ರಾಜಸೀಟ್ ಫಲಪುಷ್ಪ ಪ್ರದರ್ಶನ ನಡೆಯುವುದೇ?
ಮಡಿಕೇರಿ, ಮೇ 29 : ಮಡಿಕೇರಿಯ ರಾಜಸೀಟ್ ನಲ್ಲಿ ಜೂನ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ಒಂದು ಬಾರಿ ಮುಂದೂಡಲಾಗಿರುವ ಈ ಪ್ರದರ್ಶನ ಜೂನ್ ನಲ್ಲಿ ನಡೆಯದಿದ್ದರೆ ಮಡಿಕೇರಿ ದಸರಾದೊಂದಿಗೆ ನಡೆಯುವುದು ಖಚಿತವಾಗಿದೆ.
ಪ್ರತಿವರ್ಷ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರಾಜಸೀಟ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಫಲಪುಷ್ಪ ಪ್ರದರ್ಶನ ವಿಳಂಬವಾಗಿದೆ. ಮೇ 9ರಿಂದ 11ರವೆರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣದಿಂದಾಗಿ ಅದನ್ನು ಸಹ ಮುಂದೂಡಲಾಯಿತು.

ಜೂನ್ ತಿಂಗಳಿನಲ್ಲಿ ಪ್ರದರ್ಶನ ಆಯೋಜಿಸಲು ತೋಟಗಾರಿಕಾ ಇಲಾಖೆ ಪ್ರಯತ್ನ ನಡೆಸುತ್ತಿದೆ. ಆದರೆ, ರಾಜಸೀಟ್ ನಲ್ಲಿ ಹೂಗಳು ಬಾಡಿ ಹೋಗಿವೆ. ಆದ್ದರಿಂದ ಕೇವಲ 20 ದಿನದಲ್ಲಿ ಹೂ ಬಿಡುವ ತಳಿಯನ್ನು ತಂದು ಬೆಳೆಯಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನ ಇಂಡೋ ಅಮೆರಿಕನ್ ಹೈಬ್ರಿಡ್ ಸಂಸ್ಥೆಗೆ ಪತ್ರ ಬರೆಯಲಾಗಿದ್ದು, ತಳಿಯನ್ನು ಸರಬರಾಜು ಮಾಡುವಂತೆ ಕೋರಿದೆ.[ಲಾಲ್ ಬಾಗ್ ಪ್ಲವರ್ ಶೋ ಚಿತ್ರಗಳು]
ಜಿಲ್ಲಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ ತೆರಳಿ ಹೂ ಗಿಡ ವಿತರಣಾ ಕಂಪೆನಿಗಳಿಗೆ ಭೇಟಿ ನೀಡಿ ಗಿಡಗಳನ್ನು ತರುವ ಬಗ್ಗೆ ಪ್ರಯತ್ನ ನಡೆಸಿದ್ದಾರೆ. ಆದರೆ, ಫಲಪುಷ್ಪ ಪ್ರದರ್ಶನದ ದಿನಾಂಕ ಮಾತ್ರ ನಿಗದಿಯಾಗಿಲ್ಲ. ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾದರೆ, ಪ್ರದರ್ಶನ ಸ್ಥಗಿತಗೊಳ್ಳಲಿದೆ.
ಜೂನ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಸಾಧ್ಯವಾಗದಿದ್ದರೆ ಮಡಿಕೇರಿಯ ದಸರಾದೊಂದಿಗೆ ಆಯೋಜಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಲೋಕಸಭೆ ಚುನಾವಣೆ ಬಂದಿದ್ದರಿಂದ ಮಡಿಕೇರಿಯ ಜನರ ಅಚ್ಚುಮೆಚ್ಚಿನ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ವಿಳಂಬವಾಗುತ್ತಿದೆ.












Click it and Unblock the Notifications