ಧಾರವಾಡ; ಮೇ 14 ರಿಂದ ಮಾವು ಪ್ರದರ್ಶನ, ಮಾರಾಟ ಮೇಳ
ಧಾರವಾಡ, ಮೇ 14: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟು, ಈ ಬಾರಿಯ ಸುಡು ಬೇಸಿಗೆಯ ಪರಿಣಾಮ ನಿರೀಕ್ಷೆ ಮಾಡಿದಷ್ಟು ಮಾವಿನ ಬೆಳೆ ಬಂದಿಲ್ಲ. ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕಿದ್ದ ಹಣ್ಣುಗಳ ರಾಜ ಅಷ್ಟಾಗಿ ಕಂಡುಬರುತ್ತಿಲ್ಲ.
ವಿವಿಧ ಬಗೆಯ ಮಾವಿನ ಹಣ್ಣು ಸವಿಯುವ ಉತ್ಸಾಹದಲ್ಲಿರುವ ಜನರಿಗೆ ಸಿಹಿಸುದ್ದಿಯೊಂದಿದೆ. ಧಾರವಾಡ ಜಿಲ್ಲೆಯಲ್ಲಿ 3 ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ ಮಾಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ತಲುಪಲಿದೆ.

2024-25ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮೇ 14ರಿಂದ 16ರ ವರೆಗೆ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.
ರೈತರಿಗೆ ಮಳಿಗೆಗಳ ಹಂಚಿಕೆ: ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜಿಲ್ಲೆಯ ರೈತರು ಭಾಗವಹಿಸಲಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರು ತಿಳಿಸಿದ್ದಾರೆ.
ಪ್ರತಿ ವರ್ಷವೂ ಸಹ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡುತ್ತದೆ. ಲಕ್ಷಾಂತರ ರೂಪಾಯಿ ವಹಿವಾಟಿಗೆ ಈ ಮೇಳಗಳು ಸಾಕ್ಷಿಯಾಗುತ್ತವೆ.
ಧಾರವಾಡದಲ್ಲಿ ನಡೆಯುವ ಮಾವು ಮೇಳಕ್ಕೆ ಈಗಾಗಲೇ ಆಸಕ್ತ ಮಾವು ಬೆಳೆಗಾರ ರೈತರಿಂದ ಅರ್ಜಿಯನ್ನು ಪಡೆದು ಮಳಿಗೆ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ರೈತರು, ಅಕ್ಕಪಕ್ಕದ ಜಿಲ್ಲೆಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಪ್ಪಳ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಇಲ್ಲಿನ ಮಾವುಗಳಿಗೆ ದೇಶ, ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೊಪ್ಪಳದ ಕೇಸರ್ ಮತ್ತು ಧಾರವಾಡದ ಆಲ್ಫ್ಯಾನ್ಸೋ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.
ಧಾರವಾಡದಲ್ಲಿ ಬೆಳೆಯುವ ಎರಡು ವರ್ಷಗಳಿಂದ ಸೌದಿ ರಾಷ್ಟ್ರಗಳಿಗೆ ಹೆಚ್ಚಾಗಿ ರಫ್ತಾಗುತ್ತಿದ್ದವು. ಆದರೆ ಈ ಬಾರಿ ಅಮೆರಿಕಾದಿಂದಲೂ ಬೇಡಿಕೆ ಬಂದಿದೆ. ಅಮೆರಿಕಾದ ಕೆಲವು ನಗರಗಳಿಂದ ಬೇಡಿಕೆ ಬಂದಿದ್ದು, ಈ ಬಾರಿ ಮಾವು ಅಲ್ಲಿಗೆ ರಫ್ತಾಗಲಿದೆ.
ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ರೈತರು, ಗ್ರಾಹಕರ ಪಾಲಿನ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ರೈತರು ತಾವು ಬೆಳೆದ ವಿಶಿಷ್ಟ ತಳಿಗಳ ಮಾವುಗಳನ್ನು ನೇರವಾಗಿ ಗ್ರಾಹಕರಿಗೆ ಮೇಳದಲ್ಲಿ ಮಾರಾಟ ಮಾಡಬಹುದಾಗಿದೆ.
ತೋಟಗಾರಿಕಾ ಇಲಾಖೆ ಆಯೋಜನೆ ಮಾಡುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಗ್ರಾಹಕರಿಗೆ ಮಾತ್ರವಲ್ಲ ರೈತರಿಗೆ ಸಹ ಅನುಕೂಲವಾಗಲಿದೆ. ವಿವಿಧ ಜಿಲ್ಲೆಗಳ ರೈತರು ಮೇಳಕ್ಕೆ ಆಗಮಿಸಿ, ಮಾವಿನ ಬೆಳೆ, ಬೇಸಾಯ ಪದ್ಧತಿ, ತಳಿಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆಯಲಿದ್ದಾರೆ.
ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಾವಿನ ಹಣ್ಣುಗಳು ಮಾತ್ರವಲ್ಲ ವಿವಿಧ ಕಂಪನಿಗಳ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಆದ್ದರಿಂದ ಗ್ರಾಹಕರು ಮತ್ತು ರೈತರು ಮಾವಿನ ಮೌಲ್ಯ ವರ್ಧನೆ ಬಗ್ಗೆ ಹೆಚ್ಚಿನ ವಿವಿರಗಳನ್ನು ಪಡೆಯಬಹುದಾಗಿದೆ.












Click it and Unblock the Notifications