ಉತ್ತರ ಕನ್ನಡದ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಮಳೆ ಕೊರತೆ, ಬಿಸಿಲ ಧಗೆಗೆ ಬಾಯ್ತೆರೆದ ಭೂಮಿ, ತಾಲೂಕುವಾರು ಮಾಹಿತಿ

ಕಾರವಾರ, ಸೆಪ್ಟೆಂಬರ್‌, 06: ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಶೇಕಡಾ 70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆಯಾಗಿದ್ದು, ನಾಟಿ ಮಾಡಿದ್ದ ಬೆಳೆ ಫಸಲು ಬರುವ ಮುನ್ನವೇ ಭೂಮಿ ಬಾಯ್ತೆರೆದು ಅನ್ನದಾತರ ಆತಂಕ ಹೆಚ್ಚಿಸಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ 67,719 ಹೆಕ್ಟೇರ್ ಕೃಷಿ ಭೂಮಿ ಪೈಕಿ 65,566 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ ಸೇರಿದಂತೆ ಪ್ರಮುಖ ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ ಜುಲೈ ತಿಂಗಳಲ್ಲಿ ಶೇಕಡಾ 22ರಷ್ಟಿದ್ದ ಮಳೆ ಕೊರತೆ ಇದೀಗ ಶೇಕಡ 72ಕ್ಕೆ ಏರಿಕೆಯಾಗಿದೆ. ಅದರಲ್ಲಿಯೂ ಜಿಲ್ಲೆಯ ಶಿರಸಿಯಲ್ಲಿ ಶೇಕಡಾ 73, ಯಲ್ಲಾಪುರದಲ್ಲಿ ಶೇಕಡಾ 78, ಹಳಿಯಾಳ ಶೇಕಡಾ 83, ಮುಂಡಗೋಡ ಶೇಕಡಾ 78ರಷ್ಟು ಮಳೆ ಕೊರತೆಯಾಗಿರುವುದು ಈ ಭಾಗದ ರೈತರ ಆತಂಕ ಹೆಚ್ಚಿಸುವಂತೆ ಮಾಡಿದೆ.

Shortage of Rain: 70 percent rain shortage in Uttara Kannada district

ಮುಂಗಾರು ಆರಂಭದಲ್ಲಿ ಮಳೆಯಾಗದೆ ಇದ್ದರೂ, ಬಳಿಕ ಸುರಿದ ಮಳೆಯಿಂದಾಗಿ ಬೀಜ ಬಿತ್ತನೆ ಮಾಡಿ ಜಿಲ್ಲೆಯಾದ್ಯಂತ ನಾಟಿ ಕಾರ್ಯ ಮಾಡಿದ್ದ ರೈತರು ಮಳೆಯ ನಿರೀಕ್ಷೆಯಲ್ಲಿಯೇ ಕೃಷಿ ಚಟುವಟಿಕೆ ಮುಗಿಸಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಮಳೆ ಸಂಪೂರ್ಣ ಮಾಯವಾಗಿದೆ. ಪರಿಣಾಮ ಎಲ್ಲೆಡೆ ಕೃಷಿ ಭೂಮಿ ಒಣಗಿ ಗದ್ದೆಗಳು ಬಾಯ್ತೇರೆದುಕೊಂಡಿದೆ. ಇದರಿಂದ ಭತ್ತ, ಮುಸುಕಿನ ಜೋಳ, ಕಬ್ಬು ಹೀಗೆ ಜಿಲ್ಲೆಯ ಪ್ರಮುಖ ಬೆಳೆಗಳು ನೀರಿಲ್ಲದೆ ಸೊರಗುವಂತಾಗಿದೆ.

ಸರ್ಕಾರ ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಮಳೆ ಕೊರತೆಯಾಗಿದ್ದರಿಂದ ಅಧ್ಯಯನ ನಡೆಸಿ ಬರ ಪೀಡಿತ ಪ್ರದೇಶಗಳೆಂದು ಘೊಷಣೆ ಮಾಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಶೇಕಡಾ 97ರಷ್ಟು ಬಿತ್ತನೆ ಕಾರ್ಯ ನಡೆದರೂ ಆಗಸ್ಟ್‌ನಲ್ಲಿ ಮಳೆ ಪ್ರಮಾಣದಲ್ಲಿ ಶೇಕಡಾ 70ರಷ್ಟು ಕೊರತೆಯಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಸೂಚನೆಯಂತೆ ಸದ್ಯ ಅತೀ ಹೆಚ್ಚು ಮಳೆ ಕೊರತೆಯಾಗಿರುವ ಶಿರಸಿ, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ಬೆಳೆ ನಷ್ಟದ ನೆಲಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಮೂರು ತಾಲೂಕುಗಳಲ್ಲಿಯೂ ಶೇಕಡಾ 33ರಿಂದ ಶೇಕಡಾ 50ಕ್ಕೂ ಹೆಚ್ಚು ಫಸಲು ನಷ್ಟವಾಗಿರುವುದು ಕಂಡುಬಂದಿದೆ. ಈ ಪ್ರಕಾರ ಈಗಾಗಲೇ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಅವರು ಮಾಹಿತಿ ನೀಡಿದ್ದಾರೆ.

ಇನ್ನು ಈ ಮೂರು ತಾಲೂಕುಗಳಲ್ಲದೆ ಇತರೆ ತಾಲೂಕುಗಳಲ್ಲಿಯೂ ಇದೇ ರೀತಿ ಬೆಳೆ ಹಾನಿಯಾಗಿದೆ. ಈ ಪ್ರದೇಶಗಳಲ್ಲಿಯೂ ನೆಲಹಾಸಿನ ವಸ್ತುಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆಯಾ ತಾಲೂಕಿನ ಶೇಕಡಾ 10 ಪ್ರದೇಶಗಳಲ್ಲಿ ವಸ್ತು ಸ್ಥಿತಿಯನ್ನು ಅಧ್ಯಯನ ನಡೆಸಿ ಮೊಬೈಲ್ ಆಪ್ ಮೂಲಕ ಈ ಪೈಕಿ ಅತೀ ಹೆಚ್ಚು ಹಾನಿಗೊಳಗಾದ 5 ಪ್ರದೇಶಗಳ ಮಾಹಿತಿಯನ್ನು ಪೋಟೊ ಸಹಿತ ಅಪಲೋಡ್ ಮಾಡಿ ಮಾಹಿತಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿತ್ತನೆ ವೇಳೆಗೆ ಮಳೆ ಕೊರತೆಯಾಗಿ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಬಳಿಕ ಸ್ವಲ್ಪ ಮಳೆಯಾಗಿದ್ದರಿಂದ ನಾಟಿ ಕಾರ್ಯ ನಡೆಸಿದ್ದರು. ಆದರೆ ಹೀಗೆ ನಾಟಿ ಮಾಡಿದ ವಾರದಲ್ಲಿಯೇ ಮಳೆ ಕಡಿಮೆಯಾಗಿ ಇದೀಗ ಸಂಪೂರ್ಣವಾಗಿ ಮಳೆ ನಿಂತುಹೋಗಿದೆ. ಫಸಲು ಬರುವ ಹೊತ್ತಿಗೆ ಗದ್ದೆಗಳಲ್ಲಿ ಭೂಮಿ ಬಿರುಕು ಬಂದಿದ್ದು ಬೆಳೆ ನಷ್ಟವಾಗಿದೆ. ಕೂಡಲೇ ಸರ್ಕಾರ ಮಳೆ ಕೊರತೆಯಿಂದ ತೊಂದರೆಯಾಗಿರುವ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸಿದ್ದಾಪುರದ ಕೃಷಿಕ ಮಹೇಶ್ ನಾಯ್ಕ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+