• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?

|

ಕರೋನಾ ವೈರಸ್ (ಕೋವಿಡ್-19) ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮೇ 7 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸುತ್ತಿದೆ.

ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು 'ಕೊರೊನಾ' ಎತ್ತಿ ತೋರಿಸುತ್ತಿದೆ

ಸರಣಿ 6 ರಲ್ಲಿ ಖ್ಯಾತ ಪರಿಸರ ತಜ್ಞ, ಲೇಖಕ, ಚಿಂತಕ, ವಿಜ್ಞಾನ ಬರಹಗಾರ ಹಾಗೂ ಪತ್ರಕರ್ತರಾದ ನಾಗೇಶ ಹೆಗಡೆ ಅವರು ಒನ್ ಇಂಡಿಯಾ ಗೆ ನೀಡಿದ ಸಂದರ್ಶನದ ಪೂರ್ಣ ಪಾಠ ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ನಾಗೇಶ ಹೆಗಡೆ ಮಾತು: ವಲಸೆ ಕಾರ್ಮಿಕರನೇಕರು ಹಳ್ಳಿಗಳಿಗೆ ಹೋಗಿದ್ದಾರಲ್ಲಾ, ಅವರೆಲ್ಲಾ ಅಲ್ಲಿಯೇ ಇದ್ದು ಕೆಲಸ ಮಾಡಬಹುದೇ? ವಾಸ್ತವದಲ್ಲಿ ಅದು ಸಾಧ್ಯವೇ?

ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಏನೆಲ್ಲಾ ಮಾಡಬೇಕು?

"ಹಳ್ಳಿಗಳು ಹೇಗಿರಬೇಕು ಎಂಬುದಕ್ಕೆ ಒಂದು ಆದರ್ಶ ಉದಾಹರಣೆ ನಮ್ಮೆದುರು ಇದೆ. ಪುಣೆಯಿಂದ 115 ಕಿ.ಮೀ. ದೂರದಲ್ಲಿ ಹೀವ್ಡೆ ಬಝಾರ್‌ ಎಂಬ ಹಳ್ಳಿ ಇದೆ. ನಲ್ವತ್ತು ವರ್ಷಗಳ ಹಿಂದೆ ಇದೂ ತೀರ ದುಃಸ್ಥಿತಿಯಲ್ಲಿತ್ತು. ನೀರಿಲ್ಲ, ಕೃಷಿ ಅಷ್ಟಕ್ಕಷ್ಟೆ; ಹಳ್ಳಿಯ ಯುವಕರು ಒಬ್ಬೊಬ್ಬರಾಗಿ ಉದ್ಯೋಗ ಹುಡುಕಿಕೊಂಡು ದೂರ ಹೊರಟು ಹೋಗುತ್ತಿದ್ದರು. ಆಗ ಓದಲು ಹೋಗಿದ್ದ ಪೋಪಟ್ಲಾಲ್‌ ಪವಾರ್‌ ಎಂಬ ಯುವಕ ಎಮ್‌ಕಾಮ್‌ ಮುಗಿಸಿ ಊರಿಗೆ ಮರಳಿದ, ಸರಪಂಚ್‌ ಹುದ್ದೆಗೆ ಚುನಾಯಿತನಾದ. ಮೊದಲಿಗೆ ಆತ ಜಲಾನಯನ ಅಭಿವೃದ್ಧಿಗೆ ಆದ್ಯತೆ ನೀಡಿದ. ಅಂದರೆ ಯಾವುದೋ ಡ್ಯಾಮ್‌ನಿಂದ ನೀರನ್ನು ಹರಿಸಲಿಲ್ಲ. ಕೇವಲ 440 ಮಿ.ಮೀ. ಮಳೆಬೀಳುವ ಆ ಊರಲ್ಲಿ ಮಳೆನೀರು ಸಂಗ್ರಹ, ಹನಿ ನೀರಾವರಿ, ಮಣ್ಣಿನ ರಕ್ಷಣೆ, ವನ ಸಂವರ್ಧನೆ, ಡೇರಿ ಅಭಿವೃದ್ಧಿ ಇತ್ಯಾದಿಗಳಿಗೆ ಮೀಸಲಿದ್ದ ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಿದ. ಕೃಷಿತಜ್ಞರನ್ನು ಕರೆಸಿ ಸುಸ್ಥಿರ ಅಭಿವೃದ್ಧಿಯ ಪಾಠ ಹೇಳಿಸಿದ.

 ಹತ್ತೇ ವರ್ಷಗಳಲ್ಲಿ ಹಿಮ್ಮುಖ ವಲಸೆ ಆರಂಭ

ಹತ್ತೇ ವರ್ಷಗಳಲ್ಲಿ ಹಿಮ್ಮುಖ ವಲಸೆ ಆರಂಭ

ಹತ್ತೇ ವರ್ಷಗಳಲ್ಲಿ ಹಿಮ್ಮುಖ ವಲಸೆ ಆರಂಭವಾಯಿತು. ಊರು ಬಿಟ್ಟು ಹೋಗಿದ್ದ 40 ಕುಟುಂಬಗಳು ಮುಂದಿನ ಹತ್ತು ವರ್ಷಗಳಲ್ಲಿ ಹಿಂದಿರುಗಿದವು. ನೆಟ್ಟ ಗಿಡಗಳು ಮರವಾದವು. ಅಂತರ್ಜಲ ಮಟ್ಟ ಏರಿತು. ಕೃಷಿ (ಮುಖ್ಯವಾಗಿ ಈರುಳ್ಳಿ, ಹೂಬೇಸಾಯ) ಮತ್ತು ಡೇರಿಯಿಂದಾಗಿ ಬಡತನ ಬಹುತೇಕ ತೊಲಗಿತು. ಇಂದು 240 ಕುಟುಂಬಗಳಿರುವ ಆ ಗ್ರಾಮದಲ್ಲಿ 54 ದಶಲಕ್ಷಾಧೀಶರಿದ್ದಾರೆ. 1995ರಲ್ಲಿ ಬಿಪಿಎಲ್‌ ಕಾರ್ಡುದಾರರ ಕುಟುಂಬಗಳ ಸಂಖ್ಯೆ 180 ಇದ್ದುದು ಈಗ ಕೇವಲ ಮೂರಕ್ಕೆ ಇಳಿದಿದೆ.

ಅಂತರ್ಜಲ ಮಟ್ಟ ಎಷ್ಟು ಏರಿದೆ ಎಂದರೆ, ಯಾವುದೇ ಹ್ಯಾಂಡ್‌ಪಂಪ್‌ನಲ್ಲಿ ಮೊದಲ ಬಾರಿ ಪಂಪ್‌ ಒತ್ತಿದಾಗ ನೀರು ಬಾರದಿದ್ದರೆ 200 ರೂಪಾಯಿ ಬಹುಮಾನ ಕೊಡುವುದಾಗಿ ನಾಲ್ಕು ವರ್ಷಗಳ ಹಿಂದೆ ಪವಾರ್‌ ಘೋಷಿಸಿದ್ದರು. ನಂತರ ಇನ್ನೊಂದು ಘೋಷಣೆ ಮಾಡಿದ್ದಾರೆ. ಒಂದೇ ಒಂದು ಸೊಳ್ಳೆಯನ್ನು ತೋರಿಸಿದರೆ ಗ್ರಾಮ ಪಂಚಾಯ್ತಿ ಸಾವಿರ ರೂಪಾಯಿ ಕೊಡುತ್ತದಂತೆ. ಒಂದು ಆದರ್ಶ ಗ್ರಾಮದಲ್ಲಿ ಏನೇನಿರಬೇಕೊ ಎಲ್ಲವೂ ಅಲ್ಲಿವೆ.ಶಾಲೆ, ಆಸ್ಪತ್ರೆ, ಮಕ್ಕಳ ಬ್ಯಾಂಕ್‌, ಪಂಚಾಯ್ತಿ ಕಚೇರಿಯಲ್ಲಿ ಎಟಿಎಮ್‌, ಸಮುದಾಯ ಭವನ ಇತ್ಯಾದಿ. ಊರಿನ ಒಂದೇ ಒಂದು ಮುಸ್ಲಿಮ್‌ ಕುಟುಂಬಕ್ಕೆಂದು ಮಸೀದಿ ನಿರ್ಮಿಸಿ ಕೊಡಲಾಗಿದೆ.

 ಬಝಾರನ್ನು ಪ್ರವಾಸೀ ತಾಣವನ್ನಾಗಿ ಮಾಡಿವೆ

ಬಝಾರನ್ನು ಪ್ರವಾಸೀ ತಾಣವನ್ನಾಗಿ ಮಾಡಿವೆ

ಆದರ್ಶ ಗ್ರಾಮ ಹೇಗಿರಬೇಕು ಎಂಬುದನ್ನು ತೋರಿಸಲಿಕ್ಕೆ ಸರಕಾರಿ ಇಲಾಖೆಗಳು ಈಗ ಹೀವ್‌ಡೆ ಬಝಾರನ್ನು ಪ್ರವಾಸೀ ತಾಣವನ್ನಾಗಿ ಮಾಡಿವೆ.

ಈ ಹಳ್ಳಿ ಅಪರೂಪದಲ್ಲಿ ಅಪರೂಪವಾದ ಉದಾಹರಣೆ ? ಎಲ್ಲ ಕಡೆ ಹೀಗೆ ಮಾಡಲು ಸಾಧ್ಯವೇ?

ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಿದ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿವೆ. ಅದು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್‌. ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ (ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ). ಕಳೆದ ನಾಲ್ಕು ವರ್ಷಗಳಿಂದ ಆಮಿರ್‌ ಖಾನ್‌ ಆರಂಭಿಸಿದ ವಾಟರ್‌ ಕಪ್‌ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ.

ತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆ

ಅಂಥ ಉದಾಹರಣೆಗಳೆಲ್ಲ ಕೆಲವು ಛಲವಂತರ ವ್ಯಕ್ತಿಗತ ಆಸಕ್ತಿಯ ಫಲಿತಗಳೇ ವಿನಾ ರಾಷ್ಟ್ರಪಿತನ ಕನಸಿನ ‘ಗ್ರಾಮಸ್ವರಾಜ್ಯ' ನಿರ್ಮಾಣಕ್ಕೆ ಭಾರತ ಸರಕಾರ ಜಾರಿಗೆ ತಂದ ನೀತಿಯ ಪ್ರತಿಫಲವೆನ್ನುವಂತಿಲ್ಲ.

 ಬಾಣಲೆಯಿಂದ ಬೆಂಕಿಗೆ ಧುಮುಕಿದಂತಾಗಿದೆ

ಬಾಣಲೆಯಿಂದ ಬೆಂಕಿಗೆ ಧುಮುಕಿದಂತಾಗಿದೆ

ಹಾಗೆ ನೋಡಿದರೆ ನಮ್ಮ ದೇಶದ ಎಲ್ಲ ಪಂಚವಾರ್ಷಿಕ ಯೋಜನೆಗಳೂ ಅದರ ನಂತರದ ನೀತಿ ಆಯೋಗದ ಅಭಿವೃದ್ಧಿ ಸೂತ್ರಗಳೂ ಗ್ರಾಮ ನಿಸರ್ಗದ ಸಂಪತ್ತನ್ನು ಮತ್ತು ಪ್ರತಿಭೆಗಳನ್ನು ನಗರಗಳತ್ತ ಸೆಳೆಯುವತ್ತ ತುಂಬ ದೂರ ಸಾಗಿ ಬಂದಿವೆ. ಆ ಸೆಳೆತದಲ್ಲೇ ನಗರಗಳತ್ತ ಕೊಚ್ಚಿ ಹೋದವರು ಈ ಇಷ್ಟೂ ವರ್ಷ ಅಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿದ್ದರು. ಕಾರ್ಖಾನೆ, ಹೊಟೆಲ್‌, ಕ್ರೀಡಾಂಗಣ, ವಿಮಾನ ನಿಲ್ದಾಣ, ಪೆಟ್ರೋಲ್‌ ಬಂಕ್‌ಗಳಲ್ಲಿ ದುಡಿಯುವವರ ಲೆಕ್ಕಾಚಾರ ಬಿಡಿ, ಕೇವಲ ಕಟ್ಟಡ ನಿರ್ಮಾಣ ಕೆಲಸದಲ್ಲೇ ಅಂದಾಜು 2.2 ಕೋಟಿ ಕಾರ್ಮಿಕರು ನಿರತರಾಗಿದ್ದರೆಂದು ಸರಕಾರಿ ಅಂಕಿಸಂಖ್ಯೆಗಳು ಹೇಳುತ್ತವೆ.

ಕೊರೊನಾ ವೈರಾಣುವಿನ ಕಾರಣದಿಂದಾಗಿ ಅಂಥವರೆಲ್ಲ ನಗರಗಳನ್ನು ಬಿಟ್ಟು ಬರಿಗೈಯಲ್ಲಿ, ಬರಿಹೊಟ್ಟೆಯಲ್ಲಿ, ಬರಿಗಾಲಲ್ಲಿ ತಂತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ದೇಶ ವಿಭಜನೆಯ ನಂತರದ ಅತ್ಯಂತ ಕರುಣಾಜನಕ, ದಾರುಣ ದೃಶ್ಯಗಳನ್ನು ನಾವು ಹೆದ್ದಾರಿಗಳಲ್ಲಿ, ರೇಲ್ವೆ ಹಳಿಗಳ ಮಧ್ಯೆ ನಾವು ನೋಡುತ್ತಿದ್ದೇವೆ. ಏನೆಲ್ಲ ಸಂಕಷ್ಟಗಳನ್ನು ದಾಟಿ ಊರಿಗೆ ಹಿಂದಿರುಗಿದ ಈ ದುರ್ದೈವಿಗಳು ಬಾಣಲೆಯಿಂದ ಬೆಂಕಿಗೆ ಧುಮುಕಿದಂತಾಗಿದೆ. ಹಳ್ಳಿಗಳು ಮೊದಲಿಗಿಂತ ಹೆಚ್ಚು ದುಃಸ್ಥಿತಿಯಲ್ಲಿವೆ. ಸಾರ್ವತ್ರಿಕ ಗೃಹಬಂಧನದ ಪರಿಣಾಮವಾಗಿ ಗ್ರಾಮೀಣ ಆರ್ಥಿಕತೆಯೂ ಕುಸಿದು ಕೂತಿದೆ. ನಿರುದ್ಯೋಗ ಸಮಸ್ಯೆ ಈಗ ಹಠಾತ್ತಾಗಿ ಮೊದಲಿಗಿಂತ ಅದೆಷ್ಟೊ ಪಟ್ಟು ಹೆಚ್ಚಾಗಿದೆ.

 ಸ್ವಾವಲಂಬನೆ ನಮ್ಮ ಮೂಲಮಂತ್ರ ಆಗಬೇಕು

ಸ್ವಾವಲಂಬನೆ ನಮ್ಮ ಮೂಲಮಂತ್ರ ಆಗಬೇಕು

ಕೊರೊನಾದ "ಅಭಿಶಾಪವನ್ನೇ ಅವಕಾಶವನ್ನಾಗಿ ಪರಿವರ್ತಿಸಬೇಕು; ಸ್ವಾವಲಂಬನೆ ನಮ್ಮ ಮೂಲಮಂತ್ರ ಆಗಬೇಕು" ಎಂದು ಪ್ರಧಾನ ಮಂತ್ರಿ ಮೋದಿಯವರೇನೊ ಚಂದದ ಮಾತನ್ನು ಹೇಳಿದ್ದಾರೆ. ಈ ಪರಿವರ್ತನೆ ಸಾಧ್ಯವಾಗಲೆಂದು 20 ಲಕ್ಷ ಕೋಟಿ ರೂಪಾಯಿಗಳ (ದೇಶದ ಒಟ್ಟಾರೆ ನಿವ್ವಳ ಉತ್ಪನ್ನದ ಶೇ.10ರಷ್ಟು) ದೊಡ್ಡ ಮೊತ್ತವನ್ನೂ ಮೀಸಲಿಡುವುದಾಗಿ ಹೇಳಿದ್ದಾರೆ. ಆ ಕನ್ನಡಿಯ ಗಂಟಿನ ಬಹುದೊಡ್ಡ ಪಾಲು ಗ್ರಾಮಗಳತ್ತ ಹರಿದು ಬಂದೀತೆಂದು ನಾವು ಆಶಿಸುವಂತಿಲ್ಲ. ಕಾರ್ಪೊರೇಟ್‌ ಕ್ಷೇತ್ರದಲ್ಲಿ ಹಸಿದು ಕೂತ ದೊಡ್ಡ ದೊಡ್ಡ ಬಕಗಳು ಅದಕ್ಕಾಗಿ ಕಾದು ಕೂತಿವೆ. ಜೊತೆಗೆ ಅತಿಚಿಕ್ಕ, ಚಿಕ್ಕ ಹಾಗೂ ಮಧ್ಯಮ ಗಾತ್ರದ ಎಮ್ಮೆಸ್ಸೆಮ್ಮಿ ಉದ್ಯಮಗಳಿಗೂ ಕೊಡುವುದಾಗಿ ಸರಕಾರ ಹೇಳಿದೆ. ಗ್ರಾಮಗಳಿಗೂ ಕೊಂಚ ಪಾಲು ಸಿಕ್ಕೀತೆಂದರೂ ಗುಬ್ಬಿಗೆ ಎಸೆದ ಕಾಳುಗಳು ಕಾಗೆಯ ಪಾಲಾಗದಂತೆ ಕಾವಲು ಕಾಯುವವರಾರು?

ಯುರೇನಿಯಂ ಗಣಿಗಾರಿಕೆಯಿಂದ ಬದುಕೇ ನಾಶ : ನಾಗೇಶ್

ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ರಾಷ್ಟ್ರನಾಯಕರ ದೃಷ್ಟಿಯ ‘ಸ್ವಾವಲಂಬನೆ' ಎಂಬುದು ರಾಷ್ಟ್ರಮಟ್ಟದ ಸ್ವಾವಲಂಬನೆಯೋ ಗ್ರಾಮಮಟ್ಟದ್ದೋ ಎಂಬುದು ಈಗಲೂ ಸ್ಪಷ್ಟವಿಲ್ಲ. ಸರಕಾರ ಮೊನ್ನೆ ಘೋಷಿಸಿದ ಆ ದೊಡ್ಡ ಮೊತ್ತದ ಧನಸಹಾಯ ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೇ ಹರಿದು ಬರುತ್ತದೆ ಎಂದೇ ಅಂದುಕೊಂಡರೂ ಉದ್ಯಮಿಗಳು ಉತ್ಪಾದಿಸುವ ಸರಕುಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಮಾರುಕಟ್ಟೆಯ ವಾಣಿಜ್ಯವನ್ನೇ ನೆಚ್ಚಿಕೊಂಡು ಇಷ್ಟು ವರ್ಷ ಕೊಳ್ಳುಬಾಕರ ಸೈನ್ಯವನ್ನೇ ಸೃಷ್ಟಿ ಮಾಡಿಕೊಂಡ ನಾವು ಹಠಾತ್ತಾಗಿ ಎಲ್ಲರ ಜೇಬು ಖಾಲಿಯಾಗಿರುವಾಗ ಅರ್ಥವ್ಯವಸ್ಥೆಯನ್ನು ಮೇಲೆತ್ತುವುದು ಹೇಗೆ?

ಈ ತೊಡಕಿನ ಪ್ರಶ್ನೆಗಳನ್ನೆಲ್ಲ ಸದ್ಯಕ್ಕೆ ಬದಿಗಿಡೋಣ. ಕೊರೊನಾ ದಾಳಿಯ ನಂತರದ ದಿನಗಳಲ್ಲಿ ಏನೋ ಭಾರೀ ಬದಲಾವಣೆ ಆದೀತೆಂದು ಎಲ್ಲರೂ ಕನಸು ಕಾಣುತ್ತಿದ್ದಾರೆ. ನಾವೂ ಕಾಣೋಣ. ಈಗಿನ ಲಾಕ್‌ಡೌನ್‌ ಸ್ಥಿತಿಯಲ್ಲಿ ಕನಸು ಕಾಣುವುದನ್ನು ಬಿಟ್ಟರೆ ಬೇರೇನು ಮಾಡಲು ಸಾಧ್ಯ?

 ಚಿಂತಕ ನಾಗೇಶ ಹೆಗಡೆ ಕನಸು

ಚಿಂತಕ ನಾಗೇಶ ಹೆಗಡೆ ಕನಸು

ನನ್ನ ಕನಸು ಏನೆಂದರೆ, ಗ್ರಾಮೀಣ ಆರ್ಥಿಕತೆ ಎಂಬುದು ಸ್ವಾವಲಂಬನೆಯ ಸುತ್ತವೇ ವಿಕಾಸವಾಗಬೇಕು. ತಮಿಳು ನಾಡಿನ ಆ ಒಡಂತ್ತುರೈ ಗ್ರಾಮದ ಜನರು ಸೌರವಿದ್ಯುತ್‌ ಉತ್ಪಾದನೆ ಮಾಡಿ, ತಮಗೆ ಬೇಕಿದ್ದಷ್ಟನ್ನು ಬಳಸಿಕೊಂಡು ಉಳಿದವನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷಕ್ಕೆ 20 ಲಕ್ಷ ರೂಪಾಯಿಗಳ ಆದಾಯ ಅದರಿಂದಲೇ ಬರುತ್ತಿದೆ. ಅಲ್ಲಿ ನನಗೆ ಕಂಡ ವಿಶೇಷ ಏನೆಂದರೆ ಅದು ಜಾಗತಿಕ ಕಲ್ಯಾಣದ ಮಾರ್ಗವನ್ನು ತೋರುತ್ತಿದೆ. ಬರುತ್ತಿರುವ ಬಿಸಿ ಪ್ರಳಯದ ದಿನಗಳಲ್ಲಿ ಪೆಟ್ರೋಲ್‌ ಡೀಸೆಲ್‌ ಮೇಲಿನ ಅವಲಂಬನೆಯನ್ನು ಕಮ್ಮಿ ಮಾಡುತ್ತ ಹೋಗಬೇಕು ಎಂಬ ಆದರ್ಶದ ಬುನಾದಿ ಈ ಗ್ರಾಮ ಪಂಚಾಯ್ತಿಯಲ್ಲಿ ಕಾಣುತ್ತಿದೆ.

ದೇಶಕ್ಕೆ ಬೇಕಿರುವ ಒಟ್ಟೂ ಪೆಟ್ರೋಲಿಯಂ ಉತ್ಪನ್ನಗಳ ಶೇಕಡಾ 82 ಪಾಲನ್ನು ನಾವು ವಿದೇಶಗಳಿಂದಲೇ ತರಿಸಿಕೊಳ್ಳುತ್ತಿದ್ದೇವೆ. ನಮಗೆ ಬೇಕಾದ ಈ ಮಹತ್ವದ ಶಕ್ತಿಮೂಲಗಳಿಗೆ ನಾವು ಡಾಲರ್‌ ಸುರಿದು ಅರಬ್ಬರನ್ನು ಶ್ರೀಮಂತ ಮಾಡುವ ಬದಲು ನಮ್ಮದೇ ಗ್ರಾಮಗಳಿಂದ ಜೈವಿಕ ಪೆಟ್ರೋಲ್‌, ಡೀಸೆಲ್‌ ಪಡೆಯುವಂತಾದರೆ ಮೇಲಲ್ಲವೆ? ಸೌರಶಕ್ತಿ, ಗಾಳಿಶಕ್ತಿಯಿಂದಷ್ಟೇ ಅಲ್ಲ, ಹಳ್ಳಿಗಳ ಬಂಜರು ಭೂಮಿಗಳಲ್ಲಿ, ಬಸವಳಿದ ಗುಡ್ಡಬೆಟ್ಟಗಳಲ್ಲಿ ಇಂಧನವನಗಳನ್ನು ಸೃಷ್ಟಿ ಮಾಡಿಕೊಂಡರೆ ಅದರಿಂದ ನಿರಂತರವಾಗಿ ಬಯೊಡೀಸೆಲ್‌, ಜೈವಿಕ ಪೆಟ್ರೋಲನ್ನೂ ಉತ್ಪಾದನೆ ಮಾಡಬಹುದು. ಅದು ಬತ್ತಿ ಹೋಗುವ ಪ್ರಶ್ನೆಯೇ ಇಲ್ಲ. ಕೃಷಿ ತ್ಯಾಜ್ಯಗಳಿಂದ, ಸೆಗಣಿ ಅನಿಲದಿಂದ ಶಕ್ತಿಯನ್ನು ಉತ್ಪಾದಿಸಬಹುದು.

ಈ ತಂತ್ರಜ್ಞಾನಗಳೆಲ್ಲ ಸಾಕಷ್ಟು ಸುಧಾರಿಸಿವೆಯಾದರೂ ಹಳ್ಳಿಗಳಲ್ಲಿ ಅವು ಜಾರಿಗೆ ಬಂದಿಲ್ಲ -ಏಕೆಂದರೆ ಅವೆಲ್ಲವನ್ನು ನಡೆಸಲು ಬೇಕಾದ ಯುವಕ ಯುವತಿಯರು ನಗರಗಳನ್ನು ಸೇರಿಕೊಂಡಿದ್ದರು. ಈಗ ಅವರೆಲ್ಲ ಹಿಂದಿರುಗಲು ಬಯಸಿದರೆ, ಶಕ್ತಿ ಉತ್ಪಾದನೆಗೆ ಒಂದು ಮೀಸಲು ಪಡೆಯೇ ಪಂಚಾಯ್ತಿ ಮಟ್ಟಕ್ಕೆ ಬಂದಿಳಿದಂತಾಗುತ್ತದೆ. ಹೀವ್‌ಡೆ ಬಝಾರ್‌ನ ಮಾದರಿಯ ಅಥವಾ ವಾಟರ್‌ ಕಪ್‌ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಾಕಡ್‌ಧಾರಾ ಗ್ರಾಮದ ಮಾದರಿಯಲ್ಲಿ ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ಡೇರಿ, ಮೀನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ- ಹೀಗೆ ನಾನಾ ಬಗೆಯ ವಿಕಾಸ ಮಾರ್ಗಗಳನ್ನು ಒಂದೊಂದಾಗಿ ಇಲ್ಲವೆ ಒಟ್ಟೊಟ್ಟಾಗಿ ರೂಪಿಸಬಹುದಲ್ಲ? ದಶಲಕ್ಷಾಧೀಶರನ್ನು ಸೃಷ್ಟಿ ಮಾಡಲು ದಶಕಗಳೇ ಬೇಕಾಗುತ್ತದಾದರೂ ಸದ್ಯಕ್ಕೆ ಗ್ರಾಮೀಣ ಜನರ ಕೈಲ್ಲಿ ದುಡ್ಡು ಓಡಾಡುವಂತೆ ಮಾಡಬಹುದಲ್ಲ?

 ಪ್ರೊ.ಎಂ.ಡಿ.ಎನ್ ಮಾತನ್ನು ಸ್ಮರಿಸಬೇಕು

ಪ್ರೊ.ಎಂ.ಡಿ.ಎನ್ ಮಾತನ್ನು ಸ್ಮರಿಸಬೇಕು

ಹಳ್ಳಿಯವರು ತಮ್ಮೆಲ್ಲ ಸ್ವಾತಂತ್ರ್ಯವನ್ನೂ ನಗರಗಳಿಗೆ ಮಾರಿಕೊಂಡಿದ್ದಾರೆಂದು ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಹೇಳುತ್ತಿದ್ದ ಮಾತಿಗೆ ಇಂದು ಪ್ರತಿ ಹಳ್ಳಿಯಲ್ಲೂ ಸಾಕ್ಷ್ಯಗಳು ಸಿಗುತ್ತಿವೆ. ರೈತನಿಗೆ ಬೇಕಿದ್ದ ಗೊಬ್ಬರ, ಮೇವು, ಶಕ್ತಿಮೂಲ, ಬಿತ್ತನೆ ಬೀಜ, ಇಂಧನ, ಔಷಧ ಎಲ್ಲವೂ ದೊಡ್ಡ ಕಂಪನಿಗಳ ಮುಷ್ಟಿಗಳಲ್ಲಿವೆ. ವಿಷಗಳೂ! ಪೇಟೆಗೆ ಹೋಗಿ ಅವರು ಹೇಳಿದ ಬೆಲೆಯನ್ನು ತೆತ್ತರೆ ಮಾತ್ರ ರೈತ ಬದುಕುವಂತಾಗಿದೆ. ಆ ಸ್ವಾತಂತ್ರ್ಯಗಳನ್ನು ಮರಳಿ ಹಳ್ಳಿಗಳಿಗೆ ತರಲು ಸಾಧ್ಯವಿದೆ. ಅಷ್ಟೇಕೆ, ಮೊರ, ಪೊರಕೆ, ಹಿಡಿಕೆ, ಹಗ್ಗ ಎಲ್ಲವನ್ನೂ ಸಸ್ಯಮೂಲದ ಪ್ಲಾಸ್ಟಿಕ್ಕಿನಿಂದ ತಯಾರಿಸಲು ತಂತ್ರಜ್ಞಾನ ಲಭ್ಯವಿದೆ. ಅವಕ್ಕೇನೂ ಅಂಥ ದೊಡ್ಡ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕಿಲ್ಲ. ತಾಲ್ಲೂಕಮಟ್ಟದ ಚಿಕ್ಕಚಿಕ್ಕ ಉದ್ಯಮಘಟಕಗಳಲ್ಲೇ ಅವನ್ನೆಲ್ಲ ಉತ್ಪಾದನೆ ಮಾಡಬಹುದು. ಉತ್ತಮ ಗುಣಮಟ್ಟದ ಸಾಬೂನು, ಟೂಥ್‌ಪೇಸ್ಟ್‌, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ನೆಲ ಒರೆಸುವ ತೈಲ, ಪ್ಲಾಸ್ಟಿಕ್‌ ಚಪ್ಪಲಿಗಳು, ಪ್ಯಾರಾಸಿಟೆಮಾಲ್‌, ಆಯುರ್ವೇದ ಔಷಧಗಳು, ಎಲ್ಲವನ್ನೂ ತಾಲ್ಲೂಕಿನ ಪರಿಧಿಯಲ್ಲಿ ತಯಾರಿಸಬಹುದು. ಈ ಯಾವುದಕ್ಕೂ ನೂರಾರು ಎಕರೆಗಳ ಉದ್ಯಮ ಸ್ಥಾವರಗಳ ಅಗತ್ಯವಿಲ್ಲ. ಸಾಗರ ತಾಲ್ಲೂಕಿನ ಕೆಲವು ಕೃಷಿಮಿತ್ರರು ಸೇರಿ ಪಶುಆಹಾರವನ್ನು ತಯಾರಿಸಿಕೊಳ್ಳುತ್ತಿದ್ದ ಉದಾಹರಣೆ ನನಗೆ ನೆನಪಿಗೆ ಬರುತ್ತಿದೆ.

 ‘ಚಿಕ್ಕದು-ಚೊಕ್ಕದು’ ಎಂಬ ಪರಿಕಲ್ಪನೆ

‘ಚಿಕ್ಕದು-ಚೊಕ್ಕದು’ ಎಂಬ ಪರಿಕಲ್ಪನೆ

ಗಾಂಧೀಜಿ, ಜೆಸಿ ಕುಮಾರಪ್ಪ, ಇಎಫ್‌ ಶ್ಯುಮೇಕರ್‌ ಎಲ್ಲರೂ ಪ್ರತಿಪಾದಿಸಿದ್ದ ‘ಚಿಕ್ಕದು-ಚೊಕ್ಕದು' ಎಂಬ ಪರಿಕಲ್ಪನೆಯನ್ನು ಕೊರೊನೋತ್ತರ ಯುಗದಲ್ಲಿ ಜಾರಿಗೆ ತರಲು ಸಾಧ್ಯವಿದೆ. ನನ್ನ ಕನಸಿನ ಮುಂದುವರಿದ ಭಾಗ ಏನೆಂದರೆ ಈ ಎಲ್ಲ ವಿಧಾನಗಳಿಂದ ಗ್ರಾಮೀಣ ಜನರಿಗೆ ಸ್ವಾವಲಂಬನೆಯ ಹಾಗೂ ಶ್ರಮದ ದುಡಿಮೆಯ ಅನುಕೂಲಗಳನ್ನು ಜನರೇ ರೂಢಿಸಿಕೊಳ್ಳಲು ಸಾಧ್ಯವಾದರೆ ಈಗಿನ ಈ ಜಾತಿ, ಧರ್ಮ, ಮೇಲು-ಕೀಳಿನ ಕ್ಯಾನ್ಸರ್‌ ಕೂಡ ತಾನಾಗಿಯೇ ತೊಲಗುತ್ತದೆ. ಅದಕ್ಕೆ ಉದಾಹರಣೆಯನ್ನು ಹೀವ್ಡೇ ಬಝಾರ್‌ನಲ್ಲಿ ನಾವು ಕಾಣುತ್ತೇವೆ. ಪಂಚಾಯ್ತಿ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಸ್ವಾವಲಂಬನೆಯನ್ನು ತರಲು ಸಾಧ್ಯವಿದೆ, ನಿಸರ್ಗ ಸಂವರ್ಧನೆಯ ಮೂಲಕವೆ ಎಲ್ಲರಿಗೂ ಉದ್ಯೋಗವನ್ನು ನೀಡಿ ಗ್ರಾಮೀಣ ಸಂಸ್ಕೃತಿಯನ್ನೂ ಉಳಿಸಿ ಬೆಳೆಸಲು ಸಾಧ್ಯವಿದೆ. ಆದರೆ ಈ ಯಾವ ತಂತ್ರಜ್ಞಾನವೂ ಸುಲಭಕ್ಕೆ ಕೈಗೆಟುಕದಂತೆ ಅಡ್ಡಿಪಡಿಸುವ ಔದ್ಯಮಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಶಕ್ತಿಗಳನ್ನು ನಿವಾರಿಸಿಕೊಳ್ಳುವ ತಂತ್ರಜ್ಞಾನ ಮಾತ್ರ ಎಲ್ಲಿದೆಯೊ? ಕೊರೊನಾ ಸಂಕ್ರಮಣದಲ್ಲಿ ಅದಕ್ಕೆ ಉತ್ತರ ಸಿಕ್ಕೀತೆ?

(ಮುಂದುವರೆಯುವುದು)

English summary
Environmentalist, Science observer, Senior Journalist Nagesh Hegde spoke about How to handle Agriculture Crisis, Agro Workers migration during the Covid19 Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X