• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ

|

ಮಾರ್ಚ್ ಮಾಹೆಯಲ್ಲಿ ಕರ್ನಾಟಕದಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘ ಶಿವಮೊಗ್ಗ, ಹಾವೇರಿ ಹಾಗೂ ಬೆಳಗಾವಿಯಲ್ಲಿ ರೈತ ಸಮಾವೇಶ ಏರ್ಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ರೈತ ಹೋರಾಟಗಾರ ಕೆ.ಟಿ. ಗಂಗಾಧರ್ ಅವರನ್ನು ಒನ್ ಇಂಡಿಯಾ ಕನ್ನಡ ಸಂದರ್ಶಿಸಿದಾಗ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದೊಡ್ದ ಶತ್ರು ಎದುರಿಸಲು ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಲಾಗಿದೆ ಎಂದು ಹೇಳುತ್ತಿರುವ ಅಥವಾ ಹಾಗೆ ನಂಬಿರುವ ರೈತ ಚಳವಳಿಯ ನಾಯಕರಿಗೆ ಕೆಲ ಸೂಕ್ಷ್ಮ ವಿಚಾರಗಳು ಕೆ.ಟಿ.ಜಿ ಅವರ ಸಂದರ್ಶನದಲ್ಲಿ ಸಿಗಬಹುದು. ದೇಶದ, ಕರ್ನಾಟಕದ ರೈತ ಚಳವಳಿಯ ಹಲವು ಹೊರಳುಗಳ ಕುರಿತು ಅವರು ಇಲ್ಲಿ ಮಾತನಾಡಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಕುರಿತು ತಮ್ಮ ಅಭಿಪ್ರಾಯ, ಮುಂದೆ ಆಗಬೇಕಿರುವ ಕಾರ್ಯಗಳ ಕುರಿತು ಮಾತು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರಾಜ್ಯದಲ್ಲಿ ರೈತ ಸಮಾವೇಶ: ಚುಕ್ಕಿ ನಂಜುಂಡಸ್ವಾಮಿ

"ದಿಲ್ಲಿಯಲ್ಲಿ ನಡೆಯುತ್ತಿರುವುದು ಸಾಮಾನ್ಯ ಚಳವಳಿ ಅಲ್ಲ"

ಈಗ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ...

ಬಹಳ ಮುಖ್ಯವಾಗಿ ಹೇಳಬೇಕಾದ್ದು, ಇದೊಂದು ಸಾಮಾನ್ಯ ಚಳವಳಿ ಅಲ್ಲ. ನಾನು ಆರೂ ಗಡಿಗಳಿಗೆ ಹೋಗಿ ಬಂದೆ. ಅಲ್ಲಿ ಜನ ಕೂತಿರುವ ಶಿಸ್ತು, ಬದ್ಧತೆ, ಸಾರ್ವಜನಿಕರಿಂದ ಅವ್ರಿಗೆ ಸಿಗ್ತಿರೋ ಬೆಂಬಲ ಅಸಮಾನ್ಯವಾದ್ದು. ಜನ ಸಾಯ್ತಾ ಇದ್ರೂ ತಮ್ಮ ಮುಂದಿನ ಪೀಳಿಗೆಗೆ ಭವಿಷ್ಯದ ರೈತರ ಕುಲಕ್ಕೆ ಏನಾದ್ರೂ ಕೊಡುಗೆ ಕೊಡ್ಲೇಬೇಕು ಅನ್ನೋ ಅವ್ರ ಬದ್ಧತೆ ಇದ್ಯಲ್ಲಾ ಅದು ದೊಡ್ಡದು. ಮುಂದೆ ಯಾವುದೇ ಸರ್ಕಾರ ಬಂದ್ರೂ ಮಣ್ಣು, ಕೃಷಿ, ರೈತನ ಬದುಕನ್ನ ಸಮಸ್ಯೆಗೆ ಸಿಲುಕಿಸೋ ಕೆಲ್ಸಕ್ಕೆ ಕೈ ಹಾಕ್ಬಾರ್ದು ಅನ್ನೋ ದೀಕ್ಷೆ ಅದು.

ಪ್ರತಿ ರೈತನ ಕುಟುಂಬದಲ್ಲಿ ಓದಿ ಬೇರೆ ಬೇರೆ ಕೆಲಸಗಳಲ್ಲಿರೋವ್ರ ತ್ಯಾಗನೂ ಈ ಚಳವಳಿಯಲ್ಲಿ ಕಂಡೆ. ನನ್ನನ್ನ ಒಂದು ಅಪಾರ್ಟ್ಮೇಂಟಲ್ಲಿ ಉಳಿಸಿದ್ರು. ಆ ಯುವಕನನ್ನ ಕೇಳಿದೆ. ನಾನೂ ಹೋಗಿ ಅಲ್ಲಿಯೇ ಊಟ ಮಾಡ್ತೀನಿ. ನನ್ನ ತಿಂಗಳ ಸಂಬಳ ಚಳವಳಿಗೆ ಕೊಡ್ತೀನಿ ಅಂದಾ. ಇನ್ನು ಚಳುವಳಿ ನಿರತ ಮಧ್ಯ ವಯಸ್ಕರನ್ನು ಮಾತನಾಡಿಸಿದ್ರೆ ನನ್ನಪ್ಪ ಕೊಟ್ಟ ಭೂಮಿ ಇದು. ನಾವು ಉಳಿಸ್ಕೋಬೇಕು, ನಮ್ಮ ಬೆಳೆಗೆ ಖಾತ್ರಿಯಾದ ಬೆಲೆ ಸಿಗಬೇಕು ಅನ್ನೋ ಮಾತುಗಳನ್ನು ಕೇಳಿದೆ.

"ಟ್ರ್ಯಾಕ್ಟರ್‌ಗಳನ್ನು ಪಶ್ಚಿಮ ಬಂಗಾಳಕ್ಕೂ ತೆಗೆದುಕೊಂಡು ಹೋಗುತ್ತೇವೆ ಹುಷಾರ್"

"ತುತ್ತಿನ ಆಧಾರಕ್ಕೇ ಪೆಟ್ಟು ಬಿದ್ದಾಗ ಸುಮ್ನೆ ಕೂರೋಕೆ ಆಗುತ್ತಾ?"

ಸಾಮಾನ್ಯವಾಗಿ ಇಡೀ ದೇಶದಲ್ಲಿ ಯುವಕರಿಗೆ ಬದ್ಧತೆ ಇಲ್ಲಾ. ಅವ್ರದ್ದೇ ಏನೋ ಒಂಥರಾ ಬದುಕು ಅನ್ನೋ ಭಾವನೆ ಇದೆ. ಅದು ಸುಳ್ಳು. ಇಲ್ಲಿ ದಿಲ್ಲಿಯಲ್ಲಿ ಯುವಕರು ಚಳವಳಿಯಲ್ಲಿ ಭಾಗವಹಿಸೋದನ್ನು ನೋಡಿದ್ರೆ ಅಭಿಮಾನ ಉಕ್ಕಿಬರುತ್ತೆ. ಒಬ್ಬ ಐಟಿ ಇಂಜಿನಿಯರ್ ಕೇಳಿದ ನನಗೆ ಸರ್ಕಾರ ಕೆಲ್ಸ ಕೊಡುತ್ತೇನು?. ನನ್ನಪ್ಪ ಸಂಪಾದನೆ ಮಾಡಿರೋ ಭೂಮಿ ಇದೆ. ಅಲ್ಲೇ ದುಡಿದು ಬದುಕ್ತೀನಿ ಅಂದಾ.

ಕೊಂಚ ಬುದ್ಧವಂತರೆನಿಸಿಕೊಂಡವರನ್ನು ಮಾತನಾಡಿಸಿದೆ. ಅವ್ರ ತರ್ಕನೂ ಬಹಳ ಚೆನ್ನಾಗಿದೆ. ಭೂಮಿ ಆರೋಗ್ಯವಾಗಿರಬೇಕಂದ್ರೆ ರೈತ ಬೇಸಾಯ ಮಾಡ್ಬೇಕು. ಮಷಿನರಿಗಳಲ್ಲ. ಈಗ ಎಲ್ಲ ಕಡೆ ಆರೋಗ್ಯಕರವಾದ ಆಹಾರದ ಬಗ್ಗೆ ಮಾತನಾಡ್ತಾರೆ. ನಮಗೆ ಆರೋಗ್ಯಕರವಾದ ಆಹಾರ ಸಿಗಬೇಕಂದ್ರೆ ಅದು ರೈತನಿಂದ ಮಾತ್ರ ಸಾಧ್ಯ. ಕಂಪನಿ ಕೃಷಿಯಿಂದಲ್ಲ ಎಂದರು.

ಇನ್ನು ವಯಸ್ಸಾದವ್ರು ಕೆಲವರನ್ನು ಮಾತನಾಡಿಸಿದೆ. ನಾವು ಇಡೀ ಜೀವಮಾನ ಭೂಮಿಯನ್ನೇ ನಂಬಿ ಬದುಕಿದ್ವಿ. ಈಗಲೂ. ನಮ್ಮ ತುತ್ತಿನ ಆಧಾರಕ್ಕೇ ಪೆಟ್ಟು ಬಿದ್ದಾಗ ಸುಮ್ನೆ ಕೂರೋಕೆ ಆಗುತ್ತಾ ಎಂದು ಪ್ರಶ್ನಿಸುತ್ತಾರೆ. ದಿಲ್ಲಿಯ ಪ್ರತಿ ಗಡಿಯಲ್ಲೊಬ್ಬ ರೈತ ನಾಯಕರು ಇರ್ತಾರೆ. ಪ್ರತಿ ಸಂಜೆ ಆವತ್ತಿನ ಬೆಳವಣಿಗೆ ನಾಳಿನ ಚಳವಳಿಯ ರೂಪುರೇಷೆಯನ್ನು ವಿಡಿಯೋ ಕಾಲ್ ಮುಖಾಂತರ ಮಾಡುತ್ತಾರೆ. "ಕಿಸಾನ್ ಮಂಚ್" ಹೆಸರಿನ ಈ ಮೀಟಿಂಗ್ ಬಹಳ ಮಹತ್ವದ್ದು.

ಈ ಚಳವಳಿಗೆ ಕೊಂಚ ಹಣವಂತರು ಡೇರೆಗಳು, ಸೋಲಾರ್ ಲೈಟ್ ಗಳು, ಟಾಯ್ಲೆಟ್ ಗಳು, ಬೆಡ್ ಶೀಟ್ ಗಳು, ಬೆಡ್ ಗಳು ಹೀಗೆ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ. ಇಲ್ಲಿ ಚಳವಳಿ ನಿರತ ರೈತರಿಗೆ ಕೇವಲ ಮೋದಿಯ ಬಗ್ಗೆ ಭಯವಿಲ್ಲ. ಇಡೀ ವ್ಯವಸ್ಥೆಯ ಬಗ್ಗೆ ಭಯವಿದೆ. ಆ ಭಯವೇ ಚಳವಳಿಯನ್ನು ದಿನೇ ದಿನೇ ಗಟ್ಟಿ ಮಾಡ್ತಿದೆ.

"ಪ್ರೊ ಎಂ.ಡಿ ನಂಜುಂಡಸ್ವಾಮಿ ಹಾಕಿಕೊಟ್ಟ ಸಿದ್ಧಾಂತ ನಮ್ಮ ಜೊತೆಗಿದೆ"

ಪಂಜಾಬ್ ಹರಿಯಾಣದಲ್ಲಿ ಕರ್ನಾಟಕ ರಾಜ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘಗಳಿವೆ. ಒಂದೇ ಸಂಘಟನೆ ಹಲವು ಭಾಗಗಳಾಗಿರುವುದನ್ನೂ ನಾವು ನೋಡಿದ್ದೇವೆ? ಆದಾಗ್ಯೂ ಇದೀಗ ಸಂಘಟಿತ ಹೋರಾಟಕ್ಕೆ ಎಲ್ಲರೂ ಒಟ್ಟು ಸೇರಿದ್ದಾರೆ. ಕರ್ನಾಟಕದಲ್ಲಿ ಅಂಥದೊಂದು ಒಗ್ಗಟ್ಟು ಸಾಧ್ಯವೇ?

ಖಂಡಿತಾ ಸಾಧ್ಯ ಇದೆ. ಇಲ್ಲಾ ಅನ್ನೋ ಆಲೋಚನೆಯೇ ಬೇಡ. ರಾಜ್ಯದ ರೈತ ಸಂಘಕ್ಕೆ ಪ್ರೊ ಎಂ.ಡಿ ನಂಜುಂಡಸ್ವಾಮಿ ಹಾಕಿಕೊಟ್ಟ ಸಿದ್ಧಾಂತವಿದೆ. ನಮ್ಮಂಥ ಕೇಡರ್ ಸಿಸ್ಟಮ್ ಚಳವಳಿ ಇನ್ನೊಂದಿಲ್ಲ. ಎಂಡಿಎನ್ ನಂಥ ಮಹಾನ್ ರೈತ ನಾಯಕನನ್ನು ಪಡೆದ ರಾಜ್ಯವಿದು. ಎನ್ ಡಿ ಸುಂದರೇಶ್ ಮತ್ತು ರುದ್ರಪ್ಪನವರಂಥ ಹೃದಯವಂತರನ್ನು ನೋಡಿದ ರಾಜ್ಯವಿದು.

ಈಗ ದೇಶದ ಮಟ್ಟದಲ್ಲಿ ಏನು ಚಳವಳಿ ನಡೀತಿದೆ ಅಷ್ಟೇ ಗಟ್ಟಿಯಾದ ಚಳವಳಿಗಳು ರಾಜ್ಯದಲ್ಲಿ ನಡೆದಿವೆ. ಉತ್ತರ ಭಾರತದಲ್ಲಿ ಇದೀಗ ಹೇಗೆ ಸಂಘಟಿತರಾಗಿದ್ದಾರೋ ಅಂಥದ್ದೇ ಒಗ್ಗಟ್ಟೂ ಇಲ್ಲೂ ಬರಲಿದೆ.

ಜನವರಿ 26 ರಂದು ದಿಲ್ಲಿಯಲ್ಲಿ ಏನಾಯ್ತು ಅಂತ ನೀವೆಲ್ಲಾ ಗಮನಿಸಿರ್ತೀರಿ. ಒಂದು ಚಳವಳಿ ಹತ್ತಿಕ್ಕಲು ಲಾಟಿ ಚಾರ್ಚ್, ಅಶ್ರುವಾಯು, ಗೋಲಿ ಬಾರ್ ಹೀಗೆಲ್ಲಾ ಸರ್ಕಾರಗಳು ಏನೆಲ್ಲಾ ಮಾಡ್ತಿವೆ. ಆದ್ರೆ ಇಡೀ ಚಳವಳಿಗೆ ಕೆಟ್ಟ ಹೆಸರು ತರುವ ಕೆಲ್ಸಕ್ಕೆ ಸರ್ಕಾರ ಕೈ ಹಾಕ್ತು. ಚಳವಳಿಗೆ ‘ರಾಷ್ಟ್ರ ದ್ರೋಹ'ದ ಪಟ್ಟ ಕಟ್ಟಲು ಹುನ್ನಾರವೂ ನಡೆಯಿತು. ಅದರಿಂದ ಚಳವಳಿ ಇನ್ನೂ ಗಟ್ಟಿ ಆಯ್ತು ನೋಡಿ.

ಬೆಳಗಾವಿಯಲ್ಲಿ ರೈಲು ತಡೆ ಚಳವಳಿ; ರೈತರು ಪೊಲೀಸ್ ವಶಕ್ಕೆ

 ರಾಜಕೀಯ ಪಕ್ಷದೊಂದಿಗೆ ರೈತ ಸಂಘ ಗುರುತಿಸಿಕೊಂಡಿದ್ದಿದೆಯೇ?

ರಾಜಕೀಯ ಪಕ್ಷದೊಂದಿಗೆ ರೈತ ಸಂಘ ಗುರುತಿಸಿಕೊಂಡಿದ್ದಿದೆಯೇ?

ಇದೀಗ ಸಂಯುಕ್ತ / ಐಕ್ಯ ಹೋರಾಟ ಎಂದೆಲ್ಲಾ ಸಂಘಟನೆಗಳು ಸುದ್ದಿಯಲ್ಲಿವೆ. ಇದರಲ್ಲಿ ರಾಜಕೀಯ ಪಕ್ಷಗಳೂ ಭಾಗಿಯಾಗಿವೆ. ಹಿಂದೆ ಎಂದಾದರೂ ರೈತ ಸಂಘ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡದ್ದು ಇದೆಯೇ?

ಹಿಂದೆ ಎಂಡಿಎನ್ ಇಂಥ ಐಕ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸ್ತಿದ್ರು. ಶಿವಮೊಗ್ಗದಲ್ಲಿ ಒಮ್ಮೆ ರೈತ ಚಳವಳಿಯೊಂದರಲ್ಲಿ ಭಾಗವಹಿಸುವುದಾಗಿ ಅಲ್ಲಿಗೆ ಬಂದಿದ್ದ ಜಾರ್ಜ್ ಫರ್ನಾಂಡಿಸ್ ಅವರನ್ನು ವೇದಿಕೆ ಬರಲು ಬಿಟ್ಟಿರಲಿಲ್ಲ. ಅವರು ಯಾವುದೇ ಪಕ್ಷದ ಜೊತೆ ಕೈಜೋಡಿಸುತ್ತಿರಲಿಲ್ಲ.

ಆಹಾರ ಸಾರ್ವಭೌಮತೆ, ಬೀಜ ಸಂರಕ್ಷಣೆ, ರೈತನ ಭೂಮಿ ಒಡೆತನ ಇವೆಲ್ಲಾ ರಾಜಕೀಯೇತರವಾಗಿ ಆಗಬೇಕಾದ ಕೆಲಸ.

ಒಂದು ಉದಾಹರಣೆ ಹೇಳ್ತೀನಿ ನೋಡಿ. ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿ ಸಾಲ ವಸೂಲಿ ಕಾಯಿದೆಗೆ ತಿದ್ದುಪಡಿ ತಂದ್ರು. 101 c amendment. ರೈತ ತಾನು ಪಡೆದ ಸಾಲ ಯಾವುದೋ ಕಾರಣಕ್ಕೆ ವಾಪಸ್ ಕಟ್ದೇ ಇದ್ರೆ ಭೂಮಿ - ಆಸ್ತಿ ಹರಾಜು ಮಾಡೋ provision ಅದು. ಅದು ಆಗ್ಬಾರ್ದು ಅಂತಾ ನಾವು ರೈತ ಸಂಘದವ್ರು ಪ್ರತಿಭಟನೆ ಮಾಡಿದ್ವಿ. ಪಾದಯಾತ್ರೆ ಮೂಲಕ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದ್ವಿ. ರೈತ ಕುಲಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದ್ವಿ. ಈ ಕೆಲಸವನ್ನು ಯಾವುದೇ ರಾಜಕೀಯ ಪಕ್ಷ ಮಾಡಲಿಲ್ಲ. ಯಾವುದೇ ರಾಜಕೀಯ ಪಕ್ಷ ರೈತರನ್ನು ಉಳಿಸೋಕೆ ಸಾಧ್ಯವಿಲ್ಲವೆಂಬ ಸತ್ಯ ನಮ್ಮ ರೈತ ನೇತಾರಿಗೆ ತಿಳಿದಿತ್ತು.

ಆದಾಗ್ಯೂ ವಿಷಯಾಧಾರಿತವಾಗಿ ರಾಜಕೀಯ ಪಕ್ಷಗಳನ್ನು ನಮ್ಮ ಪರವಾಗಿ, ರೈತರ ಸಂಕಷ್ಟಗಳ ಪರವಾಗಿ ವಿಧಾನ ಸಭೆ ಮತ್ತು ಸಂಸತ್ ನಲ್ಲಿ ಮಾತನಾಡಲು ರೈತ ಹೋರಾಟಗಾರರು ಪ್ರೇರೇಪಿಸಬೇಕೇ ಹೊರತು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಲ್ಲ.

 ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಭಯ ಇದ್ದೇ ಇದೆ

ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಭಯ ಇದ್ದೇ ಇದೆ

ಕರ್ನಾಟಕದಲ್ಲಿ ಹತ್ತಾರು ರೈತ ಸಂಘಟನೆಗಳು ಹುಟ್ಟಿಗೆ ಕಾರಣವೇನು? ಪ್ರೊ ಎಂಡಿಎನ್ ನಂತರ ರೈತ ಸಂಘದಲ್ಲಿ ನಾಯಕತ್ವದ ಕಿತ್ತಾಟ ಬಂತಾ? ಮೊದಲೇ ಇತ್ತಾ?

ರೈತ ಸಂಘದಲ್ಲಿ ಪ್ರೊ ಇದ್ದಾಗಲೇ ಕಿತ್ತಾಟ ಇತ್ತು. ಕೆಲವು ನಾಯಕರು ಬಿಟ್ಟು ಹೋದರು. ರಾಜಕೀಯ ಪಕ್ಷಗಳಿಗೆ ಒಂದು ಭಯ ಇದ್ದೇ ಇದೆ. ರೈತರು ಒಗ್ಗಟ್ಟಾದರೆ ತಾವು ಹಳ್ಳಿಗಳಲ್ಲಿ ರಾಜಕೀಯ ಮಾಡಲಾಗುವುದಿಲ್ಲ ಎಂಬುದು ಗೊತ್ತಿದೆ. ಹಾಗಾಗಿ ರೈತ ಸಂಘದ ನಾಯಕರುಗಳನ್ನು ದಿಕ್ಕುತಪ್ಪಿಸುವ ಕೆಲಸ ಮೊದಲಿನಿಂದ ನಡೀತಾನೇ ಇದೆ. ಈಗಲೂ ಕೂಡಾ. ಆದ್ರೆ ಈ ವಿಘಟನೆ ಆಗಿರೋದು ನಾಯಕರು ಮಾತ್ರ. ರೈತರು ತಮ್ಮ ಸಂಕಷ್ಟಗಳ ನಡುವೆ ಸಂಘಟಿತರಾಗಿಯೇ ಇದ್ದಾರೆ. ರೈತ ಸಂಘದ ಬಗ್ಗೆ ಅಭಿಮಾನವುಳ್ಳವರಾಗಿದ್ದಾರೆ.

ಇದಕ್ಕಿಂತ ಮೂಲ ಕಾರಣ ಇನ್ನೂ ಒಂದಿದೆ. ಆರಂಭದಲ್ಲಿ ರೈತ ಸಂಘ ಶಿವಮೊಗ್ಗ, ಮಂಡ್ಯ, ಬೆಳಗಾವಿ, ಬಳ್ಳಾರಿಯ ನೀರಾವರಿ ಪ್ರದೇಶಗಳಲ್ಲಿ ಹೆಚ್ಚು ಸಂಘಟಿತವಾಗಿತ್ತು. ಅಲ್ಲಿನ ರೈತರು ಆರ್ಥಿಕವಾಗಿ ಸಬಲರಾಗಿದ್ದವರು. ಅವರು ತಮ್ಮ ಸಮಸ್ಯೆಗಳಿಗೋ ಬರಬೇಕಾದ ಸವಲತ್ತು- ಲಾಭಗಳಿಗೋ ಸಂಘಟಿತ ಹೋರಾಟ ಮಾಡಲು ಶಕ್ತರಾಗಿದ್ದರು. ಬೇರೆ ಬೇರೆ ಕಡೆ ಮಳೆ ಆಶ್ರಿತ ಪ್ರದೇಶಗಳಲ್ಲಿ ರೈತರಿಗೆ ಆ ಶಕ್ತಿ ಇರಲಿಲ್ಲ. ಆರಂಭದಲ್ಲಿ ರೈತ ಸಂಘ ಹುಟ್ಟಿದ್ದೇ ಕಬ್ಬು ಬೆಳೆಗಾರರ ಹೋರಾಟದಿಂದ.

ಈ ಎಲ್ಲವನ್ನು ನೋಡಿದ ಇತರೆ ಬೆಳೆಗಾರರಿಗೆ ಅಸಮಾಧಾನ ಆಯಿತು. ರಾಗಿ ಬೆಳೆಯೋರು, ತೊಗರಿ ಬೆಳೆಯೋರು ಆರ್ಥಿಕವಾಗಿಯೂ ಸಂಘಟನಾತ್ಮಕವಾಗಿಯೂ ಸಮರ್ಥವಾಗಿರಲಿಲ್ಲ. ಮುಂದೆ ಇವೆಲ್ಲವನ್ನು ಒಳಗೊಂಡ ರೈತ ಚಳವಳಿ ಕಂಡೆವು. ಇಷ್ಟರ ಜೊತೆಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭ ರೈತ ಸಂಘದ ನಾಯಕರನೇಕರು ಪಕ್ಷ ರಾಜಕೀಯದತ್ತ ಮುಖ ಮಾಡಿದ್ರು. ಸಿದ್ದರಾಮಯ್ಯ, ಬಿ.ಆರ್. ಯಾವಗಲ್, ಗೋವಿಂದೇಗೌಡರು, ಬಳ್ಳಾರಿಯ ರೇವಣ್ಣಸಿದ್ದಯ್ಯ ಹೀಗೆ ಅನೇಕರು ಸಂಘ ಬಿಟ್ಟು ಹೋದವರೇ.

 ಸಾಮೂಹಿಕ ನಾಯಕತ್ವ ತುಂಬಾ ಮುಖ್ಯ

ಸಾಮೂಹಿಕ ನಾಯಕತ್ವ ತುಂಬಾ ಮುಖ್ಯ

ಮುಂದಿನ ದಿನಗಳಲ್ಲಿ ರೈತ ಸಂಘಟನೆಗಳು ರೈತ ನಾಯಕರು ಏನು ಮಾಡಬೇಕು ? ಅವರ ಜವಾಬ್ದಾರಿಗಳೇನಾಗಿರಬೇಕು?

ರಾಜ್ಯದ ಮಟ್ಟಿಗೆ ಹೇಳುವುದಾದರೆ ಭೌಗೋಳಿಕವಾಗಿ, ಬೆಳೆಗಳಿಗೆ ಅನುಸಾರವಾಗಿ, ಕೃಷಿ ಪರಿಸರಕ್ಕೆ ಅನುಸಾರವಾಗಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಸ್ಪಷ್ಟ ನೋಟವುಳ್ಳ, ಪರಿಹಾರ ಮಾರ್ಗೋಪಾಯ ಸೂಚಿಸಬಲ್ಲ, ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಡಬಲ್ಲ ಪ್ರಾದೇಶಿಕ ನಾಯಕರುಗಳು ಒಂದು ಕಡೆ ಸೇರಬೇಕು. ಅದನ್ನೇ ಸಾಮೂಹಿಕ ನಾಯಕತ್ವ ಎನ್ನುವುದು.

ಈ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪ್ರತಿ ಸಮಸ್ಯೆಗಳಿಗೆ ಎಲ್ಲರೂ ಕೂಡಿ ಹೋರಾಟ ನಡೆಸಬೇಕು. ಅಂಥದೊಂದು ಕೆಲಸ ಆಗಬೇಕು. ರೈತ ಹೋರಾಟಗಾರರು ಸ್ಥಳೀಯ ಕಾರ್ಯಕರ್ತರು ರೈತರ ನಡುವೆ ಕೆಲಸ ಮಾಡಬೇಕೇ ವಿನಃ ಯಾವುದೋ ಪಕ್ಷದ ಜೊತೆಗಲ್ಲ.

English summary
Karnataka's farmer leader KT Gangadhar has shared some insights over farmers convention which is planned to carry in march at some districts of karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X