ಬೆಂಬಲ ಯೋಜನೆಯಡಿ ಕಡಲೆಕಾಳು ಖರೀದಿ, ರೈತರಿಗೆ ಮಾಹಿತಿ
ಬಳ್ಳಾರಿ, ಜನವರಿ 29: ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ರಾಜ್ಯದಲ್ಲಿ 2024-25ರ ಹಿಂಗಾರು ಬೆಳೆ ಯೋಜನೆಯಡಿ ಕಡಲೇ ಕಾಳು ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯ 96,498 ಮೆಟ್ರಿಕ್ ಟನ್ ಕಡಲೇ ಕಾಳು ಖರೀದಿ ಮಾಡಲು ಅನುಮತಿ ನೀಡಿದ್ದು, ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ.
ಪ್ರಸ್ತಕ ಸಾಲಿನ ಹಿಂಗಾರು ಹಂಗಾಮಿನ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಬೆಂಗಳೂರಿನ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಮೂಲಕ ಖರೀದಿಸಲಾಗುತ್ತದೆ.

ಕೇಂದ್ರ ಸರ್ಕಾರವು ಕಡಲೆಕಾಳು ಉತ್ಪನ್ನಕ್ಕೆ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ. 5,650. ರೈತರಿಂದ ಈ ದರದಲ್ಲಿಯೇ ಖರೀದಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಆಸಕ್ತ ಮತ್ತು ಅರ್ಹ ರೈತರು ಉತ್ಪನ್ನ ಮಾರಾಟ ಮಾಡಲು ಮೊದಲು ನೋಂದಣಿ ಮಾಡಿಸಬೇಕು.
ಬೇಕಾಗುವ ದಾಖಲೆಗಳು: ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಉತ್ಪನ್ನ ಮಾರಾಟ ಮಾಡಲು ಆಧಾರ್ ಕಾರ್ಡ್, ಪ್ರಸ್ತಕ ಸಾಲಿನ ಪಹಣಿ ಪತ್ರ, ಎಫ್‌ಐಡಿ ಕಡ್ಡಾಯವಾಗಿದೆ. ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು. ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿಯನ್ನು ನೋಂದಣಿ ಸಮಯದಲ್ಲಿ ನೀಡಬೇಕು.
ರೈತರಲ್ಲಿ ಫ್ರೂಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್‌ನಲ್ಲಿ ಯಾವುದಾದರೂ ತಾಂತ್ರಿಕ ದೋಷವಿದ್ದಲ್ಲಿ ಕೃಷಿ ಇಲಾಖೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು. ಒಣಗಿದ ಹಾಗೂ ಸ್ವಚ್ಛ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಕೇಂದ್ರಕ್ಕೆ ಮಾರಾಟ ಮಾಡಲು ತರಬೇಕು. ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ನೋಂದಣಿ ಚೀಟಿ ಪಡೆಯಬೇಕು.
ನಿಗದಿತ ಅವಧಿಯೊಳಗೆ ನೋಂದಾಯಿಸಿಕೊಂಡ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್‌ನಿಂದ ಗರಿಷ್ಠ 20 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತದೆ. ಕಡಲೆಕಾಳು ಉತ್ಪನ್ನವನ್ನು 90 ದಿನಗಳವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಖರೀದಿಸಲಾಗುತ್ತದೆ.
ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ನೇರವಾಗಿ ಕೇಂದ್ರಕ್ಕೆ ಭೇಟಿ ನೀಡಿ ಉತ್ಪನ್ನವನ್ನು ಮಾರಾಟ ಮಾಡಬೇಕು ಎಂದು ಕರೆ ನೀಡಲಾಗಿದೆ.
ಕೇಂದ್ರ ಸಚಿವರ ಮಾಹಿತಿ: ಬೆಂಬಲ ಬೆಲೆ ಘೋಷಣೆ ಮಾಡಿರುವ ಕುರಿತು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ಕರ್ನಾಟಕದಲ್ಲಿ 2024-25ರ ಹಿಂಗಾರು ಬೆಳೆ ಯೋಜನೆಯಲ್ಲಿ ಬೆಳೆದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಭಾರತ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಡಲೆ ಬೆಳೆದ ರೈತರ ಪರಿಸ್ಥಿತಿ ಅರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತ ದೃಷ್ಟಿಯಿಂದ ರೈತಪರ ನಿರ್ಣಯ ತೆಗೆದುಕೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಎಂಎಸ್‌ಪಿ ಅಡಿಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿದ್ದು
ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ನಮೂದಿಸಿದಂತೆ 96, 498 ಮೆಟ್ರಿಕ್ ಟನ್ ಗುಣಮಟ್ಟದ ಕಡಲೆ ಕಾಳನ್ನು ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಈಗ ಜಿಲ್ಲಾವಾರು 90 ದಿನದೊಳಗಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತರಿಂದ ಖರೀದಿ ಮಾಡಿ, ರೈತರಿಗೆ ಹಣತಲುಪವಂತೆ ಮಾಡುವದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿದ್ದು, ಈ ಕೂಡಲೇ ಈ ನಿಟ್ಟಿನಲ್ಲಿ ಅವರು ಕಾರ್ಯತತ್ಪರಾಗಬೇಕಾಗಿದೆ. ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೇಗೆ ಚಾಲನೆ ನೀಡಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.












Click it and Unblock the Notifications