ಶಿಡ್ಲಘಟ್ಟ: ಮುಸುಕಿನ ಜೋಳ ಬೆಳೆದ ರೈತರಿಗೆ ಪ್ರಮುಖ ಸೂಚನೆ
ಶಿಡ್ಲಘಟ್ಟ, ಅಕ್ಟೋಬರ್, 30: ಪಶು ಆಹಾರ ಉತ್ಪಾದನಾ ಘಟಕವನ್ನು ಈ ಭಾಗದಲ್ಲಿ ಪ್ರಾರಂಭಿಸಲಾಗಿದ್ದು, ಮುಸುಕಿನ ಜೋಳ ಬೆಳೆಯುವ ಎಲ್ಲ ರೈತರು ನೇರವಾಗಿ ಘಟಕದ ಅಧಿಕಾರಿಗಳನ್ನು ಭೇಟಿ ಮಾಡಿ ಉತ್ತಮ ಬೆಲೆಗೆ ಮಾರಾಟ ಮಾಡಬೇಕು. ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು ಎಂದು ಕೆಪಿಸಿಸಿ, ಕೋ-ಆರ್ಡಿನೇಟರ್ ರಾಜೀವ್ ಗೌಡ ಮನವಿ ಮಾಡಿದರು.
ತಾಲೂಕಿನ ಸಾದಲಿ ಬಳಿ ನೂತನವಾಗಿ ಕಾರ್ಯಾರಂಭ ಮಾಡಿರುವ ಪಶು ಉತ್ಪಾದನಾ ಘಟಕದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಸುಪಾಸಿನ ರೈತರೊಂದಿಗೆ ಸಾದಲಮ್ಮ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಪಶು ಆಹಾರ ಘಟಕದಲ್ಲಿ 60 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಈಗ 30 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶೇಕಡಾ 90ರಷ್ಟು ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಥಳೀಯ ರೈತರು ತಾವು ಬೆಳೆದ ಜೋಳವನ್ನು ಈ ಘಟಕಕ್ಕೆ ಮಾರಾಟ ಮಾಡಿ ಅಧಿಕ ಬೆಲೆಯನ್ನು ನಿಮ್ಮದಾಗಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡಲಿದ್ದೇನೆ ಎಂದು ಭರವಸೆ ನೀಡಿದರು.
ನಿತ್ಯ 800 ಟನ್ ಪಶು ಆಹಾರ ಉತ್ಪಾದನೆ
ಪಶು ಆಹಾರ ಉತ್ಪಾದನಾ ಘಟಕದ ಎಂಡಿ ಶಶಿಧರ್ ಮಾತನಾಡಿ, ಸಾದಲಿ ಬಳಿ ಆರಂಭವಾಗಿರುವ ಪಶು ಆಹಾರ ಉತ್ಪಾದನಾ ಘಟಕವು ದೇಶದಲ್ಲೇ ಅತಿ ಹೆಚ್ಚು ಪಶು ಆಹಾರ ಉತ್ಪಾದಿಸುವ ಘಟಕವಾಗಿದೆ. ಪ್ರತಿ ನಿತ್ಯ 800 ಟನ್ ಪಶು ಆಹಾರ ಉತ್ಪಾದಿಸುವ ಸಾಮರ್ಥ್ಯ ಇದಕ್ಕಿದೆ. ಆದರೆ, ಮುಸುಕಿನ ಜೋಳ, ಲಭ್ಯತೆಯ ಆಧಾರದಲ್ಲಿ ಸದ್ಯ 300 ಟನ್‌ನಷ್ಟು ಮಾತ್ರವೇ ಉತ್ಪಾದನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದರು.
ರೈತರು ಮಧ್ಯವರ್ತಿಗಳನ್ನು ಸಂಪರ್ಕಿ ಸದೆ ನೇರವಾಗಿ ನಮ್ಮನ್ನು ಸಂಪರ್ಕಿಸಿದರೆ, ಮಾರುಕಟ್ಟೆ ದರಕ್ಕಿಂತ 50 ರೂಪಾಯಿ ಹೆಚ್ಚು ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ನೀಡಿ ಖರೀದಿಸುತ್ತೇವೆ. ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಂಬರ್ ಕೊಟ್ಟರೆ, ಮಾರನೇ ದಿನವೇ ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಪಶು ಆಹಾರ ಉತ್ಪಾದನಾ ಘಟಕ ಎಂಡಿ ಶಶಿಕುಮಾರ್, ಸ್ಥಳೀಯ ಮುಖಂಡ ಸಾದಲಿ ಗೋವಿಂದರಾಜು, ಡಿ.ಪಿ. ನಾಗರಾಜ್, ಓಬಳಪ್ಪ, ಶಿವಪ್ಪ, ವೆಂಕಟರೆಡ್ಡಿ, ಯುವ ಕಾಂಗ್ರೆಸ್‌ನ ನರೇಂದ್ರ, ಆನೂರು ರವಿ, ದೇವರಮಳ್ಳೂರು ರವಿ, ಗೌಡನಹಳ್ಳಿ ಮಂಜುನಾಥ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ರತಿಕ್ರಿಯಿಸಿ ಸಾದಲಿ ಬಳಿ ಪಶು ಆಹಾರ ಉತ್ಪದನಾ ಘಟಕ ಆರಂಭವಾಗಿದೆ. ಸ್ಥಳೀಯರಿಗೆ ಎಲ್ಲ ರೀತಿಯ ಅನುಕೂಲಗಳು ಸಿಗಬೇಕಿದೆ. ಅದಕ್ಕಾಗಿ ನನಗೆ ಚಿರಪರಿಚಿತರಾದ ಪಶು ಆಹಾರ ಘಟಕದ ಎಂಡಿ ಶಶಿಕುಮಾರ್ ಅವರನ್ನು ಕರೆಸಿ ಸ್ಥಳೀಯ ರೈತರೊಂದಿಗೆ ಸಭೆ ನಡೆಸಿದ್ದೇನೆ. ಮಾರುಕಟ್ಟೆ ದರಕ್ಕಿಂತಲೂ ಪ್ರತಿ ಕ್ವಿಂಟಾಲ್‌ಗೆ 50 ರೂ. ಹೆಚ್ಚಿನ ಬೆಲೆಯನ್ನು ನೀಡಿ ಖರೀದಿ ಮಾಡುವಂತೆ ಹಾಗೂ ಶೇಕಡಾ 90ರಷ್ಟು ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದಾಗ ಅವರು ಸಹ ಭರವಸೆ ನೀಡಿದ್ದಾರೆ. ಅದರ ಲಾಭ ಸ್ಥಳೀಯ ನಿರುದ್ಯೋಗ ಯುವಕರು, ಸ್ಥಳೀಯವಾಗಿ ಜೋಳ ಬೆಳೆಯುವ ರೈತರಿಗೆ ಸಿಗಬೇಕು ಎನ್ನುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.












Click it and Unblock the Notifications