Hassan Rain: ಹಾಸನದಲ್ಲಿ ಧಾರಾಕಾರ ಮಳೆ- ರೈತರ ಆಸೆಗೆ ತಣ್ಣೀರು ಎರಚಿದ ಮಳೆರಾಯ!
ಹಾಸನ ಆಗಸ್ಟ್ 13: ಹಾಸನ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು, ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿ ರೈತರು ಕಂಗಾಲಾಗಿದ್ದಾರೆ. ಆಲೂರು ತಾಲ್ಲೂಕಿನ ಬೆಂಬಳೂರು ಗ್ರಾಮದಲ್ಲಿ ರೈತರು ಭತ್ತದ ಸಸಿಗಳನ್ನು ನಾಟಿ ಮಾಡಿದ್ದರು. ಕಳೆದ ದಿನ ರಾತ್ರಿ ಅಧಿಕ ಮಳೆಯಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ.
ಭತ್ತದ ಗದ್ದೆಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿ, ನೀರಿನ ರಭಸಕ್ಕೆ ಗದ್ದೆಯ ಬದುಗಳು ಕೊಚ್ಚಿ ಹೋಗಿವೆ. ಭತ್ತದ ಸಸಿಗಳೂ ನೀರನಲ್ಲಿ ಹರಿದು ಹೋಗಿದೆ. ಮಳೆಯಿಂದಾಗಿ ಐವತ್ತಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಜೊತೆಗೆ ನಾಟಿ ಮಾಡಲು ಮುಂದಾಗಿದ್ದ ರೈತರ ಆಸೆಗೂ ಮಳೆರಾಯ ತಣ್ಣೀರು ಎರಚಿದ್ದಾನೆ. ಇದರಿಂದಾಗಿ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಇನ್ನೂ ಜಿಲ್ಲೆಯ ಹಲವು ಕಡೆ ಸಿಡಿಲು ಹಾಗೂ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ನಗರದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಎನ್.ಆರ್.ವೃತ್ತ, ಸಂತೆಪೇಟೆ ವೃತ್ತ, ಶಂಕರಮಠ ರಸ್ತೆ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿದೆ.
ವರುಣನ ಅರ್ಭಟಕ್ಕೆ ಹಾಸನ-ಸಕಲೇಶಪುರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆ ಪರಿಣಾಮ ಸಂಚಾರ ದುಸ್ತರವಾಗಿದೆ. ಅರ್ಧ, ಮುಕ್ಕಾಲುಗಂಟೆಯ ಪ್ರಯಾಣ ಪ್ರಸ್ತುತ ಒಂದೂವರೆಯಿಂದ ಎರಡುಗಂಡೆ ತಗುಲುತ್ತಿದೆ. ಹಾಸನ, ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಮಳೆ ಜೋರಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯಾರ್ಥಿಗಳು, ವಾಹನ ಸವಾರರು ಪರದಾಡುವಂತಾಗಿದೆ. ಹಾಸನಾಂಬ ದೇವಿಯನ್ನು ನೋಡಲು ಆಗಮಿಸಿದ್ದ ಜನರಿಗೂ ಇದರಿಂದ ತೊಂದರೆಯಾಗಿದೆ.
ಇನ್ನೂ ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚಾಗಿ ಜೋಳ ಬೆಳೆದ ಸಂದರ್ಭದಲ್ಲಿ ಅದನ್ನು ಕೊಯ್ಲು ಮಾಡುವ ಸಂದರ್ಭದಲ್ಲಿ ಮಳೆಗೆ ಬೆಳೆ ನಾಶವಾಗಿತ್ತು. ಜೋರಾಗಿ ಬೀಸಿದ ಗಾಳಿಯಿಂದಾಗಿ ಮರಗಳು ಧರೆಗುರುಳಿದ್ದವು.

ಹೇಮಾವತಿ ಜಲಾಶಯ
ಹಾಸನ ತಾಲ್ಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಇದೆ. ಸದ್ಯ ಜಲಾಶಯದಲ್ಲಿರುವ ನೀರು - 35.943 ಟಿಎಂಸಿ ಇದ್ದು, ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿ ಇದೆ. ಇಂದಿನ ನೀರಿನ ಮಟ್ಟ 2920.80 ಅಡಿ, ಒಳಹರಿವು 9977 ಕ್ಯೂಸೆಕ್ ಇದ್ದು, ಹೊರಹರಿವು - 9375 ಕ್ಯೂಸೆಕ್ ಇದೆ.
ಈಶ್ವರ ದೇಗುಲದ ಮೇಲೆ ಬೃಹತ್ ಮರ
ಜುಲೈನಲ್ಲಿ ಮಳೆಯ ಅಬ್ಬರಕ್ಕೆ ಸಂಗಮೇಶ್ವರ ಬಡಾವಣೆಯ ಜವೇನಹಳ್ಳಿ ಮಠದ ಈಶ್ವರ ದೇಗುಲದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಭಾರೀ ಅವಾಂತರ ಸೃಷ್ಟಿಸಿತ್ತು. ಮರ ಬಿದ್ದ ಪರಿಣಾಮ ಮಠದ ಕಟ್ಟಡ ಹಾಗೂ ದೇಗುಲಕ್ಕೆ ಹಾನಿಯಾಗಿತ್ತು. ಈ ವೇಳೆ ಮಠದಲ್ಲಿ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹಳೆಯ ಮಠ ಮಳೆಗಾಲದಲ್ಲಿ ಸೋರುತ್ತಿದ್ದರಿಂದ ಮಠದ ಪೀಠಾಧ್ಯಕ್ಷ ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇರೆಡೆ ತಂಗುತ್ತಿದ್ದರು. 700 ವರ್ಷ ಹಳೆಯದಾದ ಜವೇನಹಳ್ಳಿ ಮಠ ದುರಸ್ತಿ ಮಾಡುವಂತೆ ಭಕ್ತಾಧಿಗಳು ಆಗ್ರಹಿಸಿದ್ದಾರೆ.












Click it and Unblock the Notifications