ಫಸಲು ಉಳಿಯಬೇಕಂದ್ರೆ ಭದ್ರಾ ಡ್ಯಾಂನಿಂದ ನೀರು ಹರಿಸುವುದನ್ನು ನಿಲ್ಲಿಸಬಾರ್ದು: ದಾವಣಗೆರೆ ಜಿಲ್ಲೆ ರೈತರ ಆಗ್ರಹ

ದಾವಣಗೆರೆ, ಸೆಪ್ಟೆಂಬರ್‌, 22: ಭದ್ರಾ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರು ಹರಿಸುವಿಕೆ ಮುಂದುವರಿಸಲೇಬೇಕೆಂಬ ಪಟ್ಟು ಹಿಡಿದಿರುವ ದಾವಣಗೆರೆ ಜಿಲ್ಲೆಯ ರೈತ ಮುಖಂಡರು, ರೈತರು ಈ ಬೇಡಿಕೆಯಿಂದ ಹಿಂದೆ ಸರಿಯುವ ಲಕ್ಷಣ ಗೋಚರಿಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ತಡೆ ವೇಳೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯು ವಿಫಲವಾಗಿದ್ದು, ರೈತರು ಇಂದಿನಿಂದ ಹೋರಾಟ ಮುಂದುವರೆಸಲು ಸಜ್ಜಾಗಿದ್ದಾರೆ.

ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನೀರಾವರಿ ಬೆಳೆಗಳಿಗೆ ಮುಂಗಾರು ಹಂಗಾಮಿನಲ್ಲಿ ಬರ ಹಿನ್ನಲೆಯಲ್ಲಿ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಕಾಲುವೆಗಳಿಗೆ ನೀರು ಬಿಡಲಾಗುತ್ತಿದ್ದು, ಇದರಿಂದ ತೊಂದರೆಯಾಗಿದೆ ಎಂದು ಪ್ರತಿಭಟನೆ ಮಾಡಿದ ರೈತರೊಂದಿಗೆ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸುಧೀರ್ಘ ಸಭೆ ನಡೆಸಿದರು.

Should Release water from Bhadra Dam to save crops: Davanagere district farmers demand

ನೀರಾವರಿ ನಿಗಮದಿಂದ ನೀಡಿದ ಸಲಹೆಯನ್ನಾಧರಿಸಿ ಈ ವರ್ಷದ ಮಳೆಗಾಲದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಆದರೆ ಸೆಪ್ಟೆಂಬರ್ 6 ರಂದು ನಡೆದ ಕಾಡಾ ಸಭೆಯಲ್ಲಿ ಮಳೆ ಕೊರತೆಯಿಂದ ಜಲಾಶಯದಲ್ಲಿನ ನೀರಿನ ಸಂಗ್ರಹದ ಕೊರತೆಯಿಂದ ಮುಂಗಾರು ಹಂಗಾಮಿನಲ್ಲಿ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಎಡ, ಬಲದಂಡೆ ಕಾಲುವೆಗಳಿಗೆ ನೀರು ಬಿಡಲು ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಿ ನೀರು ಬಿಡಲಾಗುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಇದರಿಂದ ಭತ್ತದ ಬೆಳೆಯು ವಡೆಯ ಹಂತದಲ್ಲಿದ್ದರಿಂದ ಈ ಅವಧಿಯಲ್ಲಿ ನೀರು ಬಿಡಬೇಕಾಗಿರುವುದು ಮಹತ್ವವುಳ್ಳದ್ದಾಗಿದೆ ಎಂಬುದು ರೈತರ ಮನವಿಯಾಗಿದೆ.

ಪ್ರತಿ ಹೆಕ್ಟೇರ್‌ಗೆ ಭತ್ತ ನಾಟಿಗೆ ಕನಿಷ್ಠ 30 ರೂಪಾಯಿ ಸಾವಿರ ವೆಚ್ಚ ಮಾಡಲಾಗಿದ್ದು, ನೀರಾವರಿ ಇಲಾಖೆಯ ಸಲಹೆ ಮೇರೆಗೆ ಭತ್ತ ನಾಟಿ ಮಾಡಲಾಗಿದೆ. ಜಲಾಶಯದಲ್ಲಿ ಕುಡಿಯುವ, ಕೈಗಾರಿಕೆ ಉದ್ದೇಶ ಮತ್ತು ಡೆಡ್ ಸ್ಟೋರೇಜ್ ಹೊರತುಪಡಿಸಿ ನೀರಾವರಿಗೆ 22.89 ಟಿಎಂಸಿ ಲಭ್ಯವಿದ್ದು, ಮುಂದಿನ 60 ದಿನಗಳಲ್ಲಿ ನಿರಂತರವಾಗಿ ನೀರು ಹರಿಸಿದರೆ, ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ.

ಭತ್ತದ ಬೆಳೆ ಬಾರದಿದ್ದಲ್ಲಿ ಆರ್ಥಿಕ ನಷ್ಟ ಮತ್ತು ಮೇವಿನ ಕೊರತೆಯಾಗಲಿದ್ದು, ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಬೇಕೆಂದು ದಾವಣಗೆರೆ, ಹರಿಹರ, ಮಲೆಬೆನ್ನೂರು ಭಾಗದ ರೈತರು ಆಗ್ರಹಿಸಿದರು. ಆನ್ ಅಂಡ್ ಆಫ್ ವ್ಯವಸ್ಥೆಯಡಿ ನೀರು ಬಿಡುವುದರಿಂದ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದಾಗ ಕೊನೆಯ ಭಾಗದ ರೈತರಿಗೆ ಅದು ತಲುಪಲು ಕನಿಷ್ಠ 15 ದಿನಗಳು ಬೇಕಾಗುತ್ತದೆ. ಆದ್ದರಿಂದ ಈಗ ಕಾಲುವೆಗೆ 2600 ಕ್ಯೂಸೆಕ್ಸ್ ಹರಿಸಲಾಗುತ್ತಿತ್ತು. ಇದನ್ನು ಕಡಿಮೆ ಮಾಡಿದರೂ ಪರವಾಗಿಲ್ಲ, ಕಾಲುವೆಗಳಿಗೆ ನಿರಂತರವಾಗಿ ಹರಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ.

ಈ ಹಿಂದೆ ಮಳೆ ಕೊರತೆಯಿಂದ ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾದಾಗಲೂ ಸಹ ಮಳೆಗಾಲದಲ್ಲಿ ನೀರು ಹರಿಸಲಾಗಿತ್ತು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ಸಲಹಾ ಸಮಿತಿ ತೀರ್ಮಾನವನ್ನು ಪುನರ್ ಪರಿಶೀಲಿಸಿ ನೀರು ಬಿಡುಗಡೆ ಮಾಡಲು ಎಲ್ಲಾ ರೈತರು
ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಅವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿ, ವಸ್ತುಸ್ಥಿತಿಯಂತೆ ಪುನರ್ ಪರಿಶೀಲನೆ ನಡೆಸಿ ತುರ್ತಾಗಿ ರೈತರಿಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ತೀರ್ಮಾನವನ್ನು ಕೈಗೊಳ್ಳಲು ತಿಳಿಸಿ ಮಾನ್ಯ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿ ಸರ್ಕಾರಕ್ಕೆ ಎಲ್ಲಾ ಮಾಹಿತಿಯೊಂದಿಗೆ ವರದಿ ಕಳುಹಿಸಲಾಗುತ್ತದೆ ಎಂದರು.

ಅನಧಿಕೃತವಾಗಿ ಕಾಲುವೆಗಳಲ್ಲಿ ಪಂಪ್‍ಸೆಟ್ ಅಳವಡಿಸಿರುವ ಬಗ್ಗೆ ನೀರಾವರಿ ಇಲಾಖೆ, ಬೆಸ್ಕಾಂನಿಂದ ಪರಿಶೀಲನೆ ನಡೆಸಿ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿಕೊಂಡಿದ್ದಲ್ಲಿ ತೆರವಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಮತ್ತು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ರೈತರಿಗಾಗಿ ಬೀದಿಗಿಳಿದು ಹೋರಾಟ

ಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ರಾಜ್ಯ ಸರ್ಕಾರದ ಯಟವಟ್ಟಿಗೆ ಉತ್ತಮ ಉದಾಹರಣೆ. ಯಾವುದೇ ಸಬೂಬು ಹೇಳದೇ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಿರಿ. ಇಲ್ಲದೇ ಇದ್ದರೆ ರೈತರ ಹಿತಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.

ಈ ಹಿಂದೆ ಭದ್ರಾ ನಾಲೆಗೆ ನೀರು ಹರಿಸುವ ಸಂಬಂಧ ಕರೆಯಲಾಗಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಚಾಚೂತಪ್ಪದೇ ಪಾಲನೆ ಆಗಬೇಕು. ನೀರು ಹರಿಸುವ ಸಂಬಂಧ ಏನು ತೀರ್ಮಾನ ಕೈಗೊಳ್ಳಲಾಗಿತ್ತೋ ಆ ಆದೇಶವನ್ನು ಯಥಾವತ್ತು ಪಾಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಭದ್ರಾ ನಾಲೆಗಳಲ್ಲಿ ಸತತ 100 ದಿನಗಳ ಕಾಲ ನೀರು ಹರಿಸುವ ತೀರ್ಮಾನವನ್ನು ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ ಈಗ 40 ದಿನಗಳ ಕಾಲ ನೀರು ಹರಿಸಿ ನೀರು ನಿಲುಗಡೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.

ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು ಈಗ ರೈತರೆಲ್ಲಾ ಭತ್ತ ನಾಟಿ ಮಾಡಿ ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖುರ್ಚು ಮಾಡಿದ್ದಾರೆ. ಸುಮಾರು 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದೆ. ಇದಕ್ಕೆಲ್ಲಾ ರೈತರು ಖರ್ಚು ಮಾಡಿರುವ ಹಣ ಕಲ್ಪನೆ ಮಾಡಲಿಕ್ಕೂ ಅಸಾಧ್ಯವಾಗಿದೆ. ಇನ್ನು ಒಂದೂವರೆ ತಿಂಗಳು ನೀರು ಹರಿಸಿದರೆ ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ. ನೀರು ಹರಿಸದಿದ್ದರೆ ರೈತರ ಸ್ಥಿತಿ ಅಯೋಮಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಲೆಯಲ್ಲಿ ನೀರು ನಿಲ್ಲಿಸುವುದೊಂದೇ ಪರಿಹಾರವಲ್ಲ, ಅದರ ಬದಲಾಗಿ ಸರ್ಕಾರ ಭದ್ರಾ ಡ್ಯಾಂ ಕ್ಯಾಚ್‌ಮೆಂಟ್ ಏರಿಯಾಗಳಲ್ಲಿ ಮೋಡ ಬಿತ್ತನೆ ಮಾಡಲಿ. ಅದನ್ನು ಬಿಟ್ಟು ನೀರು ನಿಲ್ಲಿಸುವುದೊಂದನ್ನೇ ಮೊದಲನೇ ಆದ್ಯತೆಯಾಗಿ ಪರಿಗಣಿಸುವುದು ಬೇಡ. ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಲಿ. ಕೃಷಿಯ ಬಗ್ಗೆ ಅನುಭವವೇ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಕಾವೇರಿ ಮತ್ತು ಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಬೂಬು ಹೇಳದೇ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಿರಿ. ಇಲ್ಲದೇ ಇದ್ದರೆ ರೈತರ ಹಿತಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+