ಖಾತೆ ಕ್ಯಾತೆ: ದೆಹಲಿಗೆ ಹಾರಿದ ಸಚಿವ ಶಾಮನೂರು!
ಕೋಲಾರ, ಸೆ.25: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ತಮ್ಮ ಸಚಿವ ಖಾತೆ ಬಗ್ಗೆ ಹೊಂದಿರುವ ಅತೃಪ್ತಿ ತೀವ್ರ ಸ್ವರೂಪ ಪಡೆದಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಮನೂರು ಜತೆ ಮಾತನಾಡುವೆ ಎಂದು ಹೇಳಿದ್ದರು.
ಆದರೆ ಅಷ್ಟಕ್ಕೆ ತಫ್ತರಾಗದ ಶಾಮನೂರು ಇಂದು ಬುಧವಾರ ಸೀದಾ ದೆಹಲಿಗೆ ಹೊರಟಿದ್ದಾರೆ. ಅಲ್ಲಿ ಹೈಕಮಾಂಡ್ ಅನ್ನು ಭೇಟಿಯಾಗಿ ಖಾತೆ ಬದಲಾವಣೆ ಮಾಡಿಸಿಕೊಂಡು ಬರುವ ಇರಾದೆ ಹೊಂದಿದ್ದಾರೆ.
ಹಿಂದಿನ ಸುದ್ದಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮತ್ತೆ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ. ಆದರೆ ಇದಕ್ಕೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯರಾದ ಶಾಮನೂರು ಜತೆ ಮಾತನಾಡಿ, ಸಮಸ್ಯೆಗೆ ಪರಿಹಾರ ಸೂಚಿಸುವೆ ಎಂದು ಹೇಳಿದ್ದಾರೆ.
ಎಪಿಎಂಸಿ ಮಾರುಕಟ್ಟೆ, ತೋಟಗಾರಿಕೆ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪ (82) ಅವರು ನಿನ್ನೆ ಚಿತ್ರದುರ್ಗದಲ್ಲಿ 'ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಹಾಗೂ ಮಾರುಕಟ್ಟೆ ಇಲಾಖೆಗಳು ಕೆಲಸಕ್ಕೆ ಬಾರದಂತಹವು' ಎಂದು ಗಂಭೀರವಾಗಿ ಹೇಳಿದ್ದರು.

ಕೃಷಿ ಕ್ಷೇತ್ರಕ್ಕೆ ಬಜೆಟ್ ಬಜೆಟ್ ನಲ್ಲಿ ರಾಜ್ಯ ಸರಕಾರವು ಸಾವಿರಾರು ಕೋಟಿ ರೂ ಅನುದಾನ ತೆಗೆದಿರಿಸಿದ್ದರೂ ಸಚಿವರ ದೃಷ್ಟಿಯಲ್ಲಿ ಕೃಷಿ ಖಾತೆ ಕೆಲಸಕ್ಕೆ ಬಾರದವು! ನನ್ನ ಬಳಿ ಕೆಲಸಕ್ಕೆ ಬಾರದ ಖಾತೆಗಳಿದ್ದು ಅವುಗಳಿಗೆ ಜೀವ ತುಂಬುವ ಕಾಯಕದಲ್ಲಿ ತೊಡಗಿದ್ದೇನೆ ಎಂದು ಹಿರಿಯ ಸಚಿವರಾದ ಶಾಮನೂರು ಶಿವಶಂಕರಪ್ಪ ತಮ್ಮ ಅತೃಪ್ತಿ ತೋಡಿಕೊಂಡಿದ್ದರು.
ಇದನ್ನು ಕೇಳಿ ವೇದಿಕೆಯಲ್ಲಿದ್ದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು 'ಸಚಿವರ ಮಾತಿನ ಅರ್ಥವೇನು? ಕೆಲಸಕ್ಕೆ ಬಾರದ ಖಾತೆ ಅಂದರೆ ದುಡ್ಡು ಮಾಡಲು ಆಗದಂತಹವುಗಳು ಎಂದರ್ಥವೇ' ಎಂದು ನೇರವಾಗಿ ಪ್ರಶ್ನಿಸಿದರು.
ಶಾಮನೂರು ಶಿವಶಂಕರಪ್ಪ ಅಂದ್ರೆ ಕೊಡುಗೈ ದಾನಿಗಳು. ನಿಮ್ಮಂಥಹವರು ರಾಜಕೀಯದಲ್ಲಿ ದುಡ್ಡು ಮಾಡೋ ಅಗತ್ಯವಿಲ್ಲ. ತೋಟದಲ್ಲಿ ಸುತ್ತಾಡಿ ಒಳ್ಳೆಯ ಗಾಳಿ ಸೇವಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ. ತೋಟಗಾರಿಕೆಯನ್ನು ಕೆಲಸಕ್ಕೆ ಬಾರದ ಇಲಾಖೆ ಅಂತ ಮಾತ್ರ ಕರೀಬೇಡಿ' ಎಂದು ಶ್ರೀಗಳು ಸಚಿವರನ್ನುದ್ದೇಶಿಸಿ ಹಿತವಚನ ನುಡಿದರು.












Click it and Unblock the Notifications