ಪೂರ್ವ ಮುಂಗಾರು ಮಳೆ: ರೈತರಿಗೆ ಭೂಮಿ ಸಿದ್ಧತೆಗೆ ಸೂಚನೆಗಳು
ಬೆಂಗಳೂರು, ಮೇ 15: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಬರಗಾಲದಿಂದ ತ್ತರಿಸಿದ್ದ ರೈತರು ಮಳೆಯಿಂದಾಗಿ ಸಂತಸಗೊಂಡಿದ್ದಾರೆ. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧತೆಯನ್ನು ಕೈಗೊಂಡಿದ್ದಾರೆ.
ಕೃಷಿ ಇಲಾಖೆಯು ಪ್ರಕಟಣೆಯ ಮೂಲಕ ಪೂರ್ವ ಮುಂಗಾರು ಅವಧಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ ಎಂದು ಹೇಳಿದೆ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ ಎಂದು ರೈತರಿಗೆ ಸಲಹೆಗಳನ್ನು ನೀಡಿದೆ.

ರೈತ ಬಾಂಧವರು ಮೇ ತಿಂಗಳಿನಲ್ಲಿ ಎಂ.ಬಿ ನೇಗಿಲಿನಿಂದ ಹೊಲವನ್ನು ಉಳುಮೆ ಮಾಡಬೇಕು. ಇದರಿಂದ ಮಣ್ಣು ಸಡಿಲಗೊಂಡು ಕೆಳಗಡೆ ಇರುವಂತಹ ಸಮೃದ್ಧವಾದ ಪೋಷಕಾಂಶಯುಕ್ತ ಮಣ್ಣು ಮೇಲ್ಬಾಗಕ್ಕೆ ಬರುತ್ತದೆ ಎಂದು ಇಲಾಖೆ ತಿಳಿಸಿದೆ.
ಸೂರ್ಯನ ಕಿರಣಗಳ ಶಾಖಕ್ಕೆ ಒಳಗಾಗುವುದರಿಂದ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದುತ್ತದೆ. ಉಳುಮೆ ಮಾಡಿದ ಮಣ್ಣು ಸೂಕ್ಷ್ಮ ಜೀವಿಗಳಿಗೆ ಹಾಗೂ ರೈತನ ಮಿತ್ರ ಎರೆಹುಳುಗಳ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ತಿಳಿಸಿದೆ.
ಕೆಲವು ಸಲಹೆಗಳು: ರೈತರು ಮಾಗಿ ಉಳುಮೆ ಮಾಡುವುದರಿಂದ ಕಳೆಗಳ ಹತೋಟಿ ಮಾಡಬಹುದು ಮತ್ತು ಮಣ್ಣಿನಲ್ಲಿ ಅವಿತಿರುವಂತಹ ಕೀಟ ಹಾಗೂ ಅವುಗಳ ತತ್ತಿಗಳು ಮತ್ತು ಕೋಶಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಂಡು ಅವುಗಳ ಸಂತತಿ ಕಡಿಮೆ ಆಗುತ್ತದೆ ಮತ್ತು ಸಮರ್ಪಕವಾಗಿ ಹತೋಟಿ ಆಗುತ್ತದೆ ಎಂದು ಇಲಾಖೆ ಹೇಳಿದೆ.
ಮಾಗಿ ಉಳುಮೆ ಮಾಡುವ ಮೊದಲು ರೈತರು ತಮ್ಮ ಹೊಲಗಳಿಗೆ ಹೆಕ್ಟೆರಿಗೆ 10 ಟನ್‍ಗಳಷ್ಟು ಕೊಟ್ಟಿಗೆ ಅಥವಾ ಸಗಣಿ ಗೊಬ್ಬರವನ್ನು ಸಮನಾಗಿ ಹರಡಿ ನಂತರ ನೇಗಿಲಿನಿಂದ ಉಳುಮೆ ಮಾಡಿ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬಹುದು ಎಂದು ಸಲಹೆ ನೀಡಲಾಗಿದೆ.
ಭಾರತದಲ್ಲಿ ಸುರಿಯವು ನೈಋತ್ಯ ಮುಂಗಾರು ಮಳೆ (ಜೂನ್‌ನಿಂದ ಸೆಪ್ಟೆಂಬರ್) ದೇಶದ ಕೃಷಿ ಚಟುವಟಿಕೆಗಳಿಗೆ ಅತಿ ಮುಖ್ಯವಾಗಿದೆ. ಭತ್ತ, ಗೋಧಿ ಸೇರಿದಂತೆ ವಿವಿಧ ಬೆಳೆಗಳನ್ನು ಮುಂಗಾರು ಅವಧಿಯಲ್ಲಿಯೇ ದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈಗ ಪೂರ್ವ ಮುಂಗಾರು ಮಳೆ ಸುರಿಯುತ್ತಿರುವ ಕಾರಣ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.
ಮುಂಗಾರು ಹಂಗಾಮು ಆರಂಭಕ್ಕೂ ಮೊದಲು ಕೃಷಿ ಇಲಾಖೆ ಎಲ್ಲಾ ಜಿಲ್ಲೆಯಲ್ಲಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇರುವಂತೆ ನೋಡಿಕೊಳ್ಳುತ್ತದೆ. ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಣೆ ಮಾಡಲು ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಉತ್ತಮ ಮುಂಗಾರು ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲು ಮತ್ತು ನಿಗದಿತ ಗುರಿಯನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಕೃಷಿ ಜಮೀನುಗಳಲ್ಲಿ ಶೇಕಡ 100ರಷ್ಟು ಬಿತ್ತನೆಯಾಗುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ.
ಮುಂಗಾರು ಹಂಗಾಮಿಗೆ ಅಗತ್ಯವಾದ ವಿವಿಧ ರಸೊಬ್ಬರಗಳ ದಾಸ್ತಾನು ಮಾಡಲಾಗುತ್ತದೆ. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ಕೀಟ/ ರೋಗ ಬಾಧೆಗೆ ಅವಶ್ಯವಾದ ಕೀಟನಾಶಕಗಳನ್ನು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿರುತ್ತದೆ.
ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಯನ್ನು ರೈತರೇ ಸ್ವಯಂ ಪ್ರೇರಿತವಾಗಿ ತಮ್ಮ ಮೊಬೈಲ್‍ನಲ್ಲಿಯೇ ಬೆಳೆ ಸಮೀಕ್ಷೆ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಬೆಳೆದ ಬೆಳೆಯ ಮಾಹಿತಿ ಹಾಗೂ ಛಾಯಾಚಿತ್ರ, ಸರ್ವೆ ನಂಬರ್ ಮತ್ತು ಹಿಸ್ಸಾವರು, ಮಿಶ್ರ ಬೆಳೆ ಬೆಳೆದಿದ್ದಲ್ಲಿ ಮಿಶ್ರ ಬೇಸಾಯದ ವಿವರಗಳನ್ನು ನಮೂದು ಮಾಡಬೇಕು.
ಈ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ,ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತು ಪಡೆದುಕೊಳ್ಳಲು ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ 2024ರ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications