ಕೊಡಗು ಜಿಲ್ಲೆಯ ಕೃಷಿಕರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ
ಮಡಿಕೇರಿ, ಫೆಬ್ರವರಿ 06: ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಸಾಗುವಳಿ ಮಾಡುವವರಿಗೆ ಆರ್‌ಟಿಸಿ ಮಾಡಿಕೊಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯವನ್ನು ಶೀಘ್ರವೇ ಆರಂಭಿಸಲಿದ್ದಾರೆ.
ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ. ಮಡಿಕೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಅವರು ಸುದೀರ್ಘವಾಗಿ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಜಿಲ್ಲೆಯಲ್ಲಿ ಹಲವು ದಶಕಗಳಿಂದ ಜಮ್ಮಾಬಾಣೆ ಭೂಮಿ ಸರ್ವೆ ಮಾಡಲು ಬಾಕಿ ಇದ್ದು, ಆ ನಿಟ್ಟಿನಲ್ಲಿ ಸಾಗುವಳಿ ಮಾಡುವವರಿಗೆ ಪಹಣಿ ಮಾಡಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗುವಂತೆ" ಸೂಚಿಸಿದರು.
"ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್‌ಟಿಸಿ ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್‌ಟಿಸಿ ಮಾಡಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳುವಂತೆ" ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮೀಕ್ಷೆ ನಡೆಸಲು ಸೂಚನೆ: "ಕೊಡಗು ಜಿಲ್ಲೆಯಲ್ಲಿ 25 ಸಾವಿರ ಜನರು ಜಮ್ಮಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್‌ಟಿಸಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳುವಂತೆ" ಕಂದಾಯ ಸಚಿವರು ತಿಳಿಸಿದರು.
"ಜಮ್ಮಾಬಾಣೆ ಭೂಮಿ ಸಂಬಂಧ ತಕರಾರು ಇಲ್ಲದಿದ್ದಲ್ಲಿ ನೇರವಾಗಿ ಸರ್ವೆ ಮಾಡಬಹುದಾಗಿದೆ. ತಕರಾರು ಇದ್ದಲ್ಲಿ ಗ್ರಾಮ ಸಭೆಯಲ್ಲಿ ಇಟ್ಟು ಗ್ರಾಮಸ್ಥರ ಸಹಕಾರ ಪಡೆಯಬಹುದಾಗಿದೆ. ಇದನ್ನು ಆಂದೋಲನ ರೂಪದಲ್ಲಿ ಕೈಗೊಳ್ಳಬೇಕಿದ್ದು, ತಹಶೀಲ್ದಾರ್‌ರು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ತಂಡವು ಸಮರೋಪಾದಿಯಲ್ಲಿ ಕೈಗೊಳ್ಳಬೇಕು" ಎಂದರು.
"ಸರ್ವೇ ಮಾಡಲು ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು. ಪರವಾನಗಿ ಇರುವ ಸರ್ವೇ ಮಾಪಕರನ್ನು ಬಳಸಿಕೊಂಡು ಸರ್ವೇ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು. ಜಮ್ಮಾ ಭೂಮಿಯನ್ನು ಸರ್ವೇ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಸಂಬಂಧ ಡ್ರಾಫ್ಟ್ ಸಿದ್ಧಪಡಿಸಿ ಕಳುಹಿಸಿಕೊಡಬೇಕು, ನಂತರ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು" ಎಂದು ಸಚಿವರು ತಿಳಿಸಿದರು.
"ಹೆಚ್ಚಿನ ಸರ್ವೇಯರ್‌ಗಳನ್ನು ಒದಗಿಸುವುದರ ಜೊತೆಗೆ ಆಧುನಿಕ ಪರಿಕರಗಳನ್ನು ಒದಗಿಸಲಾಗುವುದು. ಆ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಕಂದಾಯ ಇಲಾಖೆ ಬೇರೆ, ಸರ್ವೇ ಇಲಾಖೆ ಬೇರೆ ಎಂಬುದು ಮನಸ್ಸಿನಿಂದ ತೆಗೆದುಹಾಕಬೇಕು. ಇಬ್ಬರು ಸಹ ಜಂಟಿ ಅಭಿಯಾನ ಕೈಗೊಳ್ಳಬೇಕು" ಎಂದರು.
"ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಉಪ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಹೀಗೆ ಎಲ್ಲರೂ ತಂಡವಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆಯನ್ನು ಬಗೆ ಹರಿಸಬಹುದು. ಗ್ರಾಮ ಸಭೆಯ ಸಂದರ್ಭದಲ್ಲಿ ನಡವಳಿಗೆ ಸಹಿ ಮಾಡಿಸಿಕೊಳ್ಳಬೇಕು. ಸಮಸ್ಯೆಗಳನ್ನು ಪೂರ್ಣಗೊಳಿಸಿ ಮುನ್ನಡೆಯಬೇಕು" ಎಂದರು.
"ಕೊಡಗು ಜಿಲ್ಲೆಯ ಕೃಷಿಕರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಪರಿಹಾರ ಕಲ್ಪಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಭೂಮಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿದೆ. ಆ ನಿಟ್ಟಿನಲ್ಲಿ ಕಳೆದ ಆರೇಳು ತಿಂಗಳಲ್ಲಿ ಬಾಕಿ ಸಮಸ್ಯೆಗಳನ್ನು ಇತ್ಯರ್ಥ ಮಾಡದಿರುವುದಕ್ಕೆ ನೂರಾರು ನೆಪ ಹೇಳಬಹುದು. ಸಮಸ್ಯೆ ಬಗೆಹರಿಸುವುದು ಒಂದೇ ಪರಿಹಾರ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕು. ಜೊತೆಗೆ ಬದ್ಧತೆಯನ್ನು ಪ್ರದರ್ಶಿಸಬೇಕು" ಎಂದು ಸಚಿವರು ಕರೆ ನೀಡಿದರು.












Click it and Unblock the Notifications