ಕಳೆನಾಶಕದಿಂದ ರೈತನಿಗೆ ಕ್ಯಾನ್ಸರ್: ಮಾನ್ಸೆಂಟೊಗೆ $289 ಮಿಲಿಯನ್ ದಂಡ
ಸ್ಯಾನ್ ಫ್ರಾನ್ಸಿಸ್ಕೊ, ಆಗಸ್ಟ್ 11: ಕಳೆನಾಶಕ ಸಿಂಪಡಿಸಿ ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಗೆ $289 ಮಿಲಿಯನ್ ಪರಿಹಾರ ನೀಡುವಂತೆ ಕೃಷಿ ಕ್ಷೇತ್ರದ ಬೃಹತ್ ಉದ್ಯಮ ಮಾನ್ಸೆಂಟೊಗೆ ಸೂಚಿಸಲಾಗಿದೆ.
ಮಾನ್ಸೆಂಟೊದ ಹರ್ಬಿಸೈಡ್ ಕಳೆನಾಶಕ ಔಷಧದಲ್ಲಿ ಆರೋಗ್ಯದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ತಮ್ಮ ಹೊಲದಲ್ಲಿ ಅದನ್ನು ಪ್ರಯೋಗಿಸಿದ್ದರಿಂದ ತಾವು ಕ್ಯಾನ್ಸರ್‌ಗೆ ತುತ್ತಾಗಿದ್ದಾಗಿ ಡೆವೇಯ್ನ್ ಜಾನ್ಸನ್ (46) ಎಂಬುವವರು ಆರೋಪಿಸಿದ್ದರು.
ಇದನ್ನು ಕಂಪೆನಿಯ ನಿರ್ಲಕ್ಷ್ಯದ ಹೊಣೆಗಾರಿಕೆ ಎಂದು ತೀರ್ಮಾನಿಸಿದ ನ್ಯಾಯಾಧೀಶರ ತಂಡ, ಮಾನ್ಸೆಂಟೊಗೆ ಭಾರಿ ಮೊತ್ತದ ದಂಡ ವಿಧಿಸಿತು.

ನ್ಯಾಯಾಧೀಶರ ತೀರ್ಪು ಯಾವು ಹೂಡಿದ್ದ ದಾವೆಗಿಂತಲೂ ದೊಡ್ಡದನ್ನೇ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿರುವ ಜಾನ್ಸನ್, ಕಂಪೆನಿ ವಿರುದ್ಧ ಈ ರೀತಿ ಬಾಕಿ ಉಳಿದಿರುವ ಸಾವಿರಾರು ದಾವೆಗಳಿಗೆ ಜೀವ ಬಂದಂತಾಗಿದೆ. ಜತೆಗೆ ಇದರ ಬಗ್ಗೆ ರಾಷ್ಟ್ರಮಟ್ಟದ ಗಮನ ಸೆಳೆಯಲು ಸಾಧ್ಯವಾಗಿದೆ ಎಂದಿದ್ದಾರೆ.
ಸುಮಾರು ಒಂದೂವರೆ ತಿಂಗಳು ಸತತವಾಗಿ ನಡೆದ ವಿಚಾರಣೆಯಲ್ಲಿ, ತನ್ನ ಔಷಧವು ಸುರಕ್ಷಿತವಾಗಿದ್ದು, ಅದರಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂದು ಮಾನ್ಸೆಂಟೊ ವಾದಿಸಿತ್ತು.
ಗ್ಲಿಫೋಸೇಟ್ ಅಂಶವು ಮನುಷ್ಯರಲ್ಲಿ ಕ್ಯಾನರ್ ಉಂಟುಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ತಿಳಿಸಿದೆ.
ಆದರೆ, ಗ್ಲಿಫೋಸೇಟ್ ಕ್ಯಾನ್ಸರ್‌ಕಾರಕವಲ್ಲ ಎಂದು ಮಾನ್ಸೆಂಟೊ ವಾದಿಸಿದೆ. ಹಾಗೂ ಜಾನ್ಸನ್ ಅವರಿಗೆ ಅದರಿಂದ ಕ್ಯಾನ್ಸರ್ ಬಂದಿಲ್ಲ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಅದು ತಿಳಿಸಿದೆ.
ಮಾನ್ಸೆಂಟೊದ ಹರ್ಬಿಸೈಡ್ ಅನ್ನು 130 ದೇಶಗಳು ನೋಂದಣಿ ಮಾಡಿಕೊಂಡಿದ್ದು, 100ಕ್ಕೂ ಹೆಚ್ಚು ಬೆಳೆಗಳಿಗೆ ಬಳಸಲು ಅನುಮತಿ ನೀಡಲಾಗಿದೆ.
ಭಾರತದಲ್ಲಿಯೂ ಕುಲಾಂತರಿ ತಳಿಗಳನ್ನು ಪರಿಚಯಿಸುವ ಮಾನ್ಸೆಂಟೊ ಕಂಪೆನಿಯ ವಿರುದ್ಧ ವ್ಯಾಪಕ ಹೋರಾಟ ನಡೆಸುತ್ತಿದೆ. ಅದರ ಕೀಟನಾಶಕ ಔಷಧಗಳು ಜೀವಕ್ಕೆ ಅಪಾಯಕಾರಿ ಎಂದು ಸಾವಯವ ಕೃಷಿ ಹೋರಾಟಗಾರರು, ಅನೇಕ ವಿಜ್ಞಾನಿಗಳು ಧ್ವನಿ ಎತ್ತಿದ್ದಾರೆ.












Click it and Unblock the Notifications