ಹೆದ್ದಾರಿ ತಡೆ: ಸ್ವಾಧೀನಕ್ಕೊಳಪಡುವ ಭೂಮಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಕೋಡಿಹಳ್ಳಿ ರೈತರ ಪ್ರತಿಭಟನೆ
ಕೋಡಿಹಳ್ಳಿ ಜನವರಿ 10: ಸರ್ಕಾರ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಿ ಸೂಕ್ತ ಪರಿಹಾರ ಧನ ನಿಗದಿ ಮಾಡುವಂತೆ ಒತ್ತಾಯಿಸಿ ಕಸಬಾ ಹೋಬಳಿಯ ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣಹೊಸಹಳ್ಳಿ, ಲಿಂಗನಹಳ್ಳಿ ರೈತರು ಕೊನಘಟ್ಟ ಗ್ರಾಮದಿಂದ ರಾಜ್ಯ ಹೆದ್ದಾರಿವರೆಗೆ ಪ್ರತಿಭಟನಾ ಜಾಥ ಮೂಲಕ ಆಗಮಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣಹೊಸಹಳ್ಳಿ ಗ್ರಾಮಗಳಿಗೆ ಸೇರಿರುವ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ. ತಾಲ್ಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದರು.

ಮುಖಂಡ ಆನಂದ್ ಎಂ ಮಾತನಾಡಿ, 'ಕೆಐಡಿಬಿ ಅಧಿಕಾರಿಗಳು ರೈತರಿಗೆ ಹತ್ತಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಾಲ್ಲೂಕು ಕಚೇರಿಯಲ್ಲೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರು ಏನಿದೆ ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಬೇಕು' ಎಂದು ಪ್ರತಿಭಟನಾ ನಿರತ ರೈತರು ಆಗ್ರಹ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ನಾನು ಜವಾವ್ದಾರಿ ತೆಗೆದುಕೊಂಡು ಶೀಘ್ರವಾಗಿ ಜಿಲ್ಲಾಧಿಕಾರಿಗ ಬಳಿಗೆ ರೈತರ ನಿಯೋಗ ಕರೆದೊಯ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಇದಕ್ಕ ಸಮ್ಮತಿ ಸೂಚಿಸಿದ ರೈತರು ಪ್ರತಿಭಟನೆ ಕೈಬಿಟ್ಟರು.












Click it and Unblock the Notifications