ಭತ್ತ ಖರೀದಿ; ಬೆಂಬಲ ಬೆಲೆ ನಿಗದಿ ಮಾಡಿದ ಕರ್ನಾಟಕ ಸರ್ಕಾರ
ಬೆಂಗಳೂರು, ನವೆಂಬರ್ 02: ಕರ್ನಾಟಕ ಸರ್ಕಾರ 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ ಮಾಡುವು ಕುರಿತು ಆದೇಶ ಹೊರಡಿಸಿದೆ. ಅಲ್ಲದೇ ಖರೀದಿ ಮಾಡುವ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (1&2) ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಹನುಮಂತರಾಜು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರವು 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ, ರಾಗಿ ಮತ್ತು ಬಿಳಿಜೋಳ ಆಹಾರಧಾನ್ಯಗಳಿಗೆ ಪ್ರತಿ ಕ್ವಿಂಟಾಲ್‌ಗೆ ದರ ನಿಗದಿಪಡಿಸಿದೆ. ಭತ್ತ ಸಾಮಾನ್ಯ 2,183 ರೂ., ಭತ್ತ ಗ್ರೇಡ್-ಎ 2023 ರೂ., ಬಿಳಿಜೋಳ-ಹೈಬ್ರೀಡ್ 3180 ರೂ., ಬಿಳಿಜೋಳ-ಮಾಲ್ಡಂಡಿ 3225 ರೂ.ಗಳು. ರಾಗಿ 3846 ರೂ.ಗಳು.
ಕೇಂದ್ರ ಸರ್ಕಾರವು 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 2.5 ಲಕ್ಷ ಮೆಟ್ರಿಕ್ ಟನ್ ಭತ್ತ (ಅಂದರೆ 01.71 ಲಕ್ಷ ಮೆಟ್ರಿಕ್ ಟನ್ ಪರಿವರ್ತಿತ ಅಕ್ಕಿ) ಖರೀದಿಸಲು ಅನುಮತಿಯನ್ನು ನೀಡಿದೆ. ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದನ್ವಯ 2023-24 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 2.5 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಅಧಿಕೃತ ಸಂಗ್ರಹಣಾ ಏಜೆನ್ಸಿಗಳ ಮುಖಾಂತರ ಖರೀದಿಸಲು ಅನುಮೋದನೆಯನ್ನು ನೀಡಲಾಗಿದೆ.
2023-24 ನೇ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದ ರೈತರು ಬೆಳೆದಿರುವ ಆಹಾರ ಧಾನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ರೈತರು ಬೆಳೆದಿರುವ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ 'ಪ್ರೂಟ್ಸ್' ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಹಾಗೂ ಕೇಂದ್ರ
ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದಂತಹ ರಾಜ್ಯದ ರೈತರಿಂದ ಭತ್ತವನ್ನು ಸಂಗ್ರಹಿಸುವ ಸಂಗ್ರಹಣಾ ಏಜೆನ್ಸಿಗಳಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳ ಮುಖಾಂತರ ಖರೀದಿಸಲು ಅನುಮತಿಯನ್ನು ನೀಡಲು ತೀರ್ಮಾನಿಸಿದೆ, ಅದರಂತೆ ಆದೇಶ ಹೊರಡಿಸಲಾಗಿದೆ.
2023-24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 2.5 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ರೂ. 2183, ಗ್ರೇಡ್-ಎ ಭತ್ತ-ಪ್ರತಿ ಕ್ವಿಂಟಾಲ್‌ಗೆ ರೂ. 2203 ದರವನ್ನು ನಿಗದಿ ಮಾಡಲಾಗಿದೆ.
ಸರ್ಕಾರವು ನಿಯೋಜಿಸಿರುವ ಸಂಗ್ರಹಣಾ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತವನ್ನು ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸಿ ಭತ್ತವನ್ನು ಹಲ್ಲಿಂಗ್‌ಗಾಗಿ ಹತ್ತಿರವಿರುವ ನೋಂದಾಯಿತ ಅಕ್ಕಿಗಿರಣಿಗಳಿಗೆ ಸಾಗಾಣಿಕೆ ಮಾಡುವುದು, ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸುವಂತೆ ಕೇಂದ್ರ ಸರ್ಕಾರವು ಆದೇಶಿಸಿರುವ ಹಿನ್ನೆಲೆಯಲ್ಲಿ ಅಕ್ಕಿ ಗಿರಣಿಗಳಲ್ಲಿ ಬೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿ ಗಿರಣಿಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುವ ಭತ್ತವನ್ನು ಹಲ್ಲಿಂಗ್ ಮಾಡಲು ನೋಂದಾಯಿಸಿಕೊಂಡು Fortified Kernels 1:100 ಅನುಪಾತದಲ್ಲಿ ಮಿಶ್ರಣಗೊಳಿಸುವುದನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಖಚಿತಪಡಿಸಿಕೊಳ್ಳತಕ್ಕದು.
ಭತ್ತ ಖರೀದಿಗೆ ಮಾರ್ಗಸೂಚಿಗಳು
* ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಎಫ್.ಎ ಗುಣಮಟ್ಟವನ್ನು ಧೃಡೀಕರಿಸಿಲು ಕ್ರಮವಹಿಸುವುದು.
* ರೈತರಿಂದ ಭತ್ತವನ್ನು ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ
ವತಿಯಿಂದ ಗ್ರೇಡರ್‌ಗಳನ್ನು ನೇಮಿಸುವುದು.
* ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲ್ಲೆಗಳಲ್ಲಿನ ಕಾರ್ಯಪ್ರಗತಿ ಬಗ್ಗೆ ಆಗಿಂದಾಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳುವುದು.
* ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 40 ಕ್ವಿಂಟಾಲ್ ಮೀರದಂತೆ ಖರೀದಿಸತಕ್ಕದ್ದು.
* ಸರ್ಕಾರವು ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಭತ್ತವನ್ನು ಖರೀದಿಸುವಂತಿಲ್ಲ.
* ಯಾವುದೇ ಜಿಲ್ಲೆಯಲ್ಲಿ, ಭತ್ತದ ಹಲ್ಲಿಂಗ್ ಕಾರ್ಯವನ್ನು ಕೈಗೊಳ್ಳಲು ಅಕ್ಕಿ ಗಿರಣಿಗಳು ನೋಂದಾಯಿಸಿಕೊಳ್ಳದಿದ್ದಲ್ಲಿ ಸದರಿ ಜಿಲ್ಲೆಯಲ್ಲಿ ಸಂಗ್ರಹಿಸಿದ ಭತ್ತವನ್ನು ಪಕ್ಕದ ಜಿಲ್ಲೆಯ ನೋಂದಾಯಿತ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡಿ ಭತ್ತದ ಹಲ್ಲಿಂಗ್ ಹಾಗೂ ಸಾರವರ್ಧಿತ ಕಾರ್ಯವನ್ನು ಕೈಗೊಳ್ಳಲು ಕ್ರಮವಹಿಸುವುದು.
* ಭತ್ರವನ್ನು ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ (DBT) ಮುಖಾಂತರ ಮಾಡತಕ್ಕದ್ದು.
* ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನದಲ್ಲಿ ಜಂಟಿ ನಿರ್ದೇಶಕರು (ಸಾರ್ವಜನಿಕ ವಿತರಣಾ ಪದ್ಧತಿ) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ನೇಮಿಸಲಾಗಿದೆ.












Click it and Unblock the Notifications