ಕುರಿ ಸಾಕಾಣಿಕೆಗೆ ಯುವ ರೈತನಿಗೆ ಸಹಕಾರಿಯಾದ ನರೇಗಾ ಯೋಜನೆ
ಶಿವಮೊಗ್ಗ, ಮಾರ್ಚ್ 09: ಕೋವಿಡ್ ಸಮಯದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗೆ ಮರಳಿದ ಯುವಕ ಪ್ರದೀಪ್ ಕುರಿ ಸಾಕಾಣಿಕೆ ಮೂಲಕ ಯಶಸ್ವಿಯಾಗಿದ್ದಾರೆ. ಯುವ ರೈತ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದು, ಈಗ ಉತ್ತಮ ಆದಾಯ ಪಡೆಯುತ್ತಾ ಸ್ವಗ್ರಾಮದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಭಾರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣ್ಣಿಗೆರೆಯ ಪ್ರದೀಪ್ ಯಶಸ್ಸಿನ ಕಥೆ ಇದು. ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ ಪ್ರದೀಪ್ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡರು, ಊರಿಗೆ ವಾಪಸ್ ಆದರು.
ಗ್ರಾಮಕ್ಕೆ ವಾಪಸ್ ಆದ ಪ್ರದೀಪ್ ಮುಂದಿನ ಜೀವನ ನಿರ್ವಹಣೆಗಾಗಿ ಕುರಿ ಸಾಕಾಣಿಕೆ ಮಾಡಲು ಮುಂದಾದರು. ಆಗ ನರೇಗಾ ಯೋಜನೆ ನೆರವು ಪಡೆದು ಕುರಿ ಶೆಡ್ ನಿರ್ಮಿಸಿಕೊಂಡರು. ಈಗ ಈ ಉದ್ಯೋಗ ಕೈ ಹಿಡಿದಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಪ್ರದೀಪ್ ತಮ್ಮ ಉಳಿತಾಯದ ಹಣದಲ್ಲಿ ಮೊದಲು 10 ಕುರಿಗಳನ್ನು ಸಾಕಿದರು. ಏಳರಿಂದ ಎಂಟು ತಿಂಗಳಲ್ಲಿ ಈ ಕುರಿಗಳನ್ನು ಮಾರಿ ಉತ್ತಮ ಆದಾಯ ಗಳಿಸಿದರು. ಬಳಿಕ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಖರೀದಿಸಿದರು.
ಪ್ರಸ್ತುತ ಪ್ರದೀಪ್ 40 ಕುರಿಗಳನ್ನು ಹೊಂದಿದ್ದಾರೆ. ಕುರಿಗಳಿಂದ ಮಾತ್ರವಲ್ಲ ಕುರಿ ಗೊಬ್ಬರದಿಂದ ಸಹ ಉತ್ತಮ ಆದಾಯ ಬರುತ್ತಿದೆ. ನರೇಗಾ ಯೋಜನೆಯಡಿ ನಿರ್ಮಿಸಿದ ಸುಸಜ್ಜಿತ ಕುರಿ ಶೆಡ್ ಪ್ರದೀಪ್‌ಗೆ ಸಹಕಾರಿಯಾಯಿತು. ಈ ಕುರಿ ಶೆಡ್ ಇತರರಿಗೆ ಮಾದರಿಯಾಗಿದ್ದು ಸುತ್ತಮುತ್ತಲಿನ ರೈತರು ಭೇಟಿ ನೀಡಿ ಕುರಿ ಸಾಕಾಣಿಕೆ ಬಗ್ಗೆ ಪ್ರದೀಪ್ ಬಳಿ ಮಾಹಿತಿ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ವಾಪಸ್ ಆದ ಪ್ರದೀಪ್‌ಗೆ ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಗ್ರಾಮದಲ್ಲಿ ಅಂಟಿಸಲಾದ ಪ್ರಚಾರದ ಪೊಸ್ಟರ್‌ಗಳು ಕಾಣಿಸಿದ್ದವು. ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಿಡಿಓ ಬಳಿ ಯೋಜನೆ ಕುರಿತು ಚರ್ಚೆ ನಡೆಸಿದರು. ಕುರಿ ಶೆಡ್ ಕುರಿತು ಹೆಚ್ಚಿನ ಮಾಹಿತಿ ಪಡೆದು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದರು.
ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣ ಪ್ರಸ್ತಾವನೆ ಬಂದ ಬಳಿಕ ಕಾಮಗಾರಿಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಕ್ರಿಯಾ ಯೋಜನೆ ಸಿದ್ದಪಡಿಸಿ, ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಂದ ಅನುಮೋದನೆ ಪಡೆದ ಬಳಿಕ ಯೋಜನೆ ಅನುಷ್ಟಾನ ಮಾಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಎಂ. ಎಲ್. ವೈಶಾಲಿ, "ನರೇಗಾ ಯೋಜನೆಯಡಿ 10 ಮಾನವ ದಿನಗಳಲ್ಲಿ ಅಂದಾಜು 68 ಸಾವಿರ ರೂ. ವೆಚ್ಚದಲ್ಲಿ ಶೆಡ್ ಅನ್ನು ನಿರ್ಮಿಸಲಾಗಿದೆ. ಈ ಸೌಲಭ್ಯದಿಂದಾಗಿ ಸುಸಜ್ಜಿತ ಕುರಿ ಶೆಡ್ ನಿರ್ಮಾಣವಾಯಿತು. ಹೆಚ್ಚು ಕುರಿ ಸಾಕಾಣಿಕೆಗೆ ಅನುಕೂಲವಾಯಿತು" ಎಂದು ಹೇಳಿದರು.
ರೈತ ಪ್ರದೀಪ್ ಮಾತನಾಡಿ, "ತಾನು ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡ ನಂತರ ಉಳಿತಾಯದ ಅಲ್ಪಸ್ವಲ್ಪ ಹಣದಲ್ಲಿ ಮೊದಲಿಗೆ 10 ಕುರಿಗಳನ್ನು ಖರೀದಿಸಿ, ಸಾಕಾಣಿಕೆ ಆರಂಭಿಸಿದೆ. ನಂತರ ನರೇಗಾ ಯೋಜನೆ ನೆರವಿನೊಂದಿಗೆ ಒಂದು ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡು, ನಂತರ ಆ 10 ಕುರಿಗಳನ್ನು ಏಳರಿಂದ ಎಂಟು ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಿ, ಮತ್ತೆ 40 ಕುರಿಗಳನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿದ್ದೇನೆ. ಗೊಬ್ಬರದಿಂದಲೂ ಉತ್ತಮ ಆದಾಯ ಇದ್ದು, ಈ ಉದ್ಯೋಗ ನನಗೆ ನೆಮ್ಮದಿ ನೀಡಿದೆ" ಎಂದರು.
ವರದಿ: ಭಾಗ್ಯ ಎಂ.ಟಿ, ವಾರ್ತಾ ಸಹಾಯಕರು
ವಾರ್ತಾ ಇಲಾಖೆ












Click it and Unblock the Notifications