ರೈತರೇ ಗಮನಿಸಿ, ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ
ಬೆಂಗಳೂರು, ಫೆಬ್ರವರಿ 18; ಕರ್ನಾಟಕ ಸರ್ಕಾರದ ಪತ್ರದ ಅನ್ವಯ ಕೇಂದ್ರ ಸರ್ಕಾರ ಖಾರೀಫ್ ಅವಧಿ 2023-25ನೇ ಸಾಲಿನಲ್ಲಿ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್) ಯಡಿ ಶೇಂಗಾ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಇದಕ್ಕೆ ಷರತ್ತುಗಳನ್ನು ಸಹ ನಿಗದಿ ಮಾಡಿದೆ.
ಈ ಕುರಿತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಮತ್ತು ರೈತರ ಕಲ್ಯಾಣಾಭಿವೃದ್ಧಿ ವಿಭಾಗ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಶೇಂಗಾ (ಕಡಲೆಕಾಯಿ) ಖರೀದಿ, ಸಂಗ್ರಹದ ಕುರಿತು ಸೂಚನೆಗಳನ್ನು ನೀಡಿದೆ.

ಕರ್ನಾಟಕ ಸರ್ಕಾರದ 7/2/2024ರ ಪತ್ರದ ಅನ್ವಯ ಶೇಂಗಾ ಖರೀದಿ ಮಾಡಲು ಒಪ್ಪಿಗೆ ನೀಡಲಾಗಿದೆ. Price Support Scheme (PSS) ಅಡಿ 64,195 ಮೆಟ್ರಿಕ್ ಟನ್ ಅನ್ನು ಕರ್ನಾಟಕದಲ್ಲಿ ಖಾರೀಫ್ 2023-24ನೇ ಸಾಲಿನಲ್ಲಿ ಖರೀದಿ ಮಾಡಲು ಒಪ್ಪಿಗೆ ನೀಡಲಾಗಿದ್ದು, ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
2018ರ ಬೆಲೆ ಬೆಂಬಲ ಯೋಜನೆ ಮಾರ್ಗಸೂಚಿಗಳ ಅನ್ವಯ ರಾಜ್ಯ ಸರ್ಕಾರ ಶೇಂಗಾ ಖರೀದಿ ದಿನಾಂಕವನ್ನು ನಿಗದಿ ಮಾಡಬೇಕು. ದಿನಾಂಕ ನಿಗದಿ ಮಾಡಿದ ಬಳಿಕ 90 ದಿನಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು.
ಮಾರ್ಗಸೂಚಿಗಳು
* ಬೆಲೆ ಬೆಂಬಲ ಯೋಜನೆ 2018ರ ಮಾರ್ಗಸೂಚಿಗಳ ಅನ್ವಯ ಖರೀದಿ ಮಾಡುವ ಮೊದಲು
ಕೇಂದ್ರದ ನೋಡೆಲ್ ಏಜೆನ್ಸಿಗಳು ರಾಜ್ಯದಲ್ಲಿ ಉತ್ಪನ್ನ ಸಂಗ್ರಹಕ್ಕೆ ಇರುವ ಸ್ಥಳದ ಪರಿಶೀಲನೆ ಮಾಡಬೇಕಿದೆ. ಬಳಿಕ ರಾಜ್ಯ ಸರ್ಕಾರಕ್ಕೆ ಖರೀದಿಗೆ ಸಹಾಯ ಮಾಡಬೇಕು. ಸಂಗ್ರಹಕ್ಕೆ ಸ್ಥಳವಿರುವಷ್ಟು ಉತ್ಪನ್ನ ಮಾತ್ರ ಖರೀದಿ ಮಾಡಬೇಕಿದೆ.
* ನೋಡೆಲ್ ಏಜೆನ್ಸಿಗಳು ಕಡ್ಡಾಯವಾಗಿ ಖರೀದಿ ಆದ ಉತ್ಪನ್ನಗಳನ್ನು ಸಂಗ್ರಹ ಮಾಡಬೇಕಿದೆ. ಸಂಗ್ರಹಕ್ಕೆ ಅನುಕೂಲವಾಗುವಂತೆ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಖರೀದಿ ಮಾಡಬೇಕು.
* ರಾಜ್ಯ ಸರ್ಕಾರ ಶೇಂಗಾ ಖರೀದಿ ಬಳಿಕ ಖರೀದಿಯ ಶೇ 15ರಷ್ಟು ಹಣ ರೈತರ ಬ್ಯಾಂಕ್ ಖಾತೆಗೆ ಮೂರು ದಿನಗಳಲ್ಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಉಳಿದ ಹಣವನ್ನು ಪಿಎಸ್‌ಎಸ್ ಮಾರ್ಗಸೂಚಿ ಅನ್ವಯ ಪಾವತಿಸಬೇಕಿದೆ.
ಯೋಜನೆಯಡಿ ರೈತರಿಂದ ಶೇಂಗಾ ಖರೀದಿಗೆ ಮೊದಲು ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ರೈತರಿಂದ ಬೆಳೆ ಖರೀದಿ ಸಂಬಂಧಿಸಿದಂತೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು, ರೈತರಿಗೆ ನೆರವಾಗಲು ಬೆಂಬಲ ಬೆಲೆ ಯೋಜನೆಯಡಿ ವಿವಿಧ ಉತ್ಪನ್ನ ಖರೀದಿ ಮಾಡಲಾಗುತ್ತದೆ.
ಮುಂಗಾರು ಹಂಗಾಮಿನಲ್ಲಿ ರೈತರಿಂದ ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಖರೀದಿ ಮಾಡಲಾಗುತ್ತದೆ. ನೋಂದಣಿ ಮಾಡಿಸಿದ ರೈತರ ಬೆಳೆಯನ್ನು ಮಾತ್ರ ಈ ಯೋಜನೆಯಡಿ ಖರೀದಿಸಲಾಗುವುದು. ಆದ್ದರಿಂದ ಸರ್ಕಾರ ಅಧಿಸೂಚನೆ ಹೊರಡಿಸಿದಾಗ ರೈತರು ನೋಂದಣಿ ಮಾಡಿಸಬೇಕು.












Click it and Unblock the Notifications