ಒಣ ಭೂಮಿ ಕೃಷಿ ಬಗ್ಗೆ ಸಂಶೋಧನೆ ಆಗಬೇಕು; ಸಿಎಂ

ಧಾರವಾಡ, ಸೆಪ್ಟೆಂಬರ್ 10; "ಇಂದು ಶೇ 60ರಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವುದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ. ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿದರು. ಕೃಷಿ ಸಚಿವ ಎನ್. ಚಲುರಾಯಸ್ವಾಮಿ, ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

dharwad-krishi-mela-2023

ಸಿದ್ದರಾಮಯ್ಯ ಮಾತನಾಡಿ, "ಯುವಕರು ಹೆಚ್ಚುಜನ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ವಿವಿಗಳು ಕಾರ್ಯ ಮಾಡಬೇಕು. ವಿಶ್ವವಿದ್ಯಾಲಯದ ಸಂಶೋಧನೆ, ತಾಂತ್ರಿಕತೆಗಳು ರೈತರ ಜಮೀನುಗಳಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ. ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯುವಂತೆ ಆಕರ್ಷಕವಾಗಿ ಸಂಘಟಿಸಬೇಕು" ಎಂದರು.

ಲ್ಯಾಬ್ ಟು ಲ್ಯಾಂಡ್ ಪ್ರಯೋಗ; "ಒಣ ಬೇಸಾಯ ಮಾಡುವ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಒಣಬೇಸಾಯ ಮಾಡಲು ಅಗತ್ಯ ಸುಧಾರಿತ ಹೊಸ ತಳಿಗಳ ಸಂಶೋಧನೆ ಮಾಡಬೇಕು. ಬಿತ್ತಿದ ಯಾವುದೇ ಮುಖ್ಯ ಬೆಳೆ ಹಾಳಾದರೆ, ಅದಕ್ಕೆ ಪರ್ಯಾಯವಾದ ತಕ್ಷಣದ ಬೆಳೆಗಳನ್ನು ಮಾಡಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಆಸಕ್ತಿ ವಹಿಸಿ, ಸಂಶೋಧನೆ ಮಾಡಬೇಕು" ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

"ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ. ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೊಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವುದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮವಹಿಸಲಾಗಿದೆ" ಎಂದು ತಿಳಿಸಿದರು.

"ಕೋರಮಂಗಲ ಚಲ್ಲಘಟ್ಟ (ಕೆಸಿ) ವ್ಯಾಲಿ ಮೂಲಕ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ, ನೀರಾವರಿಗೆ ಅನುಕೂಲ ಮಾಡಲಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ.3 ರಷ್ಟು ಬಡ್ಡಿ ನಿಗದಿಗೊಳಿಸಿ, ಕ್ರಮಕೈಗೊಳ್ಳಲಾಗಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಮಹದಾಯಿ ಯೋಜನೆ; ಮುಖ್ಯಮಂತ್ರಿಗಳು ಮಹದಾಯಿ ಯೋಜನೆ ಬಗ್ಗೆ ಮಾತನಾಡಿದರು. "ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭ" ಎಂದು ತಿಳಿಸಿದರು.

"ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

"ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಿರಿಧಾನ್ಯಕ್ಕೆ ಸಹಾಯಧನ; ಕೃಷಿ ಸಚಿವ ಎನ್. ಚಲುರಾಯಸ್ವಾಮಿ ಮಾತನಾಡಿ, "ರೈತರು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ರಾಜ್ಯ ಸರಕಾರ ಅನೇಕ ಯೋಜನೆ ಜಾರಿಗೊಳಿಸಿದೆ" ಎಂದರು.

"ಈ ವರ್ಷ ಸಿರಿಧಾನ್ಯ ಅಂತರಾಷ್ಟ್ರೀಯ ವರ್ಷವಾಗಿರುವುದರಿಂದ ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ. ಕಬ್ಬು ಹಾಗೂ ಇತರ ಬೆಳೆಗಳ ಕಟಾವು ತಾಂತ್ರಿಕತೆ ಸುಧಾರಣೆಗಾಗಿ ಐಟಿ ಹಬ್ ಸ್ಥಾಪನೆಗೆ ರಾಜ್ಯ ಸರಕಾರ ರೂ.50 ಕೋಟಿ ಮೀಸಲಿಡಲಾಗಿದೆ. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳು ಕೊರತೆ ಅಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮಾಡಲಾಗಿದೆ" ಎಂದು ಹೇಳಿದರು.

"ಮಳೆ ಕೊರತೆಯಿಂದಾಗಿ ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎಂದು ಸರಕಾರ ಘೋಷಿಸಲಿದೆ" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+