ಬೆಂಗಳೂರಲ್ಲಿ ಡಿ. 23ಕ್ಕೆ ರೈತರ ಮಹಾ ಅಧಿವೇಶನ
ಬೆಂಗಳೂರು, ಡಿಸೆಂಬರ್ 05; ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲು ಬೆಂಗಳೂರು ನಗರದಲ್ಲಿ ವಿಶ್ವ ರೈತ ದಿನವಾದ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ಮಹಾ ಅಧಿವೇಶನ ಆಯೋಜನೆ ಮಾಡಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾದ ದಕ್ಷಿಣ ಭಾರತದ ಸಂಚಾಲಕ, ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ರೈತ ಮುಖಂಡರ ಸಮ್ಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗುತ್ತದೆ ಎಂದರು.

ರೈತರು ಬರಗಾಲದ ಸಂಕಷ್ಟದಿಂದ ಬಳಲುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರಲು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. 2 ಸಾವಿರ ರೂ. ಬರ ಪರಿಹಾರದ ಭಿಕ್ಷೆ ಬೇಡ. ಸಂಪೂರ್ಣ ಬರ ನಷ್ಟ ಎಕರೆಗೆ 25 ಸಾವಿರ ರೂ. ಬಿಡುಗಡೆ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ರೈತರ ಮಹಾ ಅಧಿವೇಶನದ ಉದ್ದೇಶಗಳು
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ). ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ), ಕರ್ನಾಟಕ ಬೆಂಗಳೂರು ನಗರದಲ್ಲಿ ವಿಶ್ವ ರೈತ ದಿನದಂದು ನಡೆಯುವ ರೈತರ ಮಹಾ ಅಧಿವೇಶನದ ಉದ್ದೇಶಗಳೇನು? ಎಂದು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
* ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ, ಬೆಳೆ ನಾಶವಾಗಿದೆ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟ ನೆರವು ಸಾಲ ಮನ್ನಾ 12 ಲಕ್ಷ ಕೋಟಿ ಮಾಡಿರುವ ರೀತಿ ರೈತರ ಸಾಲ ಮನ್ನ ಆಗಬೇಕು.
* ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೂಡಲೇ ಜಾರಿ ಮಾಡಬೇಕು.
* ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಮಾಡುತ್ತಿದ್ದಾರೆ. ಕೂಡಲೇ ಬರ ಪರಿಹಾರ ನಷ್ಟ ಎಕರೆಗೆ 25,000 ಬಿಡುಗಡೆ ಮಾಡಬೇಕು.
* ಕಬ್ಬಿನ ಉತ್ಪಾದನಾ ವೆಚ್ಚ 3580 ರೂ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ 3150 ಆಗಿದೆ. ಅವೈಜ್ಞಾನಿಕ ದರ ನಿಗದಿಯಾಗಿದೆ. ಕಬ್ಬಿನ ದರ ಕನಿಷ್ಠ ಟನ್‌ಗೆ 4000 ರೂ. ನಿಗದಿ ಮಾಡಬೇಕು ಹಾಗೂ ಕಳೆದ ಹಿಂದಿನ ಹೆಚ್ಚುವರಿ 150 ರೂ. ಕಬ್ಬಿನ ಬಾಕಿ ಹಣ ಕೊಡಿಸಬೇಕು.
* ಎನ್‌ಡಿಆರ್‌ಎಫ್ ಮಾನದಂಡಕ್ಕೆ ಸೇರಿಸಬೇಕು. ಬರ ನಷ್ಟ ಪರಿಹಾರ ಸಿಗುವಂತಾಗಬೇಕು.
ರಾಜ್ಯ ಸರ್ಕಾರ ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್.ಆರ್.ಇ.ಜಿ ಯೋಜನೆಯನ್ನು ಲಿಂಕ್ ಮಾಡಬೇಕು.
* ಎಲ್ಲಾ ಕೃಷಿ ಬೆಳೆಗಳಿಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು. ಬೆಳೆ ವಿಮೆ ಸರಳೀಕರಣಗೊಳಿಸಬೇಕು. ಅತಿವೃಷ್ಟಿ, ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ಸಿಗುವಂತಾಗಬೇಕು.
* ದೇಶದ 140 ಕೋಟಿ ಜನರ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೆ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಟ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು.
* ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗಿಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು.
* ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು.
* ದೆಹಲಿಯಲ್ಲಿ ಹಾಗೂ ರಾಜ್ಯಗಳಲ್ಲಿ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.
* ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರದ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು.
ಈ ಒತ್ತಾಯಗಳ ಬಗ್ಗೆ ರಾಷ್ಟ್ರೀಯ ರೈತ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿ ಚರ್ಚೆ ನಡೆಸಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ಬೆಂಗಳೂರಿನಲ್ಲಿ ಡಿಸೆಂಬರ್ 23ರಂದು ರೈತರ ಬೃಹತ್ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications