೈಬ್ರಿಡ್ ಬೀಜಗಳನ್ನು ತರಿಸುವ ಸಂಕಲ್ಪ ಮಾಡಿದರು. ಮೆಕ್ಸಿಕೋದಿಂದ ಭಾರತಕ್ಕೆ ಮೊದಲ ಹೈಬ್ರಿಡ್ ಗೋಧಿ ಬಂದಾಯ್ತು.

 ಗೋಧಿ ಬೀಜಗಳನ್ನು ಸ್ವಾಮಿನಾಥನ್ ಕೈಗಿರಿಸಿದ ಇಂದಿರಾ

ಗೋಧಿ ಬೀಜಗಳನ್ನು ಸ್ವಾಮಿನಾಥನ್ ಕೈಗಿರಿಸಿದ ಇಂದಿರಾ

ಆ ಗೋಧಿ ಬೀಜಗಳನ್ನು ಸ್ವಾಮಿನಾಥನ್ ಕೈಗಿರಿಸಿದ ಇಂದಿರಾ 'I dont want Americans in my back. Can you promise me to achieve food security to my country's ಅಂದರು. ಅಲ್ಲಿಂದ ದೇಶದ ಕೃಷಿಯಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಹೊಟ್ಟೆಬಾಕ ಹೈಬ್ರಿಡ್‌ಗಳು ಹೆಚ್ಚೆಚ್ಚು ನೀರು, ರಸಗೊಬ್ಬರ ಬೇಡಿದವು. ಕೃಷಿ ಉತ್ಪಾದನೆ ಏನೋ ಹೆಚ್ಚಾಯಿತು, ಅದೇ ರೀತಿ ಕೃಷಿ ಉತ್ಪಾದನಾ ವೆಚ್ಚವೂ ಕೂಡಾ.

ಅಲ್ಲಿಂದಾಚೆಗೆ ದೇಶ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಯಿತು, ಭೂ ಸುಧಾರಣಾ ನೀತಿಗಳು ಬಂದವು. ಹೊಸ ಹೊಸ ಯೋಜನೆಗಳಿಂದ ನೀರಾವರಿ ಪ್ರದೇಶ ಹೆಚ್ಚಾಯಿತು. ಕೃಷಿ ಕಾಯಕದಲ್ಲಿ ತೊಡಗಿದ ದೇಶದ ರೈತರು ಭಾರತಕ್ಕೆ ಅಂಟಿದ್ದ "ಶಿಪ್ ಟು ಮೌತ್" ಕಳಂಕವನ್ನು ತೊಡೆದು ಹಾಕಿದ್ದರು. ಭಾರತ ಆಹಾರ ಸ್ವಾವಲಂಬನೆ ಸಾಧಿಸಿತ್ತು.

 ಕೃಷಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ

ಕೃಷಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ

ಇದೆಲ್ಲಾ ಆಗುವಷ್ಟರಲ್ಲಿ ಕೃಷಿ ಭೂಮಿ, ಕೃಷಿ ಪದ್ಧತಿ ಹಾಗೂ ಕೃಷಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ರೈತರು ಬಹುಬೆಳೆ ಪದ್ಧತಿಯಿಂದ ಏಕಬೆಳೆ ಪದ್ಧತಿಗೆ ಒಗ್ಗಿ ಹೋಗಿದ್ದರು. ಹೊಲಗಳಿಂದ ಅಕ್ಕಡಿ ಸಾಲುಗಳು ಮಾಯವಾಗಿದ್ದವು. ಏಕ ಬೆಳೆ ಬೆಳೆಯಲು ಕೃಷಿ ಭೂಮಿ ವಿಸ್ತರಣೆಗೆಂದು ಹೊಲಗಳ ಅಕ್ಕಪಕ್ಕದ ಕಿರುಗಾಲುವೆ, ಕಾಲುವೆ, ದೊಡ್ಡ ಕಾಲುವೆಗಳನ್ನು ರೈತರು ಮುಚ್ಚಿದರು. ಜಲಮೂಲಗಳಿಗೆ ಕಂಟಕ ಬಂತು. ಬಿದ್ದ ಮಳೆ ನೀರು ತನ್ನ ಹರಿವಿನ ಹಾದಿ ಕಾಣದೆ ದಿಕ್ಕಾಪಾಲಾಗಿ ಚಲಿಸಿತು. ಮಳೆ ನೀರಿನ ಹರಿವಿನ ದಾರಿಯಾದ ಕಾಲುವೆಗಳನ್ನು ಮುಚ್ಚಿದ ರೈತರ ಹೊಲಗಳಲ್ಲಿ ನೀರು ತುಂಬಿ ಬೆಳೆ ನಾಶವಾದಾಗ ಅದನ್ನು "ನೆರೆ" ಎಂದು ಬಣ್ಣಿಸಲಾಯ್ತು.

ಬಿದ್ದ ಮಳೆ ನೀರನ್ನು ಓಡಲು ಬಿಡದೆ, ತೆವಳುವಂತೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ನೀರಿನ ಸಂರಕ್ಷಣೆ ಮಾಡುವುದನ್ನು ಮರೆತು ಮಳೆ ಕೈಕೊಟ್ಟಾಗ ನೀರು ನೆರಳಿಲ್ಲದೆ "ಬರ" ಎಂದೆವು. ಕೃಷಿಯ ಪಾಲಿಗೆ ನಿಸರ್ಗ ಕೊಡುವ ತೊಂದರೆಗಿಂತ ಹೆಚ್ಚಿನದ್ದು ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ.

 ಹಳ್ಳ, ಕೊಳ್ಳಗಳು ತಮ್ಮ ಬದುಕಿನ ಮೂಲಧಾರಗಳು

ಹಳ್ಳ, ಕೊಳ್ಳಗಳು ತಮ್ಮ ಬದುಕಿನ ಮೂಲಧಾರಗಳು

ನದಿ, ತಲಪರಗಿ, ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳು ತಮ್ಮ ಬದುಕಿನ ಮೂಲಧಾರಗಳು ಎಂಬುದನ್ನು ಮರೆತಂತೆ ಇವುಗಳನ್ನು ನಾಡಿನಾದ್ಯಂತ ನಿರ್ಲಕ್ಷಿಸಲಾಗಿದೆ. ಸಂಸ್ಕೃತದಲ್ಲಿ "ಜೀವಂ ಜೀವನಾಧಾರಂ" ಎಂಬ ಮಾತಿದೆ. ನೀರು ಬದುಕಿಗೆ ಆಧಾರ ಎಂದರ್ಥ. ಆದರೆ ಈ ಆಧಾರವನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ಅನಗತ್ಯವಾಗಿ ಬೋರ್‍ವೆಲ್‍ಗಳನ್ನು ಕೊರೆಸಿ ಅಂತರ್ಜಲ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಇಷ್ಟೆಲ್ಲಾ ಪರಿಸರ ವಿರೋಧಿ ಕ್ರಮಗಳನ್ನು ಅನುಸರಿಸಿ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇಲ್ಲವಾಗಿದೆ. ಬೆಳೆದ ಬೆಳೆಗೆ ವೈಜ್ಞಾನಿಕ ಅಥವಾ ಲಾಭದಾಯಕ ಬೆಲೆ ಇಲ್ಲ. ಅದಕ್ಕಾಗಿ ರೈತ ಸಂಘಟನೆಗಳು ಹಲವು ದಶಕಗಳಿಂದ ಚಳವಳಿ ನಡೆಸುತ್ತಿವೆ, ಮುಂದುವರೆಸುತ್ತಿವೆ.

ದೇಶದ ಕೃಷಿಯಲ್ಲಿರುವ ಈ ಸಮಸ್ಯೆಗಳಿಗೆ ಮತ್ತೊಂದು ಸಮಸ್ಯೆ 1995ರಿಂದ ಈಚೆಗೆ ದೇಶದ ರೈತರ ಪಾಲಿಗೆ ವಕ್ಕರಿಸಿತು. ಭಾರತ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ನಮ್ಮೂರು ನಿಮ್ಮೂರಿನ ಬಡ ರೈತನೂ ಲಕ್ಷಾಂತರ ರೂಪಾಯಿ ಸಬ್ಸಿಡಿ ಪಡೆಯುವ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ರೈತರ ನಡುವೆ ಮಾರುಕಟ್ಟೆಯಲ್ಲಿ ಎದುರಾಗಬೇಕಾಗದ ಸನ್ನಿವೇಶ ರೈತರನ್ನು ಇನ್ನಷ್ಟು ಕಂಗೆಡಿಸಿತು.

 ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ

ಕೃಷಿ ಹಾಗೂ ಆಹಾರ ಪದಾರ್ಥಗಳ ರಫ್ತು ಮತ್ತು ಆಮದು ನೀತಿಗಳೂ ರೈತರ ಪರವಾಗಿಲ್ಲ. ಉದಾಹರಣೆಗೆ ದೇಶಕ್ಕೆ ಅಗತ್ಯವಾಗಿ ಬೇಕಾದ ಅಡುಗೆ ಎಣ್ಣೆ ಆಮದು ನೀತಿಗಳಿಂದಾಗಿ ಸುಮಾರು ಶೇಕಡಾ 90ರಷ್ಟು ಆಮದಾಗುತ್ತಿರುವುದರಿಂದ ಸ್ಥಳೀಯ ಎಣ್ಣೆ ಬೀಜಗಳ ಬೆಳೆಗಾರರಿಗೆ ಗಾಣಗಳಿಗೆ ಕಂಟಕ ಬಂದದ್ದು ಸುಳ್ಳಲ್ಲ.

ಇನ್ನು ರೈತರಿಗೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಲಭ್ಯವಾಗುವ ಬೆಳೆ ಸಾಲ ವಿಷಯವನ್ನೊಮ್ಮೆ ಗಮನಿಸೋಣ. ಆರ್ಥಿಕ ತಜ್ಞರ ಪ್ರಕಾರ ಒಂದು ಸಾಲ ಯಾವ ಉದ್ದೇಶಕ್ಕೆ ಪಡೆಯಲಾಗುತ್ತದೋ ಆ ಉದ್ದೇಶ ಕಸುಬಿನಿಂದ ಗಳಿಸಿದ ಹಣದಿಂದ ಪಡೆದ ಸಾಲ ತೀರಿಸುವಂತಹ ಪರಿಸ್ಥಿತಿ ದೇಶದಲ್ಲಿರಬೇಕು. ಅಂಥದ್ದೊಂದು ವ್ಯವಸ್ಥೆ ಜಾರಿಯಲ್ಲಿರಬೇಕು. ಆದರೆ ಭಾರತದಲ್ಲಿ ಅನೇಕ ಸಾರಿ ಹಲವು ಬೆಳೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಪರಿಸ್ಥಿತಿ ಇದೆ. ಅಕಸ್ಮಾತ್ ಬರವೋ, ನೆರೆಯೋ ಬಂತೆನ್ನಿ, ಅಷ್ಟೂ ಸಾಲ ರೈತನ ಮೈಮೇಲೆ ಬಂದಿರುತ್ತದೆ. ಇಂಥ ಎಲ್ಲಾ ಪರಿಸ್ಥಿತಿಗಳ ನಡುವೆ ರೈತ ದೇಶಕ್ಕೆ ಆಹಾರ ಉತ್ಪಾದಿಸುವುದಲ್ಲದೆ ತಾನು ಮತ್ತು ತನ್ನ ಕುಟುಂಬವನ್ನು ನಿರ್ವಹಿಸಿಕೊಂಡು ಮರ್ಯಾದೆಯಿಂದ ಬದುಕಬೇಕಿದೆ.

 1995ರಿಂದ ಮೂರು ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ

1995ರಿಂದ ಮೂರು ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ

ಇಂತಿಪ್ಪ ಪರಿಸ್ಥಿತಿಯಲ್ಲಿ 1995ರಿಂದ ಈಚೆಗೆ ಭಾರತದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಬಿಕ್ಕಟ್ಟು ಮುಂದುವರೆದಿದೆ, ಆತ್ಮಹತ್ಯೆಗಳೂ ಮುಂದುವರೆದಿವೆ.

ಕೃಷಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸಲು ಮಂತ್ರದಂಡದಂತಹ ಯಾವುದೋ ಒಂದು ಯೋಜನೆ ಅಥವಾ ಕಾರ್ಯಕ್ರಮ ಇರಲಾರದು. ಅದಕ್ಕೆ ಸರ್ಕಾರದ ನೀತಿಗಳು, ಮಾರುಕಟ್ಟೆ, ರೈತರ ಕೃಷಿ ಪದ್ಧತಿಗಳು, ಆಮದು, ರಫ್ತು ನೀತಿಗಳು ಹೀಗೆ ದಶದಿಕ್ಕುಗಳಿಂದಲೂ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವಂತಹ ನೀತಿಗಳನ್ನು ರೂಪಿಸಬೇಕಿದೆ.

ಬದಲಾವಣೆ ತರುತ್ತೇವೆಂದು ಭಾರತ ಸರ್ಕಾರ ಕಳೆದ ವರ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ತಂದು ಎಡವಟ್ಟು ಮಾಡಿಕೊಂಡಿತಲ್ಲಾ ಅಂಥ ಯಾವುದೇ ಅವಿವೇಕದ ಕಾನೂನುಗಳನ್ನು ಯಾರೂ ತರಬಾರದು. ಕೃಷಿ ಕ್ಷೇತ್ರದ ಏಳಿಗೆಗೆ ಪ್ರಮುಖವಾಗಿ ಬೇಕಿರುವುದು ಕುಟುಂಬ ಆಧಾರಿತ ಕೃಷಿಗೆ ಅಗತ್ಯವಿರುವ ಸರ್ಕಾರದ ನೆರವು ಮತ್ತು ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಹಾಗೂ ರೈತ ಕುಟುಂಬಕ್ಕೆ ಖಾತ್ರಿಯಾದ ಆದಾಯ. ಇದಿಷ್ಟನ್ನು ಸಾಧಿಸಲು ಬೇಕಾದ ನೀತಿಗಳು ಬರಬೇಕು. ಅದಾಗ ಮಾತ್ರ ಕೃಷಿ ಕ್ಷೇತ್ರದ ಮತ್ತು ರೈತಕುಲದ ಅಭಿವೃದ್ಧಿ ಸಾಧ್ಯ.

English summary
To understand the Agriculture crisis in India, we need to start studying from the days of the Green Revolution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X