• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಸರ್ಕಾರ ಈ ವರ್ಷ ರೈತರಿಂದ ಸಾಲ ಮರುಪಾವತಿಗೆ ಹೇಳದಿರಲಿ"

|

ಕೊರೊನಾ ವೈರಸ್ ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡು ಕೊಳ್ಳಲು ಮೇ 7 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರೈತ ಸಂಘಟನೆ ಮುಖಂಡರುಗಳ ಸಭೆ ಕರೆದಿದ್ದರು.

ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸುತ್ತಿದೆ.

ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು 'ಕೊರೊನಾ’ ಎತ್ತಿ ತೋರಿಸುತ್ತಿದೆ

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಜೆ.ಎಂ. ವೀರಸಂಗಯ್ಯ ಅವರು ಒನ್ಇಂಡಿಯಾ ಗೆ ನೀಡಿದ ಸಂದರ್ಶನದ ಸಾರಾಂಶ ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. ಮುಂದೆ ಓದಿ...

ರೈತ ಮುಖಂಡ ವೀರಸಂಗಯ್ಯ ಅವರ ಮಾತು

ರೈತ ಮುಖಂಡ ವೀರಸಂಗಯ್ಯ ಅವರ ಮಾತು

ಕೃಷಿ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ನಾವು ರೈತರು ಸತತವಾಗಿ ಸಮಸ್ಯೆ ಅನುಭವಿಸುತ್ತಿದ್ದೇವೆ. ಈಗ ಕೊರೊನಾ ವೈರಸ್ ಕಾರಣಕ್ಕೆ ಆಗಿರೋ ಲಾಕ್ ಡೌನ್ ನಿಂದ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೇ ರೈತರಿಗೆ ಇನ್ನೂ ದೊಡ್ಡ ಸಮಸ್ಯೆ ಎದುರಾಗಿದೆ. ತೋಟಗಾರಿಕೆ ಬೆಳೆಗಳು, ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೆ ರೈತರಿಗೆ ನಷ್ಟವಾಗಿದೆ.

ಹಣ್ಣು, ತರಕಾರಿ, ಹೂವುಗಳು 20 ರಿಂದ 25 ದಿವಸದ ಅವಧಿಯಲ್ಲಿ ಹರಿದು(ಕಟಾವು ಮಾಡಿ) ಮಾರುಕಟ್ಟೆಗೆ ಒಯ್ಯಬೇಕು. ತಿಂಗಳಿಗೂ ಹೆಚ್ಚು ಕಾಲ ಮಾರುಕಟ್ಟೆಗೆ ತೆಗೆದುಕೊಂಡು ಹೋಗೇ ಇಲ್ಲ. ಕೃಷಿ ಚಟುವಟಿಕೆಗಳಿಗೆ ಅಂತ ಸರ್ಕಾರ ಸಡಿಲಿಸಿದ್ದ ಲಾಕ್ ಡೌನ್ ನಿಯಮಗಳೂ ರೈತರ ನೆರವಿಗೆ ಬರಲು ಸೋತವು.

ರೈತರು ಹೂಡಿದ ಬಂಡವಾಳ ಹಿಂದಿರುಗಿಲ್ಲ

ರೈತರು ಹೂಡಿದ ಬಂಡವಾಳ ಹಿಂದಿರುಗಿಲ್ಲ

ದಾಳಿಂಬೆ, ಬಾಳೆ ಸೇರಿದಂತೆ ಗುಲಾಬಿ ಕೂಡಾ ರಫ್ತು ಆಗುತ್ತಿದ್ದ ಕೃಷಿ ಉತ್ಪನ್ನಗಳು. ಮಲ್ಲಿಗೆ, ಸೇವಂತಿಗೆ ಹೀಗೆ ಅನೇಕ ಹೂವಿನ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈ ಎಲ್ಲಾ ಕೃಷಿ ಚಟುವಟಿಕೆಗಳಿಗೆ ರೈತರು ಸಾವಿರಾರು ಕೋಟಿ ರುಪಾಯಿ ಬಂಡವಾಳ ಹೂಡಿದ್ದಾರೆ. ರೈತರು ಹೂಡಿದ ಬಂಡವಾಳದ ಶೇ. 5-10 ರಷ್ಟು ಕೂಡಾ ಅವರಿಗೆ ಸಿಕ್ಕಿಲ್ಲ. ಸರ್ಕಾರ ಇದಕ್ಕಾಗಿ ಪಿ.ಸಾಯಿನಾಥ್ ಅವರಂಥವರ ನೇತೃತ್ವದಲ್ಲಿ ಸಮಿತಿ ಮಾಡಿ ರೈತರು ಕೃಷಿಯಲ್ಲಿ ಎಷ್ಟು ಬಂಡವಾಳ ಹೂಡಿದ್ದರು? ಈ ಲಾಕ್ ಡೌನ್ ನಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಅಂದಾಜು ಮಾಡಲಿ. ಎದೆ ಹೊಡೆದು ಹೋಗುವಷ್ಟು ದೊಡ್ಡ ಮೊತ್ತ ನಿಮ್ಮ ಮುಂದೆ ಕಾಣಿಸುತ್ತದೆ.

ರೈತರ ನೆರವಿಗೆ ಸರ್ಕಾರವೇ ನಿಲ್ಲಬೇಕು

ರೈತರ ನೆರವಿಗೆ ಸರ್ಕಾರವೇ ನಿಲ್ಲಬೇಕು

ರೈತರು ತಮ್ಮ ಹೊಲದಲ್ಲಿ ಹೂಡಿರುವ ಮೊತ್ತವನ್ನು ಸರ್ಕಾರ ಭರಿಸೋಕೆ ಸಾಧ್ಯವೇ ಇಲ್ಲ ಬಿಡಿ. ಕನಿಷ್ಟ ಅರ್ಧದಷ್ಟಾದರೂ ಅವರ ಕೈ ಸೇರುವಂತಾದರೆ ಒಳ್ಳೆಯದು, ಆ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು.

ಸರ್ಕಾರ ಯಾವುದೋ ಒಂದು ಮೂಲದಿಂದ ರೈತರು ಪಡೆದ ಸಾಲವನ್ನಷ್ಟೇ ಲೆಕ್ಕ ಮಾಡಿ ಕುಳಿತರೆ ಆಗುವುದಿಲ್ಲ. ಉದಾಹರಣೆಗೆ ಸಹಕಾರಿ ಬ್ಯಾಂಕ್ ಗಳಿಂದ ಅತ್ಯಂತ ಕಡಿಮೆ (ಶೇ.23) ಮಂದಿ ಸಾಲ ಪಡೆದಿದ್ದಾರೆ. ಇನ್ನುಳಿದವರು ಸ್ವಂತ ಬಂಡವಾಳ ಹೂಡಿದ್ದಾರೆ. ಅವರೆಲ್ಲರ ನೆರವಿಗೆ ಈಗ ಸರ್ಕಾರ ನಿಲ್ಲಬೇಕಿದೆ. ಇಡೀ ವರ್ಷ ರೈತರ ಪರವಾಗಿ ಸರ್ಕಾರವೇ ಶ್ಯೂರಿಟಿ ಕೊಡಬೇಕು.

ಕೃಷಿ ಬಿಕ್ಕಟ್ಟನ್ನು ಸರ್ಕಾರ ಅರಿಯಬೇಕು

ಕೃಷಿ ಬಿಕ್ಕಟ್ಟನ್ನು ಸರ್ಕಾರ ಅರಿಯಬೇಕು

ಸ್ವಾಭಿಮಾನದ, ಆತ್ಮಾಭಿಮಾನದ ರೈತ ಸಾಲ ವಸೂಲಿ ಎಂಬ "ದಾಳಿ'ಗೆ ತತ್ತರಿಸಿಬಿಡುತ್ತಾನೆ. ಮನೋಸ್ಥೈರ್ಯ ಕಳೆದುಕೊಳ್ಳುತ್ತಾನೆ. ಹಾಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಾನು ಮಾತನಾಡುತ್ತಿರುವುದು ಕೇವಲ ರೈತರ ವಿಷಯವಷ್ಟೇ ಎಂದು ತಿಳಿಯಬೇಡಿ. ಇದು ಈ ನಾಡಿನ ಮೂರು ಕೋಟಿ ಜನರ ಉದ್ಯೋಗದ ಪ್ರಶ್ನೆ. ಅವರು ಕಂಗಾಲಾದರೆ ನಾಡಿನ ಗತಿ ಏನು?

ಹಾಗಾಗಿ ಸರ್ಕಾರ ಪ್ರಸ್ತುತ ಕೃಷಿ ಬಿಕ್ಕಟ್ಟನ್ನು ಬಹಳ ಸೂಕ್ಷ್ಮವಾಗಿ ಅರಿತು ಪರಿಹಾರ ಮಾರ್ಗಗಳನ್ನು ಸಮಂಜಸವಾಗಿ ಹುಡುಕಿ ಆ ದಾರಿಯಲ್ಲಿ ನಡೆಯಬೇಕು.

(ಜೆ.ಎಂ. ವೀರಸಂಗಯ್ಯ. ಹಿರಿಯ ರೈತ ಮುಖಂಡರು, ಹಗರಿಬೊಮ್ಮನಹಳ್ಳಿ, ಬಳ್ಳಾರಿ)

ಸರಣಿ ಮುಂದುವರೆಯುವುದು..

English summary
All the fields have been left behind after being lockdown for the past one and a half months due to coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X