ಕಡಲೆ, ತೊಗರಿಗೆ ಬೆಂಬಲ ಬೆಲೆ ಖರೀದಿ ವಿಸ್ತರಣೆ
ಬೆಂಗಳೂರು, ಏಪ್ರಿಲ್ 23: ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಾಲ್ ಗೆ 6100 ರುಪಾಯಿಯಂತೆ ಖರೀದಿಸಲು ಆದೇಶಿಸಿದೆ.
ಅದರಂತೆ 3.18 ಲಕ್ಷ ರೈತರು ಹೆಸರು ನೊಂದಾಯಿಸಿಕೊಂಡಿದ್ದು, 2.53 ಲಕ್ಷ ರೈತರಿಂದ 22.75 ಲಕ್ಷ ಕ್ವಿಂಟಾಲ್ ತೊಗರಿಯನ್ನು ಈಗಾಗಲೇ ಖರೀದಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಮಾತ್ರ ತೊಗರಿ ಖರೀದಿಸಲಾಗಿದ್ದು, ಕೇಂದ್ರ ಸರ್ಕಾರವು ಪ್ರತಿ ರೈತರಿಂದ ಇನ್ನೂ 5 ಕ್ವಿಂಟಾಲ್ ತೊಗರಿಯನ್ನು ಖರೀದಿಸಲು ಅನುಮತಿಸಿದೆ.
ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯದೇ ಬಾಕಿ ಉಳಿದ 65,316 ಜನ ರೈತರಿಂದ ಬೆಲೆ ಸ್ಥಿರೀಕರಣ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ತೊಗರಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿ ನೊಂದಾಯಿಸಿ ಪ್ರಯೋಜನ ಪಡೆಯದ ರೈತರು ಕೂಡಲೇ ಖರೀದಿ ಕೇಂದ್ರಕ್ಕೆ ಹೋಗಿ ತಾವು ಬೆಳೆದ ತೊಗರಿಯನ್ನು ಪ್ರತಿ ಕ್ವಿಂಟಾಲ್ ಗೆ ರೂ.6100 ರಂತೆ ಬೆಲೆ ಸ್ಥಿರೀಕರಣ ಯೋಜನೆಯಡಿ ಮಾರಾಟ ಮಾಡಬಹದು.

ಆದುದರಿಂದ ಕೊವಿಡ್ -19 ವ್ಯವಸ್ಥೆಗೆ ಯಾವುದೇ ಭಂಗವಾಗದ ರೀತಿಯಲ್ಲಿ ರೈತರುಗಳು ಸಹಕರಿಸಿ, ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.
ಕಡಲೆ: ಕೇಂದ್ರ ಸರ್ಕಾರವು ಈಂಕಿ ಗುಣಮಟ್ಟದ ಕಡಲೆಗೆ ಪ್ರತಿ ಕ್ವಿಂಟಾಲ್ ಗೆ ರೂ.4875 ರಂತೆ ಗರಿಷ್ಢ 14.34 ಲಕ್ಷ ಕ್ವಿಂಟಾಲ್ ಖರೀದಿಸಲು ಅನುಮತಿಸಿದೆ. ಈವರೆವಿಗೆ 1,04,313 ಜನ ರೈತರು ನೊಂದಾಯಿಸಿಕೊಂಡಿದ್ದು, ದಿನಾಂಕ: 21.04.2020ರ ಅಂತ್ಯಕ್ಕೆ 51,172 ಜನ ರೈತರಿಂದ 4.42 ಲಕ್ಷ ಕ್ವಿಂಟಾಲ್ ಖರೀದಿಸಿರುವುದಾಗಿ ಮಾರ್ಕ್‍ಫೆಡ್ ಸಂಸ್ಥೆ ತಿಳಿಸಿದೆ. ಮಾರ್ಕ್‍ಫೆಡ್ ಸಂಸ್ಥೆ ಖರೀದಿ ಮಾಡುತ್ತಿದ್ದು, ಕಡಲೆ ಬೆಳೆಗಾರರು ಇದರ ಪ್ರಯೋಜನವನ್ನು ಪಡೆಯಬಹುದು.












Click it and Unblock the Notifications