ಪ್ರಧಾನಿ ಮೋದಿಯಿಂದ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ
ಗೋರಖ್ ಪುರ್(ಉತ್ತರಪ್ರದೇಶ), ಫೆಬ್ರವರಿ 24: ದೇಶದ ಸಣ್ಣ ಹಿಡುವಳಿ ರೈತರಿಗೆ ವಾರ್ಷಿಕವಾಗಿ 6 ಸಾವಿರ ರು ಪ್ರೋತ್ಸಾಹ ಧನ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
Prime Minister Narendra Modi digitally launches Pradhan Mantri Kisan Samman Nidhi (PM-KISAN), a cash-transfer scheme, in Gorakhpur. UP CM Yogi Adityanath present pic.twitter.com/igE1A1PuMZ
— ANI UP (@ANINewsUP) February 24, 2019
5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಪ್ರಯೋಜನವಾಗಲಿದೆ. ನರೇಗಾ ಮಾದರಿಯಲ್ಲಿ ರೈತರ ಅಕೌಂಟಿಗೆ ಕಂತು ಕಂತಿನಲ್ಲಿ ನೇರವಾಗಿ ಹಣ ಜಮೆಯಾಗಲಿದೆ. ಮಾರ್ಚ್ 31ರೊಳಗೆ ಮೊದಲ ಕಂತು ಜಮೆ. ಈ ಯೋಜನೆ ಅನುಷ್ಠಾನಗೊಳಿಸುವುದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 75000 ಕೋಟಿ ರು ಹೆಚ್ಚಿನ ಹೊರೆ ಬೀಳಲಿದೆ.
ಪುತ್ತೂರಿನ ಜಗನ್ನಾಥ್ ಭಟ್ ಹಾಗೂ ತುಮಕೂರಿನ ಮಹೇಶ್ ಎಂಬ ರೈತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದರು. ದೇಶದ ಎಲ್ಲಾ ರೈತ ಸೋದರ, ಸೋದರಿಯರಿಗೆ ನನ್ನ ನಮನಗಳು, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ನನಸು ಮಾಡಬೇಕಿದೆ. ರೈತರ ಪಾಲಿನ ಅತಿ ದೊಡ್ಡ ಯೋಜನೆ ಇದಾಗಿದೆ
ಈ ಯೋಜನೆಯ ಪ್ರಯೋಜನ ಸುಮಾರು 12 ಕೋಟಿ ರೈತರಿಗೆ ಸಿಗಲಿದೆ. ಇದು ನಿಮ್ಮ ಹಕ್ಕು, ಇದನ್ನು ಮೋದಿಯಾಗಲಿ, ರಾಜ್ಯ ಸರ್ಕಾರದವರಾಗಲಿ ಕಸಿಯಲು ಸಾಧ್ಯವಿಲ್ಲ. ಈ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವವರಿಗೆ ತಕ್ಕ ಉತ್ತರ ನೀಡಿ.
ರೈತರ ಕಲ್ಯಾಣ ಮತ್ತು ಅವರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ಎಲ್ಲ 22 ಬೆಳೆಗಳಿಗೆ 1.5ರಷ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.
ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಂದ ಶೇ.67ರಷ್ಟು ಅರ್ಜಿ ರವಾನೆಗೊಂಡಿದೆ. ಯುಪಿ, ಉತ್ತರಾಖಂಡ್, ಬಿಹಾರ ರಾಜ್ಯಗಳು ಈಗಾಗಲೇ ಸಣ್ಣ ರೈತರ ಮಾಹಿತಿಯನ್ನು ನೀಡಿವೆ. ಉಳಿದ ರಾಜ್ಯಗಳು ರಾಜಕೀಯ ಮಾಡುತ್ತಿವೆ. ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಇಲ್ಲಿಯವರೆಗೆ ಕೇಂದ್ರ ಸರ್ಕಾರ 12 ಕೋಟಿ ರೈತರ ಪೈಕಿ ಕೇವಲ 3.2 ಕೋಟಿ ರೈತರ ಅರ್ಜಿ ಮಾತ್ರ ಪಡೆದುಕೊಂಡಿದ್ದು,ಅದರಲ್ಲಿ 55 ಲಕ್ಷ ರೈತರ ಅರ್ಜಿ ಬಾಕಿ ಉಳಿದಿದ್ದು, 1.7 ಕೋಟಿ ರೈತರ ಅರ್ಜಿ ಫೈನಲ್ ಆಗಿವೆ. ಉಳಿದಂತೆ 84 ಲಕ್ಷ ರೈತರ ಅರ್ಜಿ ಕ್ಯಾನ್ಸಲ್ ಆಗಿವೆ ಎಂದು ತಿಳಿದು ಬಂದಿದೆ.
ಈ ಹಿಂದಿನ ಸರ್ಕಾರದಲ್ಲಿ ರೈತರಿಗೆ ಸಿಗಬೇಕಿದ್ದ 1 ರು ನಲ್ಲಿ 15 ಪೈಸೆ ಮಾತ್ರ ಸಿಗುತ್ತಿತ್ತು. ನಮ್ಮ ಸರ್ಕಾರದಲ್ಲಿ ರೈತರಿಗೆ ಸಿಗಬೇಕಾದ ಪೂರ್ಣ ಮೊತ್ತ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ನಿಮ್ಮ ಖಾತೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಿ ಸಿಂಚಾಯಿ ಯೋಜನೆ, ಜನ ಧನ್ ಯೋಜನೆಯಿಂದ ರೈತರಿಗೆ ಸಿಗಬೇಕಾದ ಗೌರವ ಸಿಗುವಂತಾಗಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಆದಿವಾಸಿಗಳಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದರು. ಈಗ ನಮ್ಮ ಸರ್ಕಾರ ಕರಾವಳಿಯ ಬೆಸ್ತರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ.
ದೇಶಿ ಹಸು, ತಳಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲಾಗಿದೆ. ಹಾಲು ಉತ್ಪಾದನೆ ಬಗ್ಗೆ ಸಂಶೋಧನೆ ಆರಂಭವಾಗಿದೆ. ಬಿದರನ್ನು ಅರಣ್ಯ ಉತ್ಪನ್ನ ಎನ್ನಲಾಗುತ್ತಿತ್ತು. ಇದನ್ನು ಕೃಷಿ ಉತ್ಪನ್ನ ಎಂದು ಸರ್ಕಾರ ಘೋಷಿಸಿದೆ.