ಕೊಡಗು ಮಾವು ಮತ್ತು ಹಲವು ಮೇಳ ಯಶಸ್ವಿ; 20 ಲಕ್ಷ ಮೀರಿದ ವಹಿವಾಟು
ಮಡಿಕೇರಿ, ಜೂನ್ 02: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮಾವು ಮತ್ತು ಹಲಸು ಮೇಳ 2023 ಆಯೋಜನೆ ಮಾಡಲಾಗಿತ್ತು. ಒಟ್ಟು 20 ಮಳಿಗೆಗಳಲ್ಲಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಮೇಳದಲ್ಲಿ 21 ರಿಂದ 22 ಲಕ್ಷ ರೂ. ವಹಿವಾಟು ನಡೆದಿದೆ.
ಮೇ 26 ರಿಂದ 28 ರವರೆಗೆ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ನಡೆದ 'ಮಾವು ಮತ್ತು ಹಲಸು ಮೇಳ 2023' ಯಶಸ್ವಿಯಾಗಿದೆ. ಮೇ 26ರಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಚಾಲನೆ ನೀಡಿದ್ದರು. ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಉತ್ಪಾದಿಸಿದ ಬೆಳೆಯನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿತ್ತು.

ಈ ಮೇಳದಲ್ಲಿ ಮಂಡ್ಯ, ರಾಮನಗರ, ಮಂಗಳೂರು, ಮೈಸೂರು ಭಾಗಗಳಿಂದ ರೈತರು ತಾವು ಬೆಳೆದಿರುವ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಒಟ್ಟು 17 ವಿವಿಧ ತಳಿಗಳಾದ ಮಲ್ಲಿಕಾ, ಅಲ್ಫಾನ ಸೋ, ಮಲಗೋವಾ, ತೋತಪುರಿ, ನೀಲಂ, ರಸಪುರಿ, ಸಿಂದೂರ, ಬದಾಮಿ, ಕೇಸರ್ ಹಾಗೂ ಇತ್ಯಾದಿ ಹಣ್ಣುಗಳನ್ನು ತಂದು ಮೇಳದಲ್ಲಿ ಮಾರಾಟ ಮಾಡಿದರು.
ಹಲಸಿನ ಹಣ್ಣಿಗೂ ಬೇಡಿಕೆ; ಮಾವಿನ ಹಣ್ಣಿನ ಜೊತೆಗೆ ಪುತ್ತೂರು ಎರಡು ಪ್ರಮುಖ ನರ್ಸರಿಗಳು ವಿವಿಧ ಜಾತಿಯ ಹಲಸಿನ ತಳಿಗಳು, ಮಾವು ತಳಿಗಳನ್ನು ಹಾಗೂ ಇತರೆ ಹಣ್ಣಿನ ಕಸಿ ಗಿಡಗಳನ್ನು ತಂದು ಮಾರಾಟ ಮಾಡಿದರು. ಪ್ರಥಮ ಬಾರಿಗೆ ಮಾವಿನ ಹಣ್ಣು ಹಾಗೂ ಹಲಸಿನಿಂದ ಸಂಸ್ಕರಣೆ ಮಾಡಿರುವ ಪದಾರ್ಥಗಳನ್ನು ಸಹ ಮಾರಾಟಕ್ಕೆ ಇಡಲಾಗಿತ್ತು.
ಒಟ್ಟಾಗಿ ಮೂರು ದಿವಸ ಆಯೋಜಿಸಿದ ಮಾವು ಮತ್ತು ಹಲಸು ಮೇಳದಲ್ಲಿ 6000 ಗ್ರಾಹಕರು ಭೇಟಿ ನೀಡಿದ್ದು, ಅಂದಾಜು 21000 ಕೆಜಿ (21 ಎಂಟಿ) ಮಾವಿನ ಹಣ್ಣುಗಳು ಮಾರಾಟವಾಗಿದೆ. ಹಾಗೂ ಅಂದಾಜು 6 ಸಾವಿರ ವಿವಿಧ ಜಾತಿಯ ಹಲಸಿನ ತಳಿಗಳು, ಮಾವು ತಳಿಗಳನ್ನು ಹಾಗೂ ಇತರೆ ಹಣ್ಣಿನ ಕಸಿ ಗಿಡಗಳನ್ನು ಮಾರಾಟವಾಗಿದೆ. ಒಟ್ಟಾರೆ ಮೇಳದಲ್ಲಿ 21 ರಿಂದ 22 ಲಕ್ಷ ವಹಿವಾಟು ನಡೆದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

"ಈ ಮೇಳದಿಂದ ಕೊಡಗಿನ ಗ್ರಾಹಕರಿಗೆ ವಿವಿಧ ರೀತಿಯ ಮಾವಿನ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಪರಿಚಯಿಸಲಾಯಿತು. ರೈತರಿಗೂ ಸಹ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಹಣ್ಣುಗಳನ್ನು ಮಾರಾಟ ಮಾಡಲು ಅನುಕೂಲವಾಯಿತು" ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಎಚ್. ಆರ್. ನಾಯಕ್ ಮಾಹಿತಿ ನೀಡಿದ್ದಾರೆ.












Click it and Unblock the Notifications