ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ಅರಿಶಿನ ಬೆಳೆ
ಚಾಮರಾಜನಗರ, ಜುಲೈ 22 : ಅರಿಶಿನ ಬೆಳೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ತೋಟಗಾರಿಕೆ ಇಲಾಖೆಯ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಿದೆ.
ಅರಿಶಿನ ಬೆಳೆಗೆ ಇಂಡಿಮ್ನೆಟಿ ಮಟ್ಟ ಶೇ. 90ರಂತೆ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 1 ಲಕ್ಷ 33 ಸಾವಿರ ರೂ. ಆಗಿದೆ. ಬೆಳೆಗಳನ್ನು ಬೆಳೆಯುವ ರೈತರು ವಿಮಾ ಕಂತು ಶೇ. 5ರಂತೆ ಪ್ರತಿ ಎಕೆರೆಗೆ ಪಾವತಿಸಬೇಕಾದ ಮೊತ್ತ 2,692 ರೂ. ಆಗಿರುತ್ತದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಹರವೆ, ಕಸಬಾ, ಸಂತೇಮರಹಳ್ಳಿ, ಚಂದಕವಾಡಿ ಹೋಬಳಿ, ಗುಂಡ್ಲುಪೇಟೆಯ ಕಸಬಾ, ಬೇಗೂರು, ತೆರಕಣಾಂಬಿ, ಹಂಗಳ, ಕೊಳ್ಳೇಗಾಲದ ಕಸಬಾ, ಪಾಳ್ಯ, ಹಾಗೂ ಹನೂರು ತಾಲೂಕಿನ ಹನೂರು, ರಾಮಾಪುರ, ಲೊಕ್ಕನಹಳ್ಳಿ ಹೋಬಳಿಗಳ ಅರಿಶಿನ ಬೆಳೆಯನ್ನು ವಿಮೆಗೆ ಒಳಪಡಿಸಲಾಗಿದೆ.

ಬೆಳೆಯನ್ನು ಬೆಳೆಯುವ ರೈತರು ವಿಮಾ ಕಂತನ್ನು ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ. ವಿಮಾ ಕಂತು ಪಾವತಿಸುವಾಗ ಬ್ಯಾಂಕಿಗೆ (ಸಾಲ ಪಡೆಯದ ರೈತರು) ನಿಗದಿತ ಅರ್ಜಿ ನಮೂನೆಯೊಂದಿಗೆ ಪ್ರಸಕ್ತ ಸಾಲಿನ ಮೂಲ ಪಹಣಿ (ಆರ್.ಟಿ.ಸಿ) ನೀಡಬೇಕು.
ಅರ್ಜಿಗಳನ್ನು ಸಲ್ಲಿಸುವಾಗ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸ್ವಯಂ ಘೋಷಿತ ಬೆಳೆ ವಿವರ ನೀಡಿಬೇಕು. ಈ ಸೌಲಭ್ಯವನ್ನು ಸಂಬಂಧಿಸಿದ ಹೋಬಳಿ ರೈತರು ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.












Click it and Unblock the Notifications