ನ.9 ರಿಂದ ಕೃಷಿ ಮೇಳ - 2009
ಬೆಂಗಳೂರು , ನ. 5 : ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೃಷಿ ಮೇಳ, ರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಹಾಗೂ ಸಾವಯವ ಕೃಷಿ ಪ್ರದರ್ಶನವನ್ನು ನವೆಂಬರ್ 19 ರಿಂದ 22 ರವರಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದೆ.
ಕೃಷಿ ಮೇಳದಲ್ಲಿ ಸುಧಾರಿತ ಕೃಷಿ ಹಾಗೂ ಪಶುಸಂಗೋಪನೆ ಸಂಶೋಧನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಕೃಷಿ ಮೇಳದಲ್ಲಿ ಮಳೆ ಅಸ್ಥಿರತ್ವಕ್ಕೆ ಸೂಕ್ತ ಬೆಳೆ ಯೋಜನೆಗಳು, ಖುಷ್ಕಿ ಬೇಸಾಯದಲ್ಲಿ ಪೋಷಕಾಂಶಗಳ ಸಮಗ್ರ ನಿರ್ವಹಣೆ, ಸಮಗ್ರ ಕೃಷಿ ಪದ್ದತಿ ಪ್ರಾತ್ಯಕ್ಷಿಕೆ, ಇತ್ತೀಚೆಗೆ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ತೋಟಗಾರಿಕಾ ಪದ್ದತಿಗಳು ಹಾಗೂ ನಿಖರ ಕೃಷಿ, ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಪಶುಸಂಗೋಪನೆ, ಕೋಳಿ ಸಾಕಾಣೆ, ಹೈನುಗಾರಿಕೆ ಹಾಗೂ ಮೀನು ಸಾಕಣೆಗಳ ಸುಧಾರಿತ ಪದ್ದತಿಗಳು, ಕಡಿಮೆ ನೀರಿನ ಬಳಕೆಯಿಂದ ಭತ್ತದ ಬೇಸಾಯ, ಪೌಷ್ಠಿಕ ಆಹಾರ ತಿನಿಸುಗಳು, ಕೊಯ್ಲಿನೋತ್ತರ ತಾಂತ್ರಿಕತೆ ಮತ್ತು ಮೌಲ್ಯವರ್ಧನೆ, ಸರಿ ಸುವರ್ಣ - ಸುಧಾರಿತ ರೇಷ್ನೆ ಕೃಷಿ, ರೈತರಿಗೆ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಸುಧಾರಿತ ಬಿತ್ತನೆ ಬೀಜ, ಕಸಿ ಮಾಡಿದ ಸಸಿಗಳು, ಕೃಷಿ ಉಪಕರಣಗಳು ಹಾಗೂ ಕೃಷಿ ಪ್ರಕಟಣೆಗಳ ಮಾರಾಟ ಹಾಗೂ ಕೃಷಿ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಗಳಾಗಿವೆ.
ಈ ಕೃಷಿ ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ರೈತರನ್ನು ವಿಸ್ತರಣಾ ಕಾರ್ಯಕರ್ತರು, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಇತರೆ ಸಾರ್ವಜನಿಕರನ್ನು ನಿಗದಿತ ದಿನಾಂಕದಂದು ಆಹ್ವಾನಿಸಲಾಗಿದೆ. ನವೆಂಬರ್ 19 ರ ಗುರುವಾರದಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ನವೆಂಬರ್ 20 ರ ಶುಕ್ರವಾರದಂದು ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳು. ನವೆಂಬರ್ 21ರ ಶನಿವಾರದಂದು ಮೈಸೂರು, ಚಾಮರಾಜನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳು ಹಾಗೂ ನವೆಂಬರ್ 22ರ ಭಾನುವಾರದಂದು ಶಿವಮೊಗ್ಗ, ದಾವಣಗೆರೆ ಮತ್ತು ಕೊಡಗು ಜಿಲ್ಲೆಗಳ ರೈತರುಗಳು ಭಾಗವಹಿಸಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications