ರಾಹುಲ್ ಗಾಂಧಿ ಮಿನಿ ನರೇಂದ್ರ ಮೋದಿ ಅಂದಿದ್ದು ಯಾರನ್ನು?
ನಿರ್ಮಲ್ (ತೆಲಂಗಾಣ), ಮೇ 16: ವಿದೇಶ ಪ್ರವಾಸದಿಂದ ವಾಪಸ್ ಆದ ನಂತರ ಮೈಕೊಡವಿಕೊಂಡು ರಾಜಕೀಯದ ಆಖಾಡಕ್ಕಿಳಿದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ (ಮೇ 16) ತೆಲಂಗಾಣದಲ್ಲಿ ಪಾದಯಾತ್ರೆ ನಡೆಸಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವನ್ನು ಜಾಲಾಡಿಸುತ್ತಿರುವ ರಾಹುಲ್, ಅಚ್ಚೇ ದಿನ್ ಎನ್ನುವುದು ಸಾರ್ವಜನಿಕರಿಗೆ ಬಂದಿಲ್ಲ, ಅದು ಬಂದಿದ್ದು ಪ್ರಧಾನಿ ಮೋದಿ ಮತ್ತು ಕೆಲವು ವಾಣಿಜ್ಯೋದ್ಯಮಿಗಳಿಗೆ ಮಾತ್ರ ಎಂದು ಲೇವಡಿ ಮಾಡಿದ್ದಾರೆ. (ಕೈ-ಕಮಲದ ನಡುವೆ ಸೂಟು ಬೂಟಿಗೆ ಕಿತ್ತಾಟ)
ಕೇಂದ್ರ ಸರಕಾರ ಬಡವರಿಂದ ಭೂಮಿಯನ್ನು ಕಸಿದುಕೊಂಡು ಅದನ್ನು ಶ್ರೀಮಂತರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಇಲ್ಲಿ ತೆಲಂಗಾಣದಲ್ಲೂ ಮುಖ್ಯಮಂತ್ರಿಗಳು ರೈತ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ.
ಮೋದಿ ಮತ್ತು ತೆಲಂಗಾಣದ ಸಿಎಂ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರಿಗೆ ರೈತರ ಪರ ಕಾಳಜಿ ಇರುತ್ತಿದ್ದರೆ ನಾನೇಕೆ ಇಲ್ಲಿ ಪಾದಯಾತ್ರೆ ಮಾಡುತ್ತಿದ್ದೆ, ನೆಮ್ಮದಿಯಾಗಿ ದೆಹಲಿಯಲ್ಲಿ ಇರುತ್ತದೆ. ಕೆಸಿಆರ್ 'ಮಿನಿ ನರೇಂದ್ರ ಮೋದಿ' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ನನ್ನ ಪಾದಯಾತ್ರೆ ಅನ್ನದಾತರಿಗಾಗಿ, ಮುಂದೆ ಓದಿ..

ಬಿಸಿಲು ಲೆಕ್ಕಿಸದೇ ಪಾದಯಾತ್ರೆ
ಉರಿಯುವ ಬಿಸಿಲನ್ನೂ ಲೆಕ್ಕಿಸದೇ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ನನ್ನ ಹೋರಾಟ ಅನ್ನದಾತರಿಗಾಗಿ. ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ಕೊಡುವುದಾಗಿ ಹೇಳಿದ್ದ ಮೋದಿ ಮತ್ತು ಕೆಸಿಆರ್ ಈಗ ಎಲ್ಲಿದ್ದಾರೆ - ರಾಹುಲ್ ಗಾಂಧಿ ಪ್ರಶ್ನೆ.

ಬೀಡಿ ಕಾರ್ಮಿಕರ ಮನೆಯಲ್ಲಿ ರಾಹುಲ್ ಗ್ರಾಮ ವಾಸ್ತವ್ಯ
ಜಿಲ್ಲೆಯ ವಾಡಿಯಾಲ್ ಎಂಬ ಹಳ್ಳಿಯಲ್ಲಿ ಬೀಡಿ ಕಾರ್ಮಿಕಳ ಮನೆಯಲ್ಲಿ ರಾಹುಲ್ ವಿಶ್ರಾಂತಿ ಪಡೆದರು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ರಾಹುಲ್, ಆಕೆ ನೀಡಿದ ಟೀ, ಬಾಳೆಹಣ್ಣು, ಕೇಕ್ ಸವಿದು ಮತ್ತೆ ಉತ್ಸಾಹದಿಂದ ರಾಹುಲ್ ಪಾದಯಾತ್ರೆ ಮುಂದುವರಿಸಿದರು.

ಹದಿನೈದು ಕಿಲೋಮೀಟರ್ ಪಾದಯಾತ್ರೆ
ಹದಿನೈದು ಕಿಲೋಮೀಟರ್ ಪಾದಯಾತ್ರೆ ನಡೆಸಿದ ರಾಹುಲ್, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನೊಬ್ಬನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಪಾರ್ಟಿ ವತಿಯಿಂದ ನೀಡಿದರು.

ರೈತನ ಸಾವಿನಲ್ಲಿ ರಾಹುಲ್ ರಾಜಕೀಯ
ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಯಾವುದೇ ವಿಶೇಷವಿಲ್ಲ. ರೈತನ ಸಾವಿನ ವಿಚಾರದಲ್ಲಿ ರಾಹುಲ್ ರಾಜಕೀಯ ಮಾಡುತ್ತಿದ್ದಾರೆ. ರೈತನ ಬಗ್ಗೆ ಇವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕಿರುವ ಪ್ರೀತಿ ಏನೆಂಬುದು ದಶಕಗಳಿಂದ ಸಾಬೀತಾಗಿದೆ ಎಂದು ಬಿಜೆಪಿ, ರಾಹುಲ್ ಪಾದಯಾತ್ರೆಗೆ ಪ್ರತಿಕ್ರಿಯಿಸಿದೆ.

ಕೆಸಿಆರ್ ಲೇವಡಿ
ರಾಹುಲ್ ಪಾದಯಾತ್ರೆ ರಾಜಕೀಯ ಪ್ರೇರಿತ, 'ಈ ಗಾಂಧಿಗಳು ಬರುತ್ತಾರೆ, ಹೋಗುತ್ತಾರೆ. ಇದರಿಂದ ರೈತರಿಗಾಗುವ ಲಾಭ ಎನೂ ಇಲ್ಲ. ನಾವು ಚುನಾವಣೆಯ ವೇಳೆ ನೀಡಿದ ಭರವಸೆಯನ್ನು ಈಡೇರಿಸಲು ಬದ್ದವಾಗಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications
