ಕೃಷಿ ಚಟುವಟಿಕೆಗಳಿಗೆ ತೊಂದರೆ ಆದ್ರೆ ಕ್ರಮ, ಮೈ ಮೇಲೆ ಎಚ್ಚರ ಇರಲಿ: ಅಧಿಕಾರಿಗಾರಿಗಳಿಗೆ ಸಿಎಂ ಖಡಕ್ ವಾರ್ನ್
ಮೈಸೂರು, ಜೂನ್, 11: ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು,ಅಧಿಕಾರಿಗಳು ರೈತರಿಗೆ ಗುಣಮಟ್ಟದ ಬೀಜ, ಅಗತ್ಯ ರಸಗೊಬ್ಬರದ ಕೊರತೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದರು.
ಹಾಗೆಯೇ ಫೀಲ್ಡ್ ವರ್ಕ್ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಇನ್ನು ಕಳಪೆ ಬೀಜ, ಬೆಳೆ ನಾಶದ ದೂರುಗಳು ಬಂದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಜನಸಾಮಾನ್ಯರ ಜೊತೆ ಸೌಜನ್ಯದಿಂದ ವರ್ತಿಸಿ, ಮಧ್ಯವರ್ತಿಗಳ ಹಾವಳಿ ಸಂಪೂರ್ಣ ಬಂದ್ ಮಾಡಿ. ಮುಂಗಾರು ಆರಂಭ ಆಗುತ್ತಿದ್ದಂತೆ ಕೃಷಿ ಚಟುವಟಿಕೆ ಚುರುಕಾಗುತ್ತದೆ. ಇದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಲೋಪಗಳಾದರೆ ನೀವೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ವರಿಕೆ ನೀಡಿದರು.
ನಾಡಿನ ಜನತೆ ಬದಲಾವಣೆ ಬಯಸಿ ಸರ್ಕಾರವನ್ನು ಬದಲಾಯಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ದಕ್ಷವಾಗಿ, ಚುರುಕಾಗಿ ಕೆಲಸ ಮಾಡಿ. ಹೆಚ್ಚು ಕಡಿಮೆ ಆದರೆ ನಿಮ್ಮಗಳ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯ ಆಗುತ್ತದೆ. ಕೆಡಿಪಿ ಸಭೆಗಳಿಗೆ ಸಂಪೂರ್ಣ ಫೀಲ್ಡ್ ವರ್ಕ್ ಮಾಡಿದ ವರದಿ ಸಮೇತ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಕೈ ಬೀಸಿಕೊಂಡು ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಕೃಷಿ ಕೆಲಸ ಇದ್ದಾಗ ರೈತರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡಬೇಡಿ. ಬೀಜ, ಗೊಬ್ಬರ, ಕೀಟನಾಶಕ ಅಗತ್ಯ ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಂಡು ರೈತರಿಗೆ ನೆರವಾಗಿ. ಯಾವುದಕ್ಕೂ ಹಣದ ಕೊರತೆ ಇಲ್ಲ. ನಿಮ್ಮಲ್ಲಿ ಕೊರತೆ ಇದ್ದರೆ ನಮಗೆ ಕೇಳಿ. ನಿಮ್ಮಿಂದ ಏನೇ ಲೋಪ ಆಗಿ ಬೆಳಗಳಿಗೆ ಮತ್ತು ರೈತರಿಗೆ ತೊಂದರೆ ಆದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿಗೆ ಪ್ರಥಮ ಆಧ್ಯತೆ ನೀಡಬೇಕು. ಕೊರತೆಯನ್ನು ಮೊದಲೇ ಅಂದಾಜಿಸಿ ಅಗತ್ಯ ನೆರವಿನ ನೀಲನಕ್ಷೆ ಸಿದ್ದಪಡಿಸಿಕೊಳ್ಳಿ. ನಿಮ್ಮ ಲೋಪದಿಂದ ಜನರಿಗೆ ಸಮಸ್ಯೆ ಆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲೆಯ ಎಲ್ಲಾ ಶಾಸಕರುಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು
1. ಕೆಡಿಪಿ ಸಭೆಗಳಿಗೆ ಒಂದು ದಿನ ಮುಂಚಿತವಾದರೂ ವರದಿಗಳನ್ನು ನೀಡಬೇಕು.
2. ಅಧಿಕಾರಿಗಳು ಕಡ್ಡಾಯವಾಗಿ ಫೀಲ್ಡ್ ವರ್ಕ್ ಮಾಡಬೇಕು.
3. ಬರೀ ಕಚೇರಿಯಲ್ಲಿ ಕುಳಿತು ವರದಿ ಸಿದ್ದಪಡಿಸಬಾರದು.
4. ಎಸ್‌ಪಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳು ಬಿಗಿಯಾಗಿದ್ದರೆ ನಿಮ್ಮ ಕೆಳಗಿನ ಅಧಿಕಾರಿಗಳು ಜವಾಬ್ದಾರಿಯಿಂದ ಇರುತ್ತಾರೆ. ನೀವೇ ಮೈಗಳ್ಳರಾದರೆ ಕೆಳಗಿನವರು ಸೋಮಾರಿಗಳಾಗುತ್ತಾರೆ. ಠಾಣಾಧಿಕಾರಿ ಗಮನಕ್ಕೆ ಬಾರದಂತೆ ಠಾಣೆ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ, ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಪೊಲೀಸರ ಬಗ್ಗೆ ರೌಡಿಗಳಿಗೆ ಭಯ ಇಲ್ಲದಿದ್ದರೆ ಪೊಲೀಸರು ಇದ್ದರೇನು, ಬಿಟ್ಟರೇನು? ಎಂದು ಕ್ಲಾಸ್ ತೆಗೆದುಕೊಂಡರು.
5. ತಹಶೀಲ್ದಾರ್ ಕಚೇರಿಗಳಲ್ಲಿ ಎಷ್ಟು ಲಂಚ ನಡೆಯುತ್ತಿದೆ, ರೈತರಿಗೆ ಎಷ್ಟು ಗೋಳಾಡಿಸುತ್ತಿದ್ದಾರೆ ಎನ್ನುವುದು ಗೊತ್ತಾ ಜಿಲ್ಲಾಧಿಕಾರಿಗಳೇ?. ಕಳೆದ ವರ್ಷ ಬೆಳೆ ಹಾನಿ ಆದ ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ವಿತರಿಸಬೇಕು. ತಾಂತ್ರಿಕ ಸಮಸ್ಯೆ ಕಾರಣದಿಂದ ಯಾರಿಗಾದರೂ ಪರಿಹಾರ ದೊರಕದಿದ್ದರೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಪರಿಹಾರ ವಿತರಿಸಿ. ಹಾಗೆಯೆ ಗುಣಮಟ್ಟದ ಬೀಜ ಮತ್ತು ಅಗತ್ಯ ರಸಗೊಬ್ಬರ ಸಂಗ್ರಹ ಇರಬೇಕು ಎಂದು ಸೂಚಿಸಿದರು.
6. ಜೂನ್ ಆರಂಭದಲ್ಲಿ ಬರಬೇಕಾದ ಮಳೆ ಬಂದಿಲ್ಲ. ಇದರಿಂದ ಕುಡಿಯುವ ನೀರು ಮತ್ತು ಬೆಳೆಗೆ ನೀರು ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿ.
7. ಮಳೆ ಬರುವವರೆಗೆ ಬೆಳೆಗಳಿಗೆ ಅಗತ್ಯ ನೀರು ಒದಗಿಸಿ, ಬೆಳೆ ನಷ್ಟ ಆಗದಂತೆ ಕ್ರಮ ವಹಿಸಿ. ಪ್ರಥಮ ಆಧ್ಯತೆ ಕುಡಿಯುವ ನೀರಿಗೆ ಒದಗಿಸಿ. ಪ್ರತಿ ದಿನ ನೀರಿನ ಪ್ರಮಾಣದ ಮೇಲೆ ನಿಗಾ ವಹಿಸಿ. ಒಟ್ಟಿನಲ್ಲಿ ಕುಡಿಯುವ ನೀರಿಗೆ ಕೊರತೆ ಆಗದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಗ್ಯಾರಂಟಿಗಳನ್ನು ಬಡವರಿಗೆ ತಲುಪಿಸಿ
ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ಕಡಿಮೆ ಆಗಲಿ ಎಂದು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದ್ದರಿಂದ ಅತ್ಯಂತ ಕಾಳಜಿವಹಿಸಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಖಡಕ್ ಸೂಚನೆ ನೀಡಿದರು.
ಅಧಿಕಾರಿಕಾರಿಗಳಿಗೆ ಖಡಕ್ ಸಂದೇಶ
ಇನ್ನು ಮುಡಾಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಿನಿಂದ ಆಗಿರುವ ತೀರ್ಮಾನಗಳನ್ನು ತಡೆ ಹಿಡಿಯಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದರು.
ಕೆಡಿಪಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಗಾರು ವಿಳಂಬ ಆಗಿರುವುದರಿಂದ ಕುಡಿಯುವ ನೀರು, ಬಿತ್ತನೆ ಮಾಡಿರುವ ಬೆಳೆಗಳ ರಕ್ಷಣೆ ಮಾಡಲು ಸೂಚಿಸಲಾಗಿದೆ. ಮಂಗಳೂರು, ಉಡುಪಿ, ರಾಯಚೂರು, ಕೊಪ್ಪಳಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಿಳಿಸಲಾಗಿದೆ ಎಂದರು.
ಇನ್ನು ಮೈಸೂರಿನಲ್ಲಿ ನೀರಿನ ತೊಂದರೆ ಆದರೆ ಸೂಕ್ತ ಯೋಜನೆ ತಯಾರು ಮಾಡಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ ಅಧಿಕಾರಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಿರಿಯ ಅಧಿಕಾರಿಗಳು ಕೆಳಗಿನ ಕಚೇರಿಗಳಿಗೆ ಆಗಾಗ್ಗೆ ಭೇಟಿ ನೀಡಿ, ಕ್ಷೇತ್ರ ಭೇಟಿಯನ್ನೂ ಮಾಡಲು ಸೂಚಿಸಲಾಗಿದೆ ಎಂದರು.
ಮತ್ತೊಮ್ಮೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಕೆಡಿಪಿ ಸಭೆ ನಡೆಸಲಿದ್ದಾರೆ. ದಸರಾ ಪ್ರಾಧಿಕಾರ ರಚನೆಗೆ ಉನ್ನತ ಮಟ್ಟದ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಕಾವೇರಿ ನೀರು ತಮಿಳುನಾಡಿಗೆ ನೀಡಲು ನಮ್ಮ ಬಳಿ ನೀರಿಲ್ಲ. ನೀರು ಕೊಡಬಾರದು ಎಂದೇನಿಲ್ಲ. ಆದರೆ ನಮಗೇ ನೀರಿನ ಕೊರತೆ ಆಗಿದೆ ಎಂದರು.












Click it and Unblock the Notifications