ವೈರಲ್ ಆಯ್ತು ಹಿರಿಯೂರಿನ ಈ ರೈತನ ಸ್ಟೈಲಿಶ್ ಇಂಗ್ಲಿಷ್ ಹಾಡು...
ಚಿತ್ರದುರ್ಗ, ಡಿಸೆಂಬರ್ 6: ಓದಿದ್ದು ಬಿಬಿಎಂ. ಆದರೆ ಎಲ್ಲಾ ಯುವಕರಂತೆ ಸಿಟಿ ದಾರಿ ಹಿಡಿಯದೇ ತನ್ನ ಜಮೀನಿನಲ್ಲೇ ಉಳುಮೆಗೆ ಇಳಿದ ಈ ಯುವಕ. ಕೃಷಿಯಲ್ಲೇ ಖುಷಿ ಕಾಣುತ್ತಿರುವ ಈ ಯುವಕನಲ್ಲಿ ಮತ್ತೂ ಒಂದು ಪ್ಲಸ್ ಪಾಯಿಂಟ್ ಇದೆ. ಅದೇ ಈತನ ಹಾಡುಗಾರಿಕೆ.
ಜಮೀನಿಗೆ ಇಳಿದರೆ ಇಂಗ್ಲಿಷ್ ಹಾಡು ಹಾಡುತ್ತಾ ಉಳುಮೆ ಮಾಡುವ ಈ ಯುವಕನನ್ನು ಕಂಡರೆ ಅಚ್ಚರಿ ಆಗದೇ ಇರಲು ಸಾಧ್ಯವೇ ಇಲ್ಲ. ಐದಾರು ವರ್ಷಗಳಿಂದ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಈ ಯುವಕನಿಗೆ ಸಂಗಾತಿಯೂ ಈ ಹಾಡುಗಳೇ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಎಚ್.ಆರ್. ಪ್ರದೀಪ್ ಈ ಅದ್ಭುತ ಪ್ರತಿಭೆ. ಎಂಟು ವರ್ಷಗಳಿಂದ ಈ ರೀತಿ ಇಂಗ್ಲೀಷ್ ನಲ್ಲಿ ಹಾಡುವುದನ್ನು ಕಲಿತಿದ್ದಾರೆ. ಪಿಯುಸಿ ಓದುವಾಗಿನಿಂದಲೇ ಹಾಡಿನ ಗೀಳು ಹತ್ತಿಸಿಕೊಂಡ ಪ್ರದೀಪ್, ಮತ್ತೆ ಮತ್ತೆ ಹಾಡುಗಳನ್ನು ಹಾಡಿ ಹಾಡಿ ಲಯವನ್ನು ಅಭ್ಯಾಸ ಮಾಡಿಕೊಂಡವರು.

ಯಾವುದೇ ಗುರುಗಳ ಬಳಿ ಸಂಗೀತ ಅಭ್ಯಾಸ ಮಾಡಿದವರಲ್ಲ, ಆದರೆ ಅನುಕರಣೆಯಿಂದ ಇಂಗ್ಲಿಷ್ ನಲ್ಲಿ ಅದ್ಭುತ ಎನಿಸುವಂತೆ ಹಾಡಬಲ್ಲರು. ಇದೇ ಕಾರಣಕ್ಕೆ ಅಕ್ಕಪಕ್ಕದ ಹಳ್ಳಿಯವರೂ ಕರೆಸಿ ಇವರ ಕೈಯಲ್ಲಿ ಹಾಡನ್ನು ಹಾಡಿಸುತ್ತಾರೆ. ಸಣ್ಣಪುಟ್ಟ ವೇದಿಕೆಗಳಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ ಕೂಡ.
ಐದಾರು ದಿನಗಳ ಹಿಂದೆ ಜಮೀನಲ್ಲಿ ಕೆಲಸ ಮಾಡುವಾಗ ಹೀಗೆ ಇಂಗ್ಲೀಷಿನಲ್ಲಿ ಹಾಡನ್ನು ಹಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಪ್ರತಿಭೆಯನ್ನು ಕಂಡ ಜನ ಫಿದಾ ಆಗಿದ್ದಾರೆ. ಪ್ರದೀಪ್ ಹಾಡು ಹೇಳುವುದಷ್ಟೇ ಅಲ್ಲ, ಕರಾಟೆ ಸ್ಪರ್ಧಿಯೂ ಹೌದು. ರಾಜ್ಯ ಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಿರಿಯೂರಿನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ಹಾಡುವ ಈ ಕಲೆಯ ಬಗ್ಗೆ ಪ್ರದೀಪ್ ಕೇಳಿದರೆ, "ಇದುವರೆಗೂ ನನಗೆ ಸೂಕ್ತ ವೇದಿಕೆ ಸಿಕ್ಕಿಲ್ಲ, ಸಿಕ್ಕಿದರೆ ನಾನು ಇನ್ನಷ್ಟು ಚೆನ್ನಾಗಿ ಹಾಡಬಲ್ಲೆ" ಎಂದು ಹೇಳುತ್ತಾರೆ.












Click it and Unblock the Notifications