ಮಳೆ ಕೊರತೆ ಬರದ ಛಾಯೆ; ರೈತರಿಗೆ ಬೆಳೆ ನಿರ್ವಹಣೆಗೆ ಸಲಹೆಗಳು
ಬೆಂಗಳೂರು, ಸೆಪ್ಟೆಂಬರ್ 22; ಜೂನ್‌ನಿಂದ ಸೆಪ್ಟೆಂಬರ್ ತನಕ ಸುರಿಯಬೇಕಿದ್ದ ಮುಂಗಾರು ಮಳೆ ಕೊರತೆ ಉಂಟಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಮುಂಗಾರು ಹಂಗಾಮಿನ ಬೆಳೆ ನಿರ್ವಹಣೆ ಮತ್ತು ಹಿಂಗಾರು ಬಿತ್ತನೆಗೆ ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡದ ಜಂಟಿ ನಿರ್ದೇಶಕರ ಡಾ. ಕಿರಣ ಕುಮಾರ ಸಲಹೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಮುಗಿಯುವ ಹಂತದಲ್ಲಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಮುಂಗಾರು ವಿಫಲವಾದ ಕಾರಣ ಬರದ ಛಾಯೆ ಮೂಡಿರುತ್ತದೆ. ಆದ್ದರಿಂದ ರೈತರು ಬರ ನಿರ್ವಹಣೆಗಾಗಿ ಸೂಕ್ತ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದ್ದಾರೆ.

ತೇವಾಂಶ ಕೊರತೆಯಿದ್ದ ಪ್ರದೇಶದಲ್ಲಿ ತೇವಾಂಶ ಕಾಪಾಡುವ ಹಾಗೂ ಬೆಳೆಗಳನ್ನು ಕಾಪಾಡುವ ಕ್ರಮಗಳನ್ನು ಅನುಸರಿಸಬೇಕು. ಪದೇ ಪದೇ ಎಡೆಕುಟೆ ಹೊಡೆದು ನೀರು ಆವಿಯಾಗುವುದನ್ನು ತಡೆಯಬೇಕು. ಹೂ ಆಡದೆ ಇರುವ ಕಳೆಗಳನ್ನು ತೆಗೆದು ಸಾಲುಗಳ ಮಧ್ಯೆ ಹೊದಿಕೆ ಮಾಡಬೇಕು. ಸಂರಕ್ಷಣಾ ನೀರಾವರಿ ಸೌಲಭ್ಯವಿದ್ದಲ್ಲಿ ಸೂಕ್ಷ್ಮ (ಸಿಂಚನ ಹಾಗೂ ಹನಿ) ನೀರಾವರಿ ಒದಗಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾಷ್ಪೀಭವನ ನಿಯಂತ್ರಿಸಲು ಬಳಕೆ ಮಾಡುವುದು ಹಾಗೂ ಚೇತರಿಕೆ ಕಾಣಲು ನೀರಿನಲ್ಲಿ ಕರಗುವ ರಸಗೊಬ್ಬರ 3-5 ಗ್ರಾಂ (13:0:45 ಅಥವಾ 19:19:19) ಮತ್ತು 1 ಗ್ರಾಂ ಲಘು ಪೋಷಕಾಂಶಗಳ ಸಿಂಪರಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಕಬ್ಬು ಬೆಳೆಗೆ ಸಲಹೆ; ಕಬ್ಬು ಬೆಳೆಯಲ್ಲಿ ಬರದ ಬಾಧೆಯನ್ನು ಹೋಗಲಾಡಿಸಲು ಸಾಧ್ಯವಾದರೆ ಒಂದು ಸಾಲು ಬಿಟ್ಟು ಒಂದು ಸಾಲು ನೀರು ಹಾಯಿಸಬೇಕು. ಕಬ್ಬಿನ ಒಣಗಿದ ಎಲೆಗಳನ್ನು ಕಿತ್ತು ಹೊದಿಕೆಯಾಗಿ ಉಪಯೋಗ ಮಾಡಬೇಕು.
ಎಕರೆಗೆ 20 ಕೆಜಿ ಪೊಟ್ಯಾಷ್ ಗೊಬ್ಬರವನ್ನು ಹಾಕಬೇಕು. ಶೇ.2.5 ಯೂರಿಯಾ ಮತ್ತು ಶೇ.2.5 ಪೊಟ್ಯಾಷ್ ಅಥವಾ ಶೇ.2 ಕಯೋಲಿನ್ ಎಲೆಗಳ ಮುಖಾಂತರ ಸಿಂಪರಣೆ ಮಾಡಬೇಕು. ಕುಳೆ ಕಬ್ಬಿನಲ್ಲಿ ರವದಿಯನ್ನು ಹೊದಿಕೆಯಾಗಿ ಉಪಯೋಗಿಸಬೇಕೆಂದು ಸಲಹೆ ನೀಡಲಾಗಿದೆ. ಹಿಂಗಾರು ಬೆಳೆಗಳಲ್ಲಿ ಪರ್ಯಾಯ ಬೆಳೆ ಯೋಜನೆಯನ್ನು ಅನುಸರಿಸಿ ಬೇಸಾಯ ಮಾಡಬೇಕು. ಹಿಂಗಾರು ಬೆಳೆಗಳಲ್ಲಿ ಬರ ನಿರೋಧಕ ಮತ್ತು ಕಡಿಮೆ ಅವಧಿಯ ತಳಿಗಳನ್ನು ಉಪಯೋಗಿಸಬೇಕು.
ಬೀಜಗಳಿಗೆ ಬೀಜೋಪಚಾರದ ಮೂಲಕ ಬರ ನಿರೋಧಕ ಶಕ್ತಿ ಒದಗಿಸಬೇಕು. ಸಾಧ್ಯವಾದಷ್ಟು ಬಿತ್ತನೆ ಸಾಲುಗಳ ನಡುವಿನ ಅಂತರವನ್ನು ಹೆಚ್ಚುಗೊಳಿಸುವುದು ಮತ್ತು ಮಳೆಯನ್ನು ಆಧರಿಸಿ, ರಸಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಉಪಯೋಗ ಮಾಡಿ ದೀರ್ಘಕಾಲ ಹಸಿ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಹಸಿ ಕಾಯ್ದುಕೊಳ್ಳಲು ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳಾದ ಹರಿ, ಹುಸಿ ಸಾಲು ಬಿಡುವುದು, ಬದುಗಳ ನಡುವಿನ ಸಂರಕ್ಷಣಾ ಕ್ರಮಗಳಾದ ಚೌಕು ಮಡಿಗಳು, ಸಂರಕ್ಷಣಾ ಬೋದು ಸಾಲುಗಳು, ಅಡೆತಡೆಗಳ್ಳುಳ್ಳ ದಿಂಡು ಸಾಲುಗಳು, ಪಟ್ಟಿ ಬೆಳೆಗಳು, ಬೆಳೆ ಅವಶೇಷಗಳ ಹೊದಿಕೆ, ಸಮಪಾತಳಿ ಗುಂಟ ಅಥವಾ ಇಳುಕಲಿಗೆ ಅಡ್ಡಲಾಗಿ ಸಾಗುವಳಿ ಮಾಡಿ, ಜೈವಿಕ ಬದುಗಳನ್ನು ನಿರ್ಮಿಸಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ರೈತರು ಕೇವಲ ಕೃಷಿ ಮೇಲೆ ಅವಲಂಭಿತರಾಗದೆ, ಕೃಷಿ, ಜಾನುವಾರು, ಆಡು ಕುರಿ ಸಾಕಾಣಿಕೆ, ಕೃಷಿ ಮತ್ತು ತೋಟಗಾರಿಕೆ, ಕೃಷಿ ಮತ್ತು ಅರಣ್ಯ, ಕೃಷಿ ಮತ್ತು ಕೋಳಿ ಸಾಕಾಣಿಕೆಗಳಂತಹ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.












Click it and Unblock the Notifications