ಸೈನಿಕ ಹುಳು ನಿಯಂತ್ರಣ: ರೈತರಿಗೆ ಸಾಮಾನ್ಯ ಸಲಹೆ ಕೊಟ್ಟ ವಿಜ್ಞಾನಿಗಳು
ಶಿವಮೊಗ್ಗ, ಜೂನ್ 16: ಪರ್ಯಾಯ ಬೆಳೆ ಪದ್ಧತಿ, ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಜ್ಞಾನಿ ಡಾ. ಶರಣಬಸಪ್ಪ ಎಸ್. ದೇಶಮುಖ್ ಹೇಳಿದ್ದಾರೆ.
ಮುಸುಕಿನ ಜೋಳದಲ್ಲಿ ಸೈನಿಕ ಹುಳು ಹಾಗೂ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಕುರಿತು ಮತ್ತು ಬೆಳೆ ವಿಮೆ ಯೋಜನೆ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಹಾಗೂ ಇ-ಆಡಳಿತ ಕರ್ನಾಟಕ ಸರ್ಕಾರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಸುಮಾರು 8 ಸಾವಿರ ರೈತರಿಗೆ ದೂರವಾಣಿ ಕರೆ ಮೂಲಕ ಮುಸುಕಿನ ಜೋಳದಲ್ಲಿ ಸೈನಿಕ ಹುಳು ಹಾಗೂ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು. ಡಾ. ಶರಣಬಸಪ್ಪ ಎಸ್. ದೇಶಮುಖ್ ಮಾತನಾಡಿ, 2018 ರಿಂದ ಈಚೆಗೆ ಮುಸುಕಿನಜೋಳ ಬೆಳೆಯಲ್ಲಿ ಪಾಲ್ ಸೈನಿಕ ಹುಳುವಿನ ಬಾಧೆ ಹೆಚ್ಚಾಗಿದೆ ಎಂದರು.
ಇಳುವರಿ ನಷ್ಟಮಾಡುವ ಬಾಧೆ: ಮಾಗಿ ಉಳುಮೆ, ಬೇಗ ಬಿತ್ತನೆ, ಪರ್ಯಾಯ ಬೆಳೆ ಪದ್ಧತಿ ಹಾಗೂ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳನ್ನು ನಿಯಂತ್ರಣ ಮಾಡಬಹುದು ಎಂದರು. ಈ ಹುಳುವು 20-25 ದಿನಗಳ ಜೀವನ ಚಕ್ರ ಹೊಂದಿದ್ದು, ಏಕ ಬೆಳೆಯಲ್ಲೇ ಇದರ ಮೂರು ಹಂತಗಳು (ಮೊಟ್ಟೆ/ ಮರಿಹಳು/ ಪ್ರೌಡ ಚಿಟ್ಟೆ) ಕಾಣಿಸಿಕೊಂಡು ಎಲೆಗಳನ್ನು, ಸುಳಿಗಳನ್ನು ತಿಂದು ರಂಧ್ರಗಳನ್ನು ಮಾಡಿ ಹಿಕ್ಕೆಗಳನ್ನು ಎಲೆಯ ಮೇಲೆಯ ಬಿಡುತ್ತದೆ.
ಬೆಳೆಯ 45 ದಿನಗಳವರೆಗೆ ಈ ಹುಳು ಕಾಣಿಸಿಕೊಂಡು ಶೇ.70-80 ರವರೆಗೆ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ರೈತರು ಪರ್ಯಾಯ ಬೆಳೆ ಪದ್ಧತಿ ರಸಾಯನಿಕ ಸಿಂಪರಣೆ ಮೂಲಕ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಡಾ. ಶರಣಬಸಪ್ಪ ಎಸ್. ದೇಶಮುಖ್ ಹೇಳಿದರು.
ಬೇಸಾಯ ಶಾಸ್ತ್ರಜ್ಞ ಹೊನ್ನಪ್ಪ ಮಾತನಾಡಿ, "ಮುಸುಕಿನ ಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಬಹಳ ಮುಖ್ಯ. ಬಿತ್ತನೆಯಾದ 3 ದಿನಗಳೊಳಗೆ ಅಟ್ರಜಿನ್ 50 WP ಯನ್ನು 1.5 ಕೆ.ಜಿ/ ಒಂದು ಎಕರೆಗೆ ಅಥವಾ ಪೆಂಡಿಮಕಾಲೀನ್ 400 ಎಂ.ಎಲ್/ ಒಂದು ಎಕರೆಗೆ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡವುದು. ಹಾಗೆಯೇ 25 ದಿನಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ವಹಣೆ ಮಾಡಬಹುದು" ಎಂದು ಮಾಹಿತಿ ನೀಡಿದರು.
ಸುಮಾರು 1 ಗಂಟೆಯವರೆಗೆ ನಡೆದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕಿನ 8 ಸಾವಿರ ಜನ ರೈತರು ತಾಂತ್ರಿಕ ಮಾಹಿತಿಯನ್ನು ಆಲಿಸಿ ಕೊನೆಯಲ್ಲಿ ವಿಜ್ಞಾನಿಗಳಿಗೆ ಪ್ರಶ್ನೆಗಳನ್ನು ಕೇಳಿ ಸಮಗ್ರ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಮುಸುಕಿನ ಜೋಳಕ್ಕೆ ಶಿಫಾರಸ್ಸು ಮಾಡಲಾಗಿರುವ ರಸಗೊಬ್ಬರಗಳ ಕುರಿತು ಹಾಗೇಯೇ ಬೆಳೆ ವಿಮೆ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರು ಡಿಎಪಿ ಗೊಬ್ಬರ ಒಂದರ ಮೇಲೆ ಅವಲಂಬಿತರಾಗದೆ ಪರ್ಯಾಯಾವಾಗಿ ಸಂಯುಕ್ತ ರಸಗೊಬ್ಬರಗಳಾದ 15:15:15, 20:20:0:13, 10:26:26, 19:19:19 ಇತ್ಯಾದಿ ಬಳಕೆ ಮಾಡುವುದು ಸೂಕ್ತ.
ಹಾಗೇಯೇ ಪ್ರತಿಕೂಲ ಹವಾಮಾನದಲ್ಲಿ ರೈತರಿಗೆ ಕೈಹಿಡಿಯುತ್ತಿರುವ ಬೆಳೆ ವಿಮೆ ಯೋಜನೆಯನ್ನು ಸರ್ಕಾರ ಮುಂದುವರೆಸಿದೆ. ರೈತರು ಕೂಡಲೇ ಬೆಳೆ ವಿಮೆ ಯೋಜನೆಗೆ ನೊಂದಣಿ ಮಾಡಿಕೊಳ್ಳಬೇಕು. ಮುಸುಕಿನಜೋಳ ಬೆಳೆ ವಿಮೆ ಪ್ರಾರಂಭವಾಗಿದ್ದು ಜುಲೈ ತಿಂಗಳ 31ರೊಳಗೆ ನೋಂದಣಿ ಮಾಡಿಸಬೇಕು ಎಂದು ರೈತರಿಗೆ ಮಾಹಿತಿ ನೀಡಲಾಯಿತು.












Click it and Unblock the Notifications