ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ದು': ನಮ್ಮ ಬೆಳೆ... ನಮ್ಮ ಬೆಲೆ... ನಮ್ಮ ಮಾರುಕಟ್ಟೆ..

|
Google Oneindia Kannada News

ನಾಡಿನ ರೈತ ಸಮುದಾಯಕ್ಕೆ ಸ್ವಾಭಿಮಾನದ ದೀಕ್ಷೆ ಕೊಟ್ಟ ಧೀಮಂತ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಗ್ರಾಮಗಳ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ನೋಟ ಉಳ್ಳವರಾಗಿದ್ದರು. ಅವರ ಚಿಂತನೆಯಲ್ಲಿ ಮೊಳೆತ ಅನೇಕ ಆಲೋಚನೆಗಳಲ್ಲಿ 'ನಮ್ದು' ಎಂಬ ದೇಸಿ ಮಾರುಕಟ್ಟೆಯ ಕಲ್ಪನೆ ಕೂಡ ಒಂದು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ -ಕೃಷಿ ಕ್ಷೇತ್ರದಲ್ಲಿ ಇತರೆ ಹೊಸ ಕಾನೂನುಗಳನ್ನು ತಂದಿರುವ ಈ ಸಂದರ್ಭದಲ್ಲಿ ಪ್ರೊ. ಎಂಡಿಎನ್ ಯೋಜಿಸಿದ್ದ 'ನಮ್ದು' ಮಾರುಕಟ್ಟೆಯನ್ನು ರೈತರು ಸ್ಥಾಪಿಸಿಕೊಳ್ಳುವುದರ ಮೂಲಕ ಹೊಸ ಕಾನೂನುಗಳನ್ನು ತಿರಸ್ಕರಿಸಬಹುದಾಗಿದೆ ಮತ್ತು ಅವುಗಳಿಂದಾಗುವ ಅಪಾಯದಿಂದ ಪಾರಾಗಲೂಬಹುದು.

ಏನಿದು 'ನಮ್ದು'?:

ರೈತರು ಮತ್ತು ಗ್ರಾಹಕರ ನಡುವೆ ನಡೆವ ಸ್ಥಳೀಯ ವಹಿವಾಟಿನ ವಿನೂತನ ಕಲ್ಪನೆಯೇ 'ನಮ್ದು'. ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಏರ್ಪಾಡು ಮಾಡಿಕೊಳ್ಳುವ ವೇದಿಕೆ. ಹಾಗಾದರೆ ಪ್ರಸ್ತುತ ವಹಿವಾಟು ಹೇಗೆ ನಡೆಯುತ್ತಿದೆ ಮತ್ತು 'ನಮ್ದು' ಪರಿಕಲ್ಪನೆ ಅದಕ್ಕಿಂತ ಹೇಗೆ ಭಿನ್ನ ಎಂಬುದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ.

ಸ್ಥಳೀಯವಾಗಿಯೇ ಮಾರಾಟ

ಸ್ಥಳೀಯವಾಗಿಯೇ ಮಾರಾಟ

ಉದಾಹರಣೆಗೆ ತರಕಾರಿ ಬೆಳೆಗಾರರು ತಾವು ಬೆಳೆದ ತರಕಾರಿಗಳನ್ನು ದೂರದ ತಾಲ್ಲೂಕು ಕೇಂದ್ರಕ್ಕೋ, ಜಿಲ್ಲಾ ಕೇಂದ್ರಕ್ಕೋ ಹೊತ್ತು ಹೋಗಿ ಮಾರಾಟ ಮಾಡುವುದು ರೂಢಿಯಲ್ಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವ ಊರಿನಲ್ಲಿ ಯಾವ ತರಕಾರಿ ಬೆಳೆಯಲಾಗಿದೆಯೋ ಅದೇ ಊರಿನಲ್ಲಿ ಆ ತರಕಾರಿಗೆ ಗ್ರಾಹಕರಿದ್ದಾರೆ ಎಂಬುದನ್ನು ಮರೆಯಲಾಗಿದೆ. ಅಲ್ಲದೆ ಹೋಲ್‌ಸೇಲ್ ಮಾರಾಟದ ಹೆಸರಿನಲ್ಲಿ ಕಡಿಮೆ ಬೆಲೆಗೆ ಮಂಡಿಗಳಿಗೆ/ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳನ್ನು ರೈತರು ಸುರಿದು ಬರುತ್ತಿದ್ದಾರೆ. ಹೀಗೆ ಮಾಡುವುದು ಬಿಲ್‌ಕುಲ್ ಬೇಡವೆಂದಲ್ಲ. ಬದಲಿಗೆ ಅದಕ್ಕೂ ಮುನ್ನ ಸ್ಥಳೀಯವಾಗಿಯೇ ಮಾರಾಟ ಮಾಡಿ ಉಳಿದದ್ದು ದೊಡ್ಡ ಮಾರುಕಟ್ಟೆಗೆ ಕೊಂಡೊಯ್ಯುವ ಕೆಲಸ ಆಗಬೇಕು. ಇದರಿಂದ ಹೆಚ್ಚಿನ ಲಾಭವೂ ಇದೆ. ತಾಜಾ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಖುಷಿಯೂ ಅಡಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಫುಡ್ ಮೈಲ್ ಕಡಿಮೆ ಮಾಡಬಹುದು.

ಏನಿದು ಫುಡ್ ಮೈಲ್?:

ಏನಿದು ಫುಡ್ ಮೈಲ್?:

ರೈತರು ಬೆಳೆದ ಕೃಷಿ ಉತ್ಪನ್ನ ನಿಮ್ಮ ತಟ್ಟೆಗೆ ಬರುವಷ್ಟರಲ್ಲಿ ಚಲಿಸುವ ದೂರವನ್ನು ಫುಡ್ ಮೈಲ್ ಎಂದು ಕರೆಯಲಾಗುತ್ತದೆ. ಭಾರತದ ಫುಡ್‌ ಮೈಲ್ ಸರಾಸರಿ 1500 ಕಿಲೋಮೀಟರ್‌ನಷ್ಟಿದೆ. ಇದಕ್ಕೆ ಕಾರಣಗಳೂ ಬಹಳಷ್ಟಿವೆ.

ಬೆಳೆದ ಆಹಾರ ಪದಾರ್ಥ ಹೇಗೆ ಚಲಿಸುತ್ತದೆ ಎಂಬುದನ್ನು ತರಕಾರಿಯದ್ದೇ ಉದಾಹರಣೆ ತೆಗೆದುಕೊಂಡು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ರೈತ ತನ್ನ ತರಕಾರಿ ಬೆಳೆಯನ್ನು ಸ್ಥಳೀಯವಾಗಿ ಮಾರದೆ ದೂರದ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಕೊಂಡೊಯ್ದು ಮಾರುತ್ತಾನೆ. ಅಲ್ಲಿಂದ ಚಿಲ್ಲರೆ ವ್ಯಾಪಾರಿಯೊಬ್ಬ ಕೊಂಡು ತಂದು ನಿಮ್ಮೂರಲ್ಲೇ ಮಾರಾಟ ಮಾಡುತ್ತಿರುತ್ತಾನೆ. ನಿಮ್ಮೂರಲ್ಲೇ ಬೆಳೆದ ತರಕಾರಿ ಜಿಲ್ಲಾ ಕೇಂದ್ರ ತಲುಪಿ ಮತ್ತೆ ಹಿಮ್ಮುಖವಾಗಿ ಚಲಿಸುವ ಅಂತರ ಊಹಿಸಿಕೊಳ್ಳಿ. ಈ ಚಲನೆಯಲ್ಲಿ ಬದಲಾದ ಕೈಗಳೆಷ್ಟು ಕಲ್ಪಿಸಿಕೊಳ್ಳಿ. ಕಡೆಗೆ ಗ್ರಾಹಕನಿಗೆ ತಲುಪುವಾಗ ಆ ತರಕಾರಿ ಎಷ್ಟು ಬೆಲೆಗೆ ಮಾರಾಟ ಮಾಡಿದರೆ ಬದಲಾದ ಎಲ್ಲಾ ಕೈಗಳಿಗೂ ಲಾಭ ಸಿಗುತ್ತದೆ ಎಂಬುದನ್ನು ಯೋಚಿಸಿ...!

ಎಂಡಿಎನ್ ಕನಸು

ಎಂಡಿಎನ್ ಕನಸು

So. ಇದಕ್ಕೆ ಪರ್ಯಾಯವಾಗಿ ಖುದ್ದು ರೈತರೇ ತಾವು ಬೆಳೆದ ವಸ್ತುಗಳನ್ನು ಮಾರಾಟ ಮಾಡಲು ಬೇಕಾದ ವೇದಿಕೆಯೊಂದನ್ನು ಸೃಷ್ಟಿ ಮಾಡಬೇಕೆಂಬ ಕಲ್ಪನೆಯೇ 'ನಮ್ದು'.

ಪ್ರಾಯೋಗಿಕವಾಗಿ ಇದನ್ನು ಆಗುಮಾಡುವ ಬಗ್ಗೆ ಯೋಚಿಸಿದಾಗ 'ನಮ್ದು' ಹೆಸರಿನ ಮಾರುಕಟ್ಟೆಗಳನ್ನು ರೈತರೇ ಸ್ಥಾಪಿಸಿಕೊಳ್ಳಬೇಕು ಎಂದು ಎಂಡಿಎನ್ ಕನಸು ಕಂಡಿದ್ದರು. ಆ ಕನಸನ್ನು ಆಗುಮಾಡುವ ಸುಸಮಯ ಈಗ ಬಂದಿದೆ. ಅಂದರೆ ಹಿಂದೆಂದಿಗಿಂತಲೂ ಈಗ ನಮ್ದು ಮಾರುಕಟ್ಟೆಗಳನ್ನು ರೈತರ ಒಡೆತನದಲ್ಲೋ, ಸಹಕಾರಿ ವ್ಯವಸ್ಥೆಯಲ್ಲೋ ತುರ್ತಾಗಿ ಸ್ಥಾಪಿಸಬೇಕಿದೆ.

ಏನದು ತುರ್ತು?

ಏನದು ತುರ್ತು?

ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕೃಷಿ ಕಾಯಿದೆಗಳಿಂದ ಮುಂಬರುವ ದಿನಗಳಲ್ಲಿ ರೈತ ಸಮುದಾಯಕ್ಕೆ ಅನೇಕ ಸಮಸ್ಯೆಗಳು ಎದುರಾಗಲಿವೆ. (ಕೇಂದ್ರ ಸರ್ಕಾರ ರೈತ ಚಳವಳಿಗೆ ಮಣಿದು ಕಾಯಿದೆಗಳನ್ನು ಹಿಂಪಡೆಯದೆ ಇದ್ದಲ್ಲಿ).

ಹೊಸ ಕಾಯಿದೆಗಳಲ್ಲಿ ಖಾಸಗಿ ವ್ಯಕ್ತಿಗಳು/ಕಂಪೆನಿಗಳು ರೈತರ ಉತ್ಪನ್ನಗಳನ್ನು ಕೊಳ್ಳುವ ಮತ್ತು ದಾಸ್ತಾನು ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶದ ಲಾಭವನ್ನು ದೈತ್ಯ ಕಂಪೆನಿಗಳು ಪಡೆದುಕೊಳ್ಳುವಲ್ಲಿ ತಯಾರಿಯೂ ನಡೆದಿದೆ.

ಕಂಪೆನಿ ರೈತರ ಉದ್ಧಾರಕ್ಕೆ ಇರುವುದಲ್ಲ

ಕಂಪೆನಿ ರೈತರ ಉದ್ಧಾರಕ್ಕೆ ಇರುವುದಲ್ಲ

ಒಮ್ಮೆ ಊಹಿಸಿಕೊಳ್ಳಿ. ನಿಮ್ಮ ತಾಲ್ಲೂಕಿನಲ್ಲಿ ರೈತರು ಬೆಳೆವ ಪ್ರತಿ ಉತ್ಪನ್ನವನ್ನೂ ಒಂದು ಕಂಪೆನಿ ಕೊಂಡು ದಾಸ್ತಾನಿಟ್ಟುಕೊಂಡಲ್ಲಿ ಏನಾಗಬಹುದೆಂದು? ಹಾಗೆ ಕೊಂಡವರು ದಾಸ್ತಾನಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಬಹುದು. ಹೆಚ್ಚಿನ ಬೆಲೆಗೆ ಮಾರಲು ಬೇಕಾದ ಪರಿಸ್ಥಿತಿ ನಿರ್ಮಿಸಬಹುದು. ಯಾವ ಕಂಪೆನಿ ರೈತರ ಉದ್ಧಾರಕ್ಕೆ ಕೆಲಸ ಮಾಡುತ್ತದೆ ಹೇಳಿ? ಅವರ ವ್ಯವಹಾರ ಏನಿದ್ದರೂ ಲಾಭಕ್ಕಾಗಿಯೇ ಇರುತ್ತದೆ. ಹೀಗಿರುವಾಗ ರೈತ ಸಮುದಾಯಕ್ಕೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಯೋಚಿಸಿ ನೋಡಿ.

ಇದೀಗ ಹೊಸ ಕಾನೂನಿನ ಅವಕಾಶಗಳನ್ನು ಬಳಸಿಕೊಂಡು ಹಳ್ಳಿಗಳ, ಪಟ್ಟಣಗಳ ಒಟ್ಟಾರೆ ದೇಶದ ಆಹಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕಾಯುತ್ತಿರುವ ಕಂಪೆನಿಗಳಿಗೆ ಬಲಿಬೀಳಬಾರದು. ನಮ್ಮ ಬೆಳೆ-ನಮ್ಮ ಬೆಲೆಗೆ ಮಾರಾಟ ಮಾಡಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಅಂಥದ್ದೊಂದು ಮಾರ್ಗವಾಗಿ 'ನಮ್ದು' ಹೆಸರಿನ ರೈತ ಸಮುದಾಯದ ಒಡೆತನ/ಸಹಕಾರದಲ್ಲಿ ಮಾರುಕಟ್ಟೆಗಳು ಪ್ರತಿ ಗ್ರಾಮ ಅಥವಾ ಕನಿಷ್ಟ ಹೋಬಳಿ ಕೇಂದ್ರಗಳಲ್ಲಿ ಸ್ಥಾಪನೆಯಾಗಬೇಕು.

ನಮ್ದು ಮಾದರಿ ಮಾರುಕಟ್ಟೆ ಆರಂಭ

ನಮ್ದು ಮಾದರಿ ಮಾರುಕಟ್ಟೆ ಆರಂಭ

ಈ ಹಿನ್ನೆಲೆಯಲ್ಲಿ 'ನಮ್ದು' ಮಾದರಿ ಮಾರುಕಟ್ಟೆಯನ್ನು ಇದೇ ಫೆಬ್ರವರಿ 13ರಂದು- ಪ್ರೊ ಎಂಡಿಎನ್ ಅವರ ಜನ್ಮದಿನದಂದು ಮೈಸೂರಿನಲ್ಲಿ ಆರಂಭ ಮಾಡಲಾಗುತ್ತಿದೆ. ಅವರ ಜನ್ಮದಿನದಂದೇ ನಮ್ದು ಮಳಿಗೆಯನ್ನು ಲೋಕಾರ್ಪಣೆ ಮಾಡುವುದರ ಮೂಲಕ ಅಗಲಿದ ಚೇತನಕ್ಕೆ ರೈತ ಚಳವಳಿ ನಮನಗಳನ್ನು ಸಲ್ಲಿಸುವುದರ ಜತೆಗೆ ರೈತರಿಗೆ ದೇಸಿ ಮಾರುಕಟ್ಟೆಯ ಹೊಸ ಮಾರ್ಗ ತೋರಲಿದೆ.

English summary
State is celebrating birth annversary of late farmer leader MD Nanjundaswamy. Here is a tribute to him while remembering his dream concept of Namdu market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X