ಕಲಬುರಗಿ; ಬೆಳೆ ವಿಮೆಯ ಬೆಳೆಗಳು, ಕಡೆ ದಿನಾಂಕದ ವಿವರ
ಕಲಬುರಗಿ, ಜುಲೈ 14; ಕಲಬುರಗಿ ಜಿಲ್ಲೆಯ ರೈತರಿಗೆ ಬೆಳೆ ವಿಮೆಯ ಕುರಿತು ಮಾಹಿತಿ ನೀಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ಬೆಂಗಳೂರಿನ ಯುನಿವರಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ ಕಂಪನಿ ಲಿ. ವಿಮಾ ಸಂಸ್ಥೆಯಾಗಿ ನಿಗದಿಪಡಿಸಲಾಗಿದೆ.
ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ 2023ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲಾಗಿದ್ದು, ಜೇವರ್ಗಿ ಮತ್ತು ಯಡ್ರಾಮಿ ಎಲ್ಲಾ ರೈತರು ವಿಮೆ ಕಂತು ಪಾವತಿಸಿ ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ.

ಮುಂಗಾರು ಹಂಗಾಮಿಗೆ ತೊಗರಿ (ಮಳೆ ಆಶ್ರಿತ), ತೊಗರಿ (ನೀರಾವರಿ), ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಉದ್ದು (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.
ಯಾವ-ಯಾವ ಬೆಳೆಗಳು; ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 18 ಕೊನೆಯ ದಿನವಾಗಿದೆ. ಭತ್ತ (ನೀರಾವರಿ) ಬೆಳೆಗೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಸ್ತಕ ಸಾಲು ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಧಳ, ಪ್ರಕೃತಿ ವಿಕೋಪಗಳಾದ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಢ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ರೈತರು ಬೆಳೆ ವಿಮೆಯ ಸದುಪಯೋಗ ಪಡೆಯಬಹುದು.
ರೈತರು ಉಳಿದ ಬೆಳೆಗಳ ಆಯ್ಕೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಿ ನೋಂದಣಿ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಸಹಾಯವಾಣಿ ಸಂಖ್ಯೆ 1800 200 5142 ಅಥವ ತಮ್ಮ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಯುನಿವರಸಲ್ ಸೊಂಪೊ ಜೆನರಲ್ ಇನ್ಸುರೆನ್ಸ್ ಕಂಪನಿ ಲಿ. ಬೆಂಗಳೂರು ಸಂಸ್ಥೆ ತಾಲೂಕು ವಿಮಾ ಪ್ರತಿನಿಧಿ (ತಾಲೂಕು ಕೋ-ಆರ್ಡಿನೇಟರ್)ಗಳನ್ನು 9845661193 ಅಥವ 1800-200-5142 ನಂಬರ್ ಮೂಲಕ ಸಂಪರ್ಕಿಸಬಹುದು.












Click it and Unblock the Notifications