ಕುಸಿದ ವೇದಿಕೆಯಿಂದ ಉರುಳಿ ಬಿದ್ದ ಟಿಕಾಯತ್, ರೈತ ಮುಖಂಡರು: ವಿಡಿಯೋ
ಚಂಡೀಗಡ, ಫೆಬ್ರವರಿ 3: ಹರ್ಯಾಣದ ಜಿಂದ್ ಮಹಾಪಂಚಾಯತ್‌ನಲ್ಲಿ ರೈತ ಮುಖಂಡರು ಭಾಷಣಕ್ಕಾಗಿ ನಿಂತಿದ್ದ ವೇದಿಕೆ ಕುಸಿದು, ಮುಖಂಡರು ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ. ಭಾರಿ ಜನರು ವೇದಿಕೆ ಮೇಲೆ ಸೇರಿದ್ದರಿಂದ ಅದು ಕುಸಿದಿದೆ. ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಸೇರಿದಂತೆ ಅನೇಕ ರೈತ ಮುಖಂಡರು ನೆರೆದಿದ್ದ ವೇದಿಕೆ ಕುಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಳೆದ ಕೆಲವು ದಿನಗಳಿಂದ ಅನೇಕ ಸ್ಥಳಗಳಲ್ಲಿ ಮಹಾಪಂಚಾಯತ್ ಕಾರ್ಯಕ್ರಮಗಳು ನಡೆಯುತ್ತಿವೆ. ಹರ್ಯಾಣದಲ್ಲಿ ಖಂಡೇಲಾ ಗ್ರಾಮದ ಕ್ರೀಡಾ ಮೈದಾನದಲ್ಲಿ ಖಾಪ್ ಮುಖಂಡರು ರೈತರ ಪ್ರತಿಭಟನೆಯ ಭವಿಷ್ಯದ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಿದ್ದರು. ಹರ್ಯಾಣದಲ್ಲಿ ಇದು ಮೊದಲ ಕೃಷಿ ಮಹಾಪಂಚಾಯತ್ ಆಗಿದೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಉದ್ದೇಶಿತ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿ ಭಾರಿ ವಿವಾದ ಸೃಷ್ಟಿಯಾದ ಬಳಿಕ ಪಂಚಾಯತ್‌ಗಳಿಂದ ರೈತರಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಮುಜಫ್ಫರ್‌ಪುರ, ಮಥುರಾ ಮತ್ತು ಬಾಘಪಟ್‌ಗಳಲ್ಲಿ ಕೆಲವು ದಿನಗಳಿಂದ ಮಹಾಪಂಚಾಯತ್ ನಡೆಯುತ್ತಿದ್ದು, ಜಿಂದ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮೊದಲ ಬಾರಿಗೆ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು. ಮುಂದೆ ಓದಿ.
|
ಊಹೆಗೂ ಮೀರಿದ ಜನರ ದಂಡು
ಆರಂಭದಲ್ಲಿ 50,000 ಜನರು ಸೇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಟಿಕಾಯತ್ ಅವರು ಆಗಮಿಸಿದ್ದರಿಂದ ನಿರೀಕ್ಷೆಗೂ ಮೀರಿ ಜನರು ಸೇರಿಕೊಂಡರು. ಇದರಿಂದ ಸ್ಥಳದ ಸಾಮರ್ಥ್ಯಕ್ಕಿಂತಲೂ ಹೆಚ್ಚು ಮಂದಿ ಗುಂಪುಗೂಡಿದ್ದರು. ಇದರಿಂದ ವೇದಿಕೆ ಕುಸಿದಿರಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಸಭೆ ನಡೆಸಲು ಮೋದಿ, ಶಾಗೆ ಕರೆ
ಬಳಿಕ ಸಾವರಿಸಿಕೊಂಡ ರೈತ ಮುಖಂಡರು ತಮ್ಮ ಸಭೆ ಮುಂದುವರಿಸಿದರು. ಸಾವಿರಾರು ರೈತರ ಸಮ್ಮುಖದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಐದು ಅಂಶಗಳ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ರೈತ ಒಕ್ಕೂಟಗಳ ಜತೆಗೆ ಮಾತುಕತೆಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕರೆ ನೀಡುವಂತೆ ನಿರ್ಧಾರ ಕೈಗೊಳ್ಳಲಾಯಿತು.

ಪ್ರಮುಖ ನಿರ್ಣಯಗಳು
ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆಗೆ ಸಾಂವಿಧಾನಿಕ ಖಾತರಿ, ಸ್ವಾಮಿನಾಥನ್ ವರದಿ ಜಾರಿ, ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತರ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳನ್ನು ಕೈಬಿಡುವುದು ಮತ್ತು ಅವರ ಬಿಡುಗಡೆಗೆ ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ನಾಯಕತ್ವ ಬದಲಿಸುವುದಿಲ್ಲ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ಇಲ್ಲವೇ 40 ಸದಸ್ಯರ ರೈತ ಒಕ್ಕೂಟಗಳ ನಾಯಕತ್ವದ ಪ್ರತಿಭಟನೆ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಲಾಯಿತು. ನೀವು ಮಧ್ಯದಲ್ಲಿ ಸರ್‌ಪಂಚ್‌ರನ್ನು ಬದಲಿಸಿದಂತೆ ನಾವು ಹೋರಾಟದ ಮಧ್ಯಭಾಗದಲ್ಲಿ ನಮ್ಮ ನಾಯಕತ್ವವನ್ನು ಬದಲಿಸುವುದಿಲ್ಲ. ಮುಂದಿನ ನಡೆಯ ಬಗ್ಗೆ ಸಮಿತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಟಿಕಾಯತ್ ಹೇಳಿದರು.












Click it and Unblock the Notifications