ತಂಬಾಕು ಬೆಳೆಗಾರರಿಗೆ ಗುಡ್‌ನ್ಯೂಸ್: ರಾಜ್ಯದ 70,000 ಸಾವಿರ ರೈತರಿಗೆ ಲಾಭ!
ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ತಂಬಾಕು ಬೆಳೆಗಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಭಾರೀ ಮಳೆ ಹಾಗೂ ಇಳುವರಿ ಕಡಿಮೆ ಬಂದು ರೈತರು ಸಂಕಷ್ಟದಲ್ಲಿ ಇದ್ದಾರೆ. ಇದೀಗ ಕೇಂದ್ರ ಸರ್ಕಾರವು ಕೊನೆಗೂ ಈ ಬೆಳಗಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಕೇಂದ್ರ ಸರ್ಕಾರ ಈ ಸಂಬಂಧ ಯಾವ ಕ್ರಮ ತೆಗೆದುಕೊಂಡಿದೆ. ಇದರಿಂದ ರಾಜ್ಯದ ತಂಬಾಕು ಬೆಳೆಗಾಗರರಿಗೆ ಯಾವ ರೀತಿ ಅನುಕೂಲವಾಗುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದ ಅಂದಾಜು 70 ಸಾವಿರಕ್ಕೂ ಹೆಚ್ಚು ತಂಬಾಕು ಬೆಳಗಾಗರರಿಗೆ ಕೇಂದ್ರ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ. ತಂಬಾಕು ಬೆಳೆಗಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡದೆ ಹಾಗೂ ಅನಧಿಕೃತ ತಂಬಾಕನ್ನು ಸಹ ತಂಬಾಕು ಮಂಡಳಿಯ ಹರಾಜಿನ ಮೂಲಕ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು, ಕರ್ನಾಟಕ ರಾಜ್ಯದ ತಂಬಾಕು ಬೆಳೆಗಾರ ರೈತರು ಮೇ ಮತ್ತು ಜುಲೈ 2024 ರ ನಡುವೆ ಭಾರೀ ಮಳೆಯಿಂದಾಗಿ, ಕರ್ನಾಟಕದ ಎಫ್‌ಸಿವಿ ತಂಬಾಕು ರೈತರ ಬೆಳೆ ಇಳುವರಿ ಕಡಿಮೆಯಾಗಿ ಮತ್ತು ಎಲೆಗಳ ಗುಣಮಟ್ಟದಲ್ಲಿ ಗಮನಾರ್ಹ ನಷ್ಟವನ್ನು ಎದುರಿಸಿದ್ದ ಕಾರಣ ಮಧ್ಯಪ್ರದೇಶಿಸಿ ರೈತರ ನೆರವಿಗೆ ಧಾವಿಸಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾಡಿನ ತಂಬಾಕು ಬೆಳಗಾರ ರೈತರ ಪರವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.
ಈ ನಿರ್ಧಾರದ ಮೂಲಕ ತಂಬಾಕು ಮಂಡಳಿಯ ಹರಾಜು ವೇದಿಕೆಗಳಲ್ಲಿ ನೋಂದಾಯಿತ ಬೆಳೆಗಾರರಿಂದ ಹೆಚ್ಚುವರಿ ತಂಬಾಕು ಮತ್ತು ನೋಂದಾಯಿಸದ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹಾಗೆಯೇ ಯಾವುದೇ ಹೆಚ್ಚುವರಿ ಸೇವಾ ಶುಲ್ಕಗಳಿಲ್ಲದೆ ರೈತರು ನ್ಯಾಯಯುತವಾಗಿ ಮಾರುಕಟ್ಟೆ ಬೆಲೆಯನ್ನು ಪಡೆಯುವಂತಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸುವ ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯ ಈ ಕ್ರಮವು ಆರ್ಥಿಕ ಭದ್ರತೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ಧತೆಯನ್ನು ಸಾಕ್ಷೀಕರಿಸುತ್ತಿದೆ. ಕರ್ನಾಟಕದ ರೈತ ಸಮುದಾಯದ ಕಷ್ಟಗಳಿಗೆ ಸ್ಪಂದಿಸಿ ಬೆಂಬಲವಾಗಿ ನಿಂತ ಕೇಂದ್ರ ಸಚಿವರಾದ ಪಿಯುಷ್ ಗೋಯಲ್ ಅವರಿಗೆ ಹ ನನ್ನ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದ ರೈತರಿಗೆ ವೆಚ್ಚ ತಗ್ಗಲಿದೆ. ರೈತರ ನಷ್ಟ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಬರೋಬ್ಬರಿ 70,000 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಯುವ ರೈತರಿಗೆ ಸಹಕಾರಿಯಾಗಿರಲಿದೆ ಎಂದು ಹೇಳಲಾಗಿದೆ.












Click it and Unblock the Notifications