ದಬ್ಬಾಳಿಕೆ ಅಲ್ಲ, ಪ್ರೀತಿ-ವಿಶ್ವಾಸದ ರಾಜಕೀಯ ಮಾಡಿದ್ದೇವೆ: ಎಚ್‌ಡಿಕೆ
ಹಾಸನ, ಫೆಬ್ರವರಿ 18: ದೇವೇಗೌಡರ ಕುಟುಂಬ ನನ್ನ ವಿರುದ್ಧ ರಾಜಕೀಯ ಗೂಂಡಾಗಿರಿ ಪ್ರದರ್ಶಿಸಿದೆ ಎಂಬ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾವು ದಬ್ಬಾಳಿಕೆ ರಾಜಕೀಯ ಮಾಡಿಲ್ಲ, ಪ್ರೀತಿ-ವಿಶ್ವಾಸದ ರಾಜಕೀಯ ಮಾಡಿದ್ದೇವೆ ಎಂದರು.
ಹಾಸನದಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರ ವಿಕೆಟ್ ಬೀಳುತ್ತದೆ ಎಂದು ಕೀಳು ಮಟ್ಟದ ಹೇಳಿಕೆಯನ್ನು ಅವರು ನೀಡಿದ್ದಾರೆ. ಅದು ಅವರ ಸಂಸ್ಕಾರ ತೋರಿಸುತ್ತದೆ ಎಂದು ಅವರು ಹೇಳಿದರು.
ಸರ್ಕಾರದ ಯೋಜನೆಗಳನ್ನು ಜನರ ಮುಂದೆ ತೆರೆದಿಟ್ಟ ಕುಮಾರಸ್ವಾಮಿ, ರೈತರ ಸಾಲಮನ್ನಾ ಮಾಡಿದ ಕೂಡಲೇ ರೈತರ ಜೀವನ ಸುಧಾರಣೆ ಆಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ನಾನಿಲ್ಲ, ಹಾಗಾಗಿ ರೈತರ ಜೀವನ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ನಾವು ಘೋಷಿಸಿದ್ದೇವೆ ಎಂದರು.

ಹಾಸನಕ್ಕೆ ಐಐಟಿ ಬೇಕು ಎಂಬುದು ದೇವೇಗೌಡ ಅವರ ಆಸೆಯಾಗಿತ್ತು, ಅದರಂತೆ ರಾಜ್ಯಕ್ಕೆ ಐಐಟಿ ಘೋಷಣೆಯೂ ಆಯಿತು. ಆದರೆ ಅದನ್ನು ಹಾಸನದಲ್ಲಿ ನಿರ್ಮಿಸಲು ಕೆಲವು ವಿರೋಧಿಸಿದರು. ಆದರೆ ಐಐಟಿಯನ್ನು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಸ್ಥಾಪಿಸಲು ನಮ್ಮ ಅಭ್ಯಂತರವಿಲ್ಲ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂದು ಅವರು ಹೇಳಿದರು.
ನಾನು ಕೇವಲ ರೈತರ ಪರವಾದ ಸಿಎಂ ಮಾತ್ರ ಎಂದು ಪ್ರಚಾರ ಮಾಡುವ ಯತ್ನ ಕೆಲವರು ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರವು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇಂದಷ್ಟೆ ರಾಜ್ಯದಲ್ಲಿ ಒಂಬತ್ತು ಕೈಗಾರಿಕಾ ಕ್ಲಸ್ಟರ್‌ಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೇವೇಗೌಡ, ಎಚ್‌ಡಿ ರೇವಣ್ಣ, ಸಚಿವ ಬಂಡೆಪ್ಪ ಕಾಶೆಂಪುರ, ಜಿಟಿ ದೇವೇಗೌಡ ಹಾಗೂ ಇನ್ನಿತರ ಸ್ಥಳೀಯ ಶಾಸಕರು ಭಾಗವಹಿಸಿದ್ದರು, ಹಲವಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ನೆರೆದಿದ್ದರು.












Click it and Unblock the Notifications