ಮುಂಗಾರು; ಕೊಪ್ಪಳದಲ್ಲಿ ಬೀಜ, ರಸ ಗೊಬ್ಬರ ದಾಸ್ತಾನು ಬಗ್ಗೆ ಸಭೆ
ಕೊಪ್ಪಳ, ಜೂನ್ 06: ನೈಋತ್ಯ ಮುಂಗಾರು ಆಗಮನ ತಡವಾಗಿದೆ. ಜೂನ್ 6 ಬಂದರೂ ಮಳೆಯ ಸುಳಿವಿಲ್ಲ. ರೈತರು ಮುಂಗಾರು ಹಂಗಾಮಿನ ಚಟುವಟಿಕೆ ಆರಂಭಿಸಿದ್ದಾರೆ. ಕೊಪ್ಪಳದಲ್ಲಿ ಮುಂಗಾರು ಹಂಗಾಮಿನ ಇದುವರೆಗಿನ ಸಿದ್ಧತೆಗಳು ಮತ್ತು ಪ್ರಗತಿಯ ಬಗ್ಗೆ ಪರಿಶೀಲನೆ ನಡೆಯಿತು.
ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಅಧಿಕಾರಿಗಳಿಂದ ತಾಲೂಕುವಾರು ಬಿತ್ತನೆ ಬೀಜಗಳ ವಿವರ, 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ತಾಲೂಕುವಾರು, ಮಾಹೆವಾರು ರಸಗೊಬ್ಬರ ಬೇಡಿಕೆ ವಿವರ, ಮೇವಿನ ಲಭ್ಯತೆ, ತೋಟಗಾರಿಕಾ ಬೆಳೆಗಳ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ಅಧಿಕಾರಿಗಳಿಗೆ ಸೂಚನೆಗಳು; ಸಭೆಯಲ್ಲಿ ಜಿಲ್ಲೆಯಲ್ಲಿನ ಮಳೆ ಕೊರತೆ ಬಗ್ಗೆ ಚರ್ಚೆ ನಡೆಯಿತು. ಜನವರಿ 1ರಿಂದ ಜೂನ್ 4ರವರೆಗೆ ಗಂಗಾವತಿಯಲ್ಲಿ ಶೇ. 9ರಷ್ಟು, ಕೊಪ್ಪಳ ತಾಲೂಕಿನಲ್ಲಿ ಶೇ. 35, ಕುಷ್ಟಗಿ ತಾಲೂಕಿನಲ್ಲಿ ಶೇ.15ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ಶೇ.22 ರಷ್ಟು, ಕಾರಟಗಿ ತಾಲೂಕಿನಲ್ಲಿ ಶೇ.23ರಷ್ಟು ಮಳೆ ಕೊರತೆಯಾಗಿದೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಕನೂರ ತಾಲೂಕಿನಲ್ಲಿ ಶೇ. 34ರಷ್ಟು ಮಳೆ ಕೊರತೆ, ಕನಕಗಿರಿ ತಾಲೂಕಿನಲ್ಲಿ ಶೇ.14ರಷ್ಟು ಮಳೆ ಕೊರೆತೆ ಇದೆ. ಒಟ್ಟಾರೆ ಜಿಲ್ಲೆಯಾದ್ಯಂತ ವಾಡಿಕೆ ಮಳೆ 93.1 ಮಿ. ಮೀ. ಇದ್ದು ವಾಸ್ತವಿಕವಾಗಿ 69.1 ಮಿ. ಮೀ. ಸುರಿದು ಶೇ.26 ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ಕೊಟ್ಟರು.

ಜಿಲ್ಲಾಧಿಕಾರಿಗಳು ಮಾತನಾಡಿ, "ವಿವಿಧೆಡೆಗಳಲ್ಲಿ ರೈತರು ಈಗಾಗಲೇ ಬಿತ್ತನೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆ ಹಾಗೂ ವಾತಾವರಣಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕು ಹಾಗೂ ಬೀಜೋಪಚಾರ ಹೇಗೆ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ಕೃಷಿ ಹಾಗು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಲಹೆ ನೀಡಬೇಕು" ಎಂದರು.
ತೋಟಗಾರಿಕಾ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ತಹಶೀಲ್ದಾರ್‌ಗೆ ವರದಿ ನೀಡಲು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆ ಮತ್ತು ಕುಡಿಯುವ ನೀರಿನ ಸೌಕರ್ಯ ಹಾಗೂ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಕ್ರಮ ವಹಿಸಲು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸಲಹೆಗಳನ್ನು ನೀಡಿದರು.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ 907.15 ಕ್ವಿಂಟಾಲ್ ಮೆಕ್ಕೆಜೋಳ, 236.56 ಕ್ವಿಂಟಾಲ್ ಸಜ್ಜೆ, 7.36 ಕ್ವಿಂಟಾಲ್ ನವೆಣೆ, 212.74 ಕ್ವಿಂಟಾಲ್ ತೊಗರಿ, 64.48 ಕ್ವಿಂಟಾಲ್ ಹೆಸರು, 59.57 ಕ್ವಿಂಟಾಲ್ ಸೂರ್ಯಕಾಂತಿ ಸೇರಿ ಒಟ್ಟು 1487.86 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
24,480 ಮೆಟ್ರಿಕ್ ಟನ್ ಯೂರಿಯಾ, 12,537 ಮೆಟ್ರಿಕ್ ಟನ್ ಡಿಎಪಿ, 302 ಮೆಟ್ರಿಕ್ ಟನ್ ಎಂಓಪಿ, 25,520 ಮೆಟ್ರಿಕ್ ಟನ್ ಎನ್‌ಪಿಕೆಎಸ್, 433 ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿ ಜಿಲ್ಲೆಯಲ್ಲಿ ಒಟ್ಟು 63,271 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಾದ ಮೆಕ್ಕೆಜೋಳ, ಸಜ್ಜೆ, ಭತ್ತ, ತೊಗರಿ, ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜ ವಿತರಣೆಯನ್ನು 20 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 7 ಕೇಂದ್ರಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಟಿ. ಎಸ್. ರುದ್ರೇಶಪ್ಪ ಹೇಳಿದರು.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಕೇರಳ ರಾಜ್ಯಕ್ಕೆ ನೈಋತ್ಯ ಮುಂಗಾರು ಮಾರುತಗಳು ಆಗಮಿಸುವುದು 4 ದಿನ ತಡವಾಗಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಮುಂಗಾರು ವಿಳಂಬವಾಗುತ್ತಿದೆ. ಜೂನ್ 10ರಂದು ಮಳೆ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications