ರೇಷ್ಮೆ ಕೃಷಿ ಮೇಳ; ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ
ಕೊಪ್ಪಳ, ಜುಲೈ 28; 'ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ' ಎಂಬ ವಿಷಯದಡಿ ಕೊಪ್ಪಳದಲ್ಲಿ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿತ್ತು. ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಮೇಳದಲ್ಲಿ ಕರೆ ನೀಡಲಾಯಿತು.
ಭಾರತ ಸರ್ಕಾರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮೈಸೂರು ಮತ್ತು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಒಂದು ದಿನದ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿತ್ತು.

ಮೇಳ ಉದ್ಘಾಟಿಸಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, "ಸುಸ್ಥಿರ ಕೃಷಿಗಳಲ್ಲಿ ಒಂದಾಗಿರುವ ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತದೆ. ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರೇಷ್ಮೆ ಕೃಷಿಯು ನೆರವಾಗಲಿದೆ" ಎಂದರು.
ರೈತರಿಗೆ ಮಾಹಿತಿ ಕೊರತೆ ಇದೆ; "ನಮ್ಮ ಕೊಪ್ಪಳ ಜಿಲ್ಲೆಯಲ್ಲಿಯೂ ರೇಷ್ಮೆ ಕೃಷಿಗೆ ಯೋಗ್ಯ ವಾತಾವರಣ ಇದ್ದು, ಈ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ರೇಷ್ಮೆ ಕೃಷಿಗಾಗಿ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು" ಎಂದು ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಕರೆ ನೀಡಿದರು.
"ರೇಷ್ಮೆ ಕೃಷಿ ಮೇಳದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ರೇಷ್ಮೆ ಕೃಷಿಯ ಕುರಿತು ಅರಿವು ಮೂಡಿಸುವುದರ ಜೊತೆಗೆ ರೇಷ್ಮೆ ಕೃಷಿಯತ್ತ ಅವರನ್ನು ಸೆಳೆಯುವಂತ ಕೆಲಸವಾಗಬೇಕು" ಎಂದರು.
ಕರ್ನಾಟಕ ಸರ್ಕಾರದ ರೇಷ್ಮೆ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ಎಂ. ಎನ್. ಸಿಂಧೆ ಮಾತನಾಡಿ, "ರೇಷ್ಮೆ ಕೃಷಿ ರೈತರಿಗೆ ಹೆಚ್ಚಿನ ಉತ್ಪಾದಕತೆ ಮತ್ತು ಆದಾಯ ನೀಡುತ್ತದೆ. ಉತ್ತಮ ಜೀವನ ನಡೆಸಲು ರೇಷ್ಮೆ ಕೃಷಿಯು ಅವಕಾಶ ಕಲ್ಪಿಸಿದೆ, ಬೇರೆ ಬೆಳೆಗಳಿಂತ ಹೆಚ್ಚಿನ ಆದಾಯ ರೇಷ್ಮೆ ಕೃಷಿಯಿಂದ ಪಡೆಯಬಹುದಾಗಿದೆ. ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ವಿಸ್ತರಣೆಗೆ ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು" ಎಂದರು.
ಈ ಮೇಳದಲ್ಲಿ 'ರೇಷ್ಮೆ ಹುಳುಗಳಲ್ಲಿ ರೋಗ ನಿರ್ವಹಣೆ', 'ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ನಿರ್ವಹಣೆ' ಸೇರಿದಂತೆ ವಿವಿಧ ಮಾಹಿತಿಯ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕೃಷಿ ಮೇಳದಲ್ಲಿ ಭಾಗವಹಿಸಿದ ರೇಷ್ಮೆ ಬೆಳೆಗಾರರೊಂದಿಗೆ ವಿಜ್ಞಾನಿಗಳು ಸಂವಾದ ನಡೆಸಿ ಕೃಷಿಯ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವಸ್ತು ಪ್ರದರ್ಶನ; ರೇಷ್ಮೆ ಕೃಷಿಗಾಗಿ ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಬಗ್ಗೆ, ರೇಷ್ಮೆ ಕೃಷಿ ಉತ್ಪನ್ನಗಳು, ಉಪಕರಣಗಳು, ಸಲಕರಣೆಗಳು ಹಾಗೂ ಮಾಹಿತಿ ಫಲಕಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ವಿವಿಧ ಜಿಲ್ಲೆಯ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.
ಮೇಳಕ್ಕೆ ಆಗಮಿಸಿದ್ದ ರೈತರು ಮಾತನಾಡಿ, ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡ ರೇಷ್ಮೆ ಕೃಷಿ ಮೇಳದಿಂದಾಗಿ ರೇಷ್ಮೆ ಬೆಳೆ ನಿರ್ವಹಣೆ, ಬಹುಪಯೋಗಿ ಸಲಕರಣೆಗಳು, ಔಷಧಿ ಬಳಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಿಳಿದುಕೊಂಡು ಉತ್ತಮವಾಗಿ ರೇಷ್ಮೆ ಕೃಷಿ ಮಾಡಲು ಅನುಕೂಲವಾಯಿತು ಎಂದರು.












Click it and Unblock the Notifications