ಶಿವಮೊಗ್ಗದ ತುಂಗಾ ನದಿ ನೀರಿನಲ್ಲಿ ವಿದ್ಯುತ್ ಪ್ರವಾಹ
ಶಿವಮೊಗ್ಗ, ಮೇ 31: ಜಿಲ್ಲೆಯಲ್ಲಿನ ಅನೇಕ ಅಣೆಕಟ್ಟೆಗಳಲ್ಲಿ ಅನೇಕ ವರ್ಷಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದೀಗ ತುಂಗಾ ನದಿಯೂ ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿದೆ.
ಗಮಮನಾರ್ಹವೆಂದರೆ ತುಂಗಾ ನದಿ ಇದುವರೆಗೂ ಸ್ಥಳೀಯರ ರೈತರ ಜೀವನಾಡಿಯಾಗಿತ್ತು. ಆದರೆ ಇನ್ನೆರಡು ವಾರದಲ್ಲಿ ತುಂಗಾ ಮತ್ತೊಂದು ಪಾತ್ರ ನಿರ್ವಹಿಸಲಿದ್ದು, ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ.
ಸಾಮಾನ್ಯವಾಗಿ ಮಲೆನಾಡು ಉತ್ತಮ ಮಳೆ ಕಾಣುತ್ತದೆ. ಸಕಾಲಿಕವಾಗಿ ಮುಂಗಾರು ಆಗಮಿಸುತ್ತದೆ. ಹಾಗಾಗಿ ಜೂನ್ 15ರ ವೇಳೆಗೆ ಉತ್ತಮ ಮಳೆಯಾಗಿ, ತುಂಗಾ ಅಣೆಕಟ್ಟೆ ಭರ್ತಿಯಾದರೆ ತಕ್ಷಣ ವಿದ್ಯುತ್ ಉತ್ಪಾದನೆ ಕಾರ್ಯ ಆರಂಭವಾಗಲಿದೆ. ಆದರೆ ಮೊದಲು ನೀರಾವರಿ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಿ, ನಂತರದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಿಡಲಾಗುವುದು ಎನ್ನುತ್ತಾರೆ KNNL ಇಂಜಿನಿಯರ್ ಯೋಗೀಶ್.
ಇದುವರೆಗಿನ ಮಳೆ ಪ್ರಮಾಣವನ್ನು ನೋಡಿದರೆ ಪ್ರತಿ ವರ್ಷ ಅಣೆಕಟ್ಟೆಯಲ್ಲಿ ಜೂನ್ ತಿಂಗಳಿಂದ ಡಿಸೆಂಬರ್ ವರೆಗೂ ನೀರು ಸಂಗ್ರಹಣೆಯಿರುತ್ತದೆ. ಈ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದು.

ಬೆಂಗಳೂರಿನ ಬೃಂದಾವನ್ ಹ್ರೈಡ್ರೋ ಪವರ್ ಲಿಮಿಟೆಡ್ (Brindavan Hydro Power Pvt Ltd) ಎಂಬ ಖಾಸಗಿ ಸಂಸ್ಥೆಯು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ (KNNL)ಗೆ ಸೇರಿದ ಜಾಗದಲ್ಲಿ 120 ಕೋಟಿ ರೂ ವೆಚ್ಚದಲ್ಲಿ ಈ ವಿದ್ಯುತ್ ಯೋಜನೆಯನ್ನು ಸ್ಥಾಪಿಸಿದೆ. (ವಿದ್ಯುತ್ತಿಗಾಗಿ 5100 ಕೋಟಿ ರೂ ಕಾಮಗಾರಿ: ಡಿಕೆಶಿ)
ಶಿವಮೊಗ್ಗದ ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮತಿ ನೀಡಲಾಗಿತ್ತು. ಆದರೆ ಮುಂದೆ ತೆವಳುತ್ತಾ ಸಾಗಿದ ಯೋಜನೆಯು ಒಂದು ತಿಂಗಳ ಹಿಂದೆ ಪೂರ್ಣಗೊಂಡಿದೆ.
ಕಂಪನಿಯು ಒಟ್ಟು ಮೂರು ಘಟಕಗಳಲ್ಲಿ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಸರಕಾರವು ಕಂಪನಿಯ ಜತೆ 30 ವರ್ಷಗಳ ಒಪ್ಪಂದ ಹೊಂದಿದೆ. ಆ ನಂತರ ಸ್ಥಾವರವು ಸರಕಾರದ ಅಧೀನಕ್ಕೆ ಒಳಪಡಲಿದೆ. ಕಂಪನಿಯು ಈಗಾಗಲೇ ಗಾಜನೂರು ಉಪಘಟಕದವರೆಗೂ 1.6 ಕಿಮೀ ಉದ್ದದ 11 ಕೆವಿ ಸಾಮರ್ಥ್ಯದ ವಿದ್ಯುತ್ ಸಾಗಣೆ ಮಾರ್ಗವನ್ನು ಅಳವಡಿಸಿದೆ.











Click it and Unblock the Notifications