ಮೈಸೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನ, ಕಬ್ಬು ಬೆಳೆಗಾರರು ಪೊಲೀಸರ ವಶಕ್ಕೆ
ಚಾಮರಾಜನಗರ, ನವೆಂಬರ್, 09: ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನಲ್ಲಿ ಇಂದು (ನವೆಂಬರ್ 09) ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಚಾಮರಾಜನಗರದ ಕಬ್ಬು ಬೆಳೆಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು (ನವೆಂಬರ್ 09) ಕಬ್ಬಿನ ಬಾಕಿ ಪಾವತಿ, ಸಮರ್ಪಕ ವಿದ್ಯುತ್ ಪೂರೈಕೆ, ಬರ ಪರಿಹಾರ ಹಣ ಬಿಡುಗಡೆ, ಕೆರೆಕಟ್ಟೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಈ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಹಾಲಿನ ನಾಗರಾಜ್, ಅರ್ಲಿಕಟ್ಟೆ ಕುಮಾರ್, ಉಡಿಗಾಲ ಮಂಜುನಾಥ್, ಮಹದೇವಸ್ವಾಮಿ, ಕಿಳಲೀಪುರ ವೆಂಕಟಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು, ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರರ ರೈತರ ಕಳೆದ ವರ್ಷದ ಬಾಕಿ ಪಾವತಿ ಕೊಡಬೇಕು. ಸರ್ಕಾರದ ಆದೇಶದಂತೆ ಪ್ರತಿ ಟನ್‌ಗೆ 150 ರುಪಾಯಿಯಂತೆ ಮೈಸೂರು, ಚಾಮರಾಜನಗರ ಜಿಲ್ಲೆಯ ಹಲವು ರೈತರಿಗೆ 25 ಕೋಟಿ ಹೆಚ್ಚು ಹಣ ಬಾಕಿ ಬರಬೇಕು. ಸ್ವ ಕ್ಷೇತ್ರದಲ್ಲಿ ರೈತರಿಗೆ 25 ಕೋಟಿಗೂ ಅಧಿಕ ಹಣವನ್ನು ರೈತರಿಗೆ ಕೊಡಿಸುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕೃಷಿಗೆ ಸಮರ್ಪಕ ವಿದ್ಯುತ್ತನ್ನು 10 ಗಂಟೆ ನಿರಂತರ ಕೊಡುವಲ್ಲಿ ವಿಫಲರಾಗಿದ್ದು, ಕೃಷಿಗೆ ಈಗ 5 ತಾಸು ಮಾತ್ರ ವಿದ್ಯುತ್ ಪುರೈಕೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹಾಗೂ ಬರಪೀಡಿತ ಪ್ರದೇಶವೆಂದು ಘೋಷಣೆಯನ್ನು ಮಾಡಿ ಗೋ ಶಾಲೆ ಅಥವಾ ಜಾನುವಾರುಗಳಿಗೆ ಮೇವು ಬ್ಯಾಂಕ್ ಆಗಲಿ ಪ್ರಾರಂಭಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಬರದಿಂದ ನಷ್ಟಕ್ಕೆ ಒಳಗಾಗಿರುವ ರೈತರ ಖಾತೆಗಳಿಗೆ ಯಾವುದೇ ಪರಿಹಾರವನ್ನು ಜಮಾ ಮಾಡಬೇಕು. ಆದರೆ ಬರ ಎಂದು ಘೋಷಣೆ ಮಾಡಿ ಕೈ ಕಟ್ಟಿ ಕುಳಿತಿದೆ ಸರ್ಕಾರ. ಮತ್ತೊಂದೆಡೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟು ರಾಜ್ಯದ ಅಚ್ಚುಕಟ್ಟು ಭಾಗದ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದರು.
ಸರ್ಕಾರ ಬರದ ನಷ್ಟ ಪರಿಹಾರವನ್ನು ಕೊಡದೆ ಮೌನವಾಗಿದೆ. ಬರವಿರುವ ಜಿಲ್ಲೆಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷಿ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು ಎಂದು ಒತ್ತಾಯಿಸಿ ಮೈಸೂರಿನ ಮುಖ್ಯಮಂತ್ರಿ ಮನೆ ಮುಂದೆ ನಿರಂತರ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಹೆದ್ದಾರಿಯಲ್ಲಿ ಚಿಂದಿ ಬಟ್ಟೆ ಸುರಿದು ಆಕ್ರೋಶ
ಮತ್ತೊಂದೆಡೆ ಚಾಮರಾಜನಗರದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಇಂದು 60ನೇ ದಿನದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಳೇ ಬಟ್ಟೆ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಚಿಂದಿ ಬಟ್ಟೆಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ರ‍್ಯಾಲಿ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಾವೇರಿ ನೀರನ್ನು ಹರಿಸುತ್ತಿರುವ ಸರ್ಕಾರ ಹಳೇ ಬಟ್ಟೆ ಸರ್ಕಾರವಾಗಿದೆ, ಅನ್ಯಾಯದ ಆದೇಶ ಕೊಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಲಿ ಚಿಂದಿ ಸಮಿತಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕ್ರಮವನ್ನು ಖಂಡಿಸಿ 60 ದಿನಗಳಿಂದ ಹೋರಾಟ ಮಾಡಿಕೊಂಡು ಬದಲಾಗುತ್ತಿದೆ. ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವ ತನಕ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಚಿಂದಿ ಬಟ್ಟೆ ಸುರಿದು ಆಕ್ರೋಶ ಹೊರಹಾಕಿದರು.
ಕಾವೇರಿ ಜಲಾಶಯಗಳ ಕೊಳ್ಳದಲ್ಲಿ ನೀರು ಬರಿದಾಗುತ್ತಿದ್ದರೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮೌನವಾಗಿದೆ. ತಮಿಳುನಾಡು ಸರ್ಕಾರ ಪದೇಪದೇ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ತೀಟೆ ತೀರಿಸಿಕೊಳ್ಳುತ್ತಿದೆ.
ಕರ್ನಾಟಕ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳಿಸಿಕೊಳ್ಳದ ಕಿವುಡು ಸರ್ಕಾರ ನಮ್ಮದಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಚಾ.ರಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು ಸೇರಿದಂತೆ ಇನ್ನಿತರರು ಇದ್ದರು.












Click it and Unblock the Notifications