ಹಿಂಗಾರು ಹಂಗಾಮು ಬಿತ್ತನೆ; ಬೀಜೋಪಚಾರಕ್ಕೆ ರೈತರಿಗೆ ಸಲಹೆಗಳು
ಧಾರವಾಡ, ಅಕ್ಟೋಬರ್ 26: ಈ ವರ್ಷ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಈಗ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.
ಧಾರವಾಡ ಜಿಲ್ಲೆಯಲ್ಲಿ ಧಾರವಾಡ, ಅಣ್ಣೀಗೇರಿ, ನವಲಗುಂದ ತಾಲೂಕುಗಳ ಕೆಲವು ಭಾಗಗಳಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿರುವುದರಿಂದ ಮತ್ತು ಜಿಲ್ಲೆಯ ಇತರ ತಾಲೂಕುಗಳಲ್ಲಿ ಹಿಂಗಾರು ಬಿತ್ತನೆ ಪ್ರಾರಂಭವಾಗಿದ್ದು, ರೈತರು ಮುಖ್ಯ ಬೆಳೆಗಳಾದ ಕಡಲೆ, ಜೋಳ, ಗೋದಿ ಹಾಗೂ ಕುಸುಬೆ ಬಿತ್ತನೆ ಮಾಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಬೀಜೋಪಚಾರದ ಮೂಲಕ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣ ಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಡಲೆ, ಗೋಧಿ, ಕುಸುಬೆ ಮತ್ತು ಜೋಳ ಬಿತ್ತನೆ ಪೂರ್ವದಲ್ಲಿ ಬೀಜೋಪಚಾರವನ್ನು ನಿಯಮಾನುಸಾರ ಮಾಡಬೇಕು. ಬೀಜೋಪಚಾರ ಮಾಡಿ ಬೀಜಗಳನ್ನು ಬಿತ್ತುವುದರಿಂದ ರೋಗಪೀಡಿತವಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.
ಬೀಜೋಪಚಾರಕ್ಕೆ ಸಲಹೆಗಳು, ಕಡಲೆ ಬೆಳೆ: ಪ್ರತಿ ಕಿ. ಗ್ರಾಂ. ಕಡಲೆ ಬೀಜಕ್ಕೆ 4 ಮಿ. ಲೀ ರೈಝೋಬಿಯಂ, ಎಸ್.ಬಿ 120 ಮತ್ತು 4 ಮಿ. ಲೀ ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು ಬಿತ್ತನೆ ಮಾಡುವಾಗ ಬೀಜಕ್ಕೆ ಉಪಚರಿಸಬೇಕು. ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ.2 ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ.25 ರ ಗೋಮೂತ್ರದಲ್ಲಿ 8 ಗಂಟೆಗಳ ಕಾಲ ನೆನೆಸಿ, ಕನಿಷ್ಠ 7 ಘಂಟೆ ನೆರಳಿನಲ್ಲಿ ಒಣಗಿಸಿ ಬೀಜವನ್ನು ಕಠಿಣಗೊಳಿಸಿ ನಂತರ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿಯಿಂದ ಉಪಚರಿಸಬೇಕು. ಬಿತ್ತನೆಯ ಸಮಯದಲ್ಲಿ ಎಕರೆಗೆ 8 ಕಿ. ಗ್ರಾಂ ಮೈಕೊರೈಜಾ ಜೈವಿಕ ಗೊಬ್ಬರವನ್ನು 200 ಕಿ. ಗ್ರಾಂ ಎರೆಹುಳು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಬಿತ್ತನೆಯ ಸಾಲಿನ ಮಣ್ಣಿನಲ್ಲಿ ಹಾಕಿ ಬೆರೆಸಬೇಕು.
ಕಡಲೆಯಲ್ಲಿ ನಟೆ ರೋಗ, ಸಿಡಿ ರೋಗ, ಸೊರಗು ರೋಗ ತಡೆಗಟ್ಟಲು ಪ್ರತಿ ಕಿ. ಗ್ರಾಂ ಬೀಜಕ್ಕೆ 2 ಗ್ರಾಂ. ಕ್ಯಾಪ್ಟಾನ್ 80 ಡಬ್ಲೂ.ಪಿ ಅಥವಾ ಥೈರಾಮ್ 75 ಡಬ್ಲೂ.ಪಿ ಅಥವಾ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 3.5 ಗ್ರಾಂ (ಕಾರ್ಬನಡೈಜಿಮ್ + ಮ್ಯಾಂಕೋಜೆಬ್) ಅಥವಾ 4 ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರದಿಂದ ಬೀಜೋಪಚಾರ ಮಾಡಬೇಕು.
ಗೋದಿ ಬೆಳೆ; ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು ದ್ರವ ರೂಪದ 80 ಮಿ. ಲೀ ಅಝೋಸ್ಫಿರಿಲಂ ಹಾಗೂ 80 ಮಿ. ಲೀ. ದ್ರವ ರೂಪದ ರಂಜಕ ಕರಗಿಸುವ ಜೈವಿಕ ಗೊಬ್ಬರದಿಂದ ಉಪಚರಿಸಿ, ಬಿತ್ತನೆ ಮಾಡುವ ಮೊದಲು ರಸಗೊಬ್ಬರಗಳೆಲ್ಲವನ್ನೂ 6-8 ಸೆಂ.ಮೀ ಆಳದ ಸಾಲುಗಳಲ್ಲಿ ಮಣ್ಣಿನಲ್ಲಿ ಬೆರೆಸಿ, 23 ಸೆಂ.ಮೀ ಅಂತರದ ಸಾಲಿನಲ್ಲಿ ಬಿತ್ತನೆ ಮಾಡಬೇಕು. ಅಲ್ಲದೇ, ಬಿತ್ತನೆಯ ಸಮಯದಲ್ಲಿ ಎಕರೆಗೆ 8 ಕಿ. ಗ್ರಾಂ ಮೈಕೋರೈಜಾ ಜೈವಿಕ ಗೊಬ್ಬರವನ್ನು 200 ಕಿ.ಗ್ರಾಂ ಎರೆಹುಳು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಬಿತ್ತನೆಯ ಸಾಲಿನ ಮಣ್ಣಿನಲ್ಲಿ ಹಾಕಿ ಬೆರೆಸಬೇಕು.
ಜೋಳದ ಬೆಳೆ; ಪ್ರತಿ ಕಿ. ಗ್ರಾಂ ಬೀಜಕ್ಕೆ ಕನಿಷ್ಠ 4 ಮಿ.ಲೀ ಅಝೋಸ್ಫಿರಿಲಂ ಮತ್ತು 4 ಮಿ.ಲೀ ದ್ರವ ರೂಪದ ರಂಜಕ ಕರಗಿಸುವ ಜೈವಿಕ ಗೊಬ್ಬರ ಬಿತ್ತನೆ ಮಾಡುವಾಗ ಬೀಜಕ್ಕೆ ಉಪಚರಿಸಬೇಕು. ಬೀಜೋಪಚಾರದ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ ಬೀಜವನ್ನು 1.5 ಲೀ ನೀರಿನಲ್ಲಿ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ 7.5 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಬೆರೆಸಿದ ಅಥವಾ ಗೋಮೂತ್ರ (ಶೇ. 25) ಬೆರೆಸಿದ ದ್ರಾವಣದಲ್ಲಿ 8 ಘಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದು.
ಕುಸುಬೆ ಬೆಳೆ; ಬಿತ್ತುವ ಪೂರ್ವದಲ್ಲಿ ಬೀಜವನ್ನು ಶೇ.2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ (1.0 ಲೀ ನೀರಿನಲ್ಲಿ 20 ಗ್ರಾಮ ಕ್ಯಾಲ್ಸಿಯಂ ಕ್ಲೋರೈಡ್) 12 ಘಂಟೆಗಳ ಕಾಲ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಪ್ರಮಾಣ ಅಧಿಕವಾಗುವುದು. ನಂತರ ಪ್ರತಿ ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು 200 ಗ್ರಾಂ ಅಝೋಸ್ಫಿರಿಲಂ ಜೀವಾಣುವಿನಿಂದ ಉಪಚರಿಸಿ ಬಿತ್ತಬೇಕು. ಅದಲ್ಲದೇ ಸತುವಿನ ಸಲ್ಪೇಟ್ 6 ಕಿ.ಗ್ರಾಂ ಅನ್ನು ಬಿತ್ತುವಾಗ ಪುಡಿ ಮಾಡಿದ ಕೊಟ್ಟಿಗೆ ಗೊಬ್ಬರದ ಜೊತೆಗೆ ಸಮಪ್ರಮಾಣದಲ್ಲಿ ಬೆರೆಸಿ, ಪ್ರತ್ಯೇಕವಾದ ಎಳೆಶಡ್ಡಿ ಮುಖಾಂತರ ಮಣ್ಣಿನಲ್ಲಿ ಬೆರೆಸಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.












Click it and Unblock the Notifications