ರೈತರಿಗೆ ಬಂಪರ್ ಕೊಡುಗೆ: ಬೆಂಬಲ ಬೆಲೆಯಲ್ಲಿ ಸಿರಿಧಾನ್ಯ ಖರೀದಿ
ಚಿತ್ರದುರ್ಗ, ಜನವರಿ 18: ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ, ಸಿರಿಧಾನ್ಯಗಳನ್ನು ಬೆಳೆಯುವ ರೈತರ ಸಂಖ್ಯೆಯೂ ಅಧಿಕವಾಗುತ್ತಿದೆ. ಇಂತಹ ಹೊತ್ತಿನಲ್ಲೇ ಇವುಗಳ ಮಾರುಕಟ್ಟೆ, ಖರೀದಿ ಕುರಿತು ರೈತರಲ್ಲಿ ಹಲವು ಗೊಂದಲಗಳಿವೆ. ಕೆಲವೇ ದಿನಗಳಲ್ಲಿ ಸಿರಿಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗುತ್ತದೆ. ಈ ಕುರಿತು ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಮಲ್ಲಿಹಳ್ಳಿ ಗ್ರಾಮದ ಕೃಷಿಕ ಪ್ರಭುಲಿಂಗಪ್ಪ ಹಾಗೂ ಮಹೇಶ್ ಅವರ ಸಿರಿಧಾನ್ಯ ರೈತರ ಒಕ್ಕಲು ಕಣ ಹಾಗೂ ಕ್ಷೇತ್ರಕ್ಕೆ ಸಚಿವರು ಭೇಟಿ ನೀಡಿದ್ದರು. ರೈತರೊಂದಿಗೆ ಸಂವಾದ ನಡೆಸಿದ ಬಳಿಕ ಸಚಿವರು ಮಾತನಾಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, "ಬೆಂಬಲ ಬೆಲೆ ಯೋಜನೆಯಡಿ ಸಿರಿಧಾನ್ಯಗಳನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆದು ಶಿಫಾರಸ್ಸು ಮಾಡಲಾಗಿದೆ. ಮೊದಲು ಸಿರಿಧಾನ್ಯಗಳಿಗೆ ಮಾರುಕಟ್ಟೆ ಇರಲಿಲ್ಲ. ಈಗ ಮಾರುಕಟ್ಟೆ ದೊರಕುತ್ತಿದೆ. ರಾಗಿ, ಭತ್ತ, ತೊಗರಿ ಮಾದರಿಯಲ್ಲಿ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ" ಎಂದರು.
ಅತಿ ಹೆಚ್ಚು ಸಿರಿಧಾನ್ಯ: ಎನ್. ಚಲುವರಾಯಸ್ವಾಮಿ, "ಹೊಸದುರ್ಗ ತಾಲ್ಲೂಕಿನಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಸಾಂಪ್ರದಾಯಿಕವಾಗಿಯೇ ಸಿರಿಧಾನ್ಯ ಬೆಳೆಯುವುದು ರೂಢಿಯಲ್ಲಿದೆ. ಕಡಿಮೆ ಮಳೆಯ ನಡುವೆ ಬರಿ ಇಬ್ಬನಿ ಆಧರಿಸಿ ವಾರ್ಷಿಕವಾಗಿ ಎರಡು ಬೆಳೆಗಳನ್ನು ರೈತರು ತೆಗೆಯುತ್ತಾರೆ" ಎಂದು ಹೇಳಿದರು.
"ಜನವರಿ 23 ರಿಂದ 25ರ ತನಕ ಅಂತರರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮೇಳ ಉದ್ಘಾಟಿಸುವರು. ದೇಶದ 25 ರಾಜ್ಯಗಳ ಕೃಷಿ ಮಂತ್ರಿಗಳು ಹಾಗೂ ಅಧಿಕಾರಿಗಳು, ರೈತರು ಭಾಗವಹಿಸುವರು. ಇದರೊಂದಿಗೆ ವಿವಿಧ ದೇಶಗಳ ಅಧಿಕಾರಿ ಹಾಗೂ ರೈತರು ಸಹ ಮೇಳದಲ್ಲಿ ಪಾಲ್ಗೊಳ್ಳುವರು. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ದೊರಕಿಸಲು ಪ್ರಯತ್ನ ಮಾಡಲಾಗುವುದು" ಎಂದು ಸಚಿವರು ತಿಳಿಸಿದರು.
"ಹೊಸದುರ್ಗದ ಶಾಸಕ ಗೊವಿಂದಪ್ಪ ಸ್ವತಃ ಕೃಷಿಕರಾಗಿದ್ದು, ಸಿರಿಧಾನ್ಯ ಬೆಳೆಯುವುದರೊಂದಿಗೆ ಆಹಾರದಲ್ಲಿಯೂ ಸಿರಿಧಾನ್ಯ ಬಳಸುತ್ತಿದ್ದಾರೆ. ಈ ಮೂಲಕ ತಾಲೂಕಿನ ರೈತರಿಗೆ ಮಾದರಿಯಾಗಿದ್ದಾರೆ. ಹೊಸದುರ್ಗ ಮಾದರಿಯಲ್ಲಿ ಮಳೆ ಕಡಿಮೆ ಬೀಳುವ ರಾಜ್ಯದ ಇತರೆ ಜಾಗದಲ್ಲಿ ಸಿರಿಧಾನ್ಯ ಬೆಳೆಯಲು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು. ಅಂತರಾಷ್ಟ್ರೀಯ ಮೇಳದಲ್ಲಿ ಮುಖ್ಯಮಂತ್ರಿಗಳಿಂದ ಶಾಸಕ ಬಿ. ಜಿ. ಗೋವಿಂದಪ್ಪ ಅವರಿಗೆ ಸನ್ಮಾನಿಸಲಾಗುವುದು" ಎಂದು ಹೇಳಿದರು.
ಈ ಮೊದಲು ನವಣೆ ಅಕ್ಕಿ, ಅನ್ನ ಎಂದರೆ, ಗ್ರಾಮೀಣ ಭಾಗದಲ್ಲಿ ಬಡವರು ಎಂದು ಭಾವಿಸಿ ಹೆಣ್ಣು ನೀಡುತ್ತಿರಲಿಲ್ಲ. ಇಂದು ಕಾಲ ಬದಲಾಗಿದೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಫಲವಾಗಿ ಬಡವರಿಗೂ ಅಕ್ಕಿ ಸಿಗುತ್ತಿದೆ. ಪೌಷ್ಠಿಕ ಆಹಾರ ಎನಿಸಿದ ಸಿರಿಧಾನ್ಯಗಳು ನಮ್ಮ ಆಹಾರ ಪದ್ದತಿಯಿಂದ ದೂರವಾಗುತ್ತಿವೆ. ವೈದ್ಯಲೋಕ ಸಿರಿಧಾನ್ಯಗಳ ಮಹತ್ವನ್ನು ಸಾಬೀತು ಮಾಡಿದೆ. ಇದರಿಂದಾಗಿ ಶ್ರೀಮಂತರು ಸಹ ಸಿರಿಧಾನ್ಯಗಳ ಆಹಾರ ಸೇವಿಸುತ್ತಿದ್ದಾರೆ. ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ದೊರಕಿದರೆ ಹೆಚ್ಚು ರೈತರು ಸಿರಿಧಾನ್ಯ ಕೃಷಿ ಕಡೆಗೆ ಮುಖ ಮಾಡುವರು.
ಶಾಸಕರ ಬಿ. ಜಿ. ಗೋವಿಂದಪ್ಪ ಮಾತನಾಡಿ, "ಹೊಸದುರ್ಗ ತಾಲ್ಲೂಕು ಮೊದಲಿನಿಂದಲೂ ಸಿರಿಧಾನ್ಯ ಕೃಷಿ ಹೆಸರಾಗಿದೆ. ಸದ್ಯ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳನ್ನು ಸರ್ಕಾರ ಖರೀದಿಸಿ, ಜನರಿಗೆ ವಿತರಿಸಬೇಕು" ಎಂದು ಮನವಿ ಮಾಡಿದರು.
ಸಚಿವರು ಸಿರಿಧಾನ್ಯ ಬೆಳೆದ ಮಲ್ಲಿಹಳ್ಳಿ ಗ್ರಾಮದ ಮಹೇಶ್ ಹಾಗೂ ಪ್ರಭುಲಿಂಗಪ್ಪ ಒಕ್ಕಲು ಕಣ ಹಾಗೂ ಕ್ಷೇತ್ರಕ್ಕೆ ಭೇಟಿ ನೀಡಿದರು. "ರೈತ ಮಹೇಶ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ರೂ. 12 ಸಾವಿರಕ್ಕೆ ದುಡಿಯುತ್ತಿದ್ದರು. ಖರ್ಚು ಕಳೆದು ತಿಂಗಳಿಗೆ ರೂ. 4 ಸಾವಿವರ ಮಾತ್ರ ಉಳಿಯುತ್ತಿತ್ತು. ಈಗ ಮರಳಿ ಸಮಗ್ರ ಕೃಷಿ ಪದ್ದತಿಯಲ್ಲಿ ವಾರ್ಷಿಕವಾಗಿ ಎಲ್ಲಾ ಖರ್ಚು ಕಳೆದು ರೂ. 4 ಲಕ್ಷ ಲಾಭ ಗಳಿಸುತ್ತಿದ್ದಾರೆ" ಎಂದರು.
"ರೇಷ್ಮೆ, ಕೋಳಿ ಸಾಕಾಣಿಕೆ, ಸಿರಿ ಧಾನ್ಯಗಳನ್ನು ಬೆಳದು ರಾಜ್ಯದ ಇತರೆ ಯುವಕರಿಗೂ ಮಾದರಿಯಾಗಿದ್ದಾರೆ. ಇನ್ನೊರ್ವ ರೈತ ಪ್ರಭುಲಿಂಗಸ್ವಾಮಿ ಸಹ ಸಮಗ್ರ ಕೃಷಿ ಮಾಡುತ್ತಿದ್ದು, ಯಾವುದೇ ಸಾಲ ಹಾಗೂ ಬಡ್ಡಿಯ ಜಂಜಾಟವಿಲ್ಲದೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯಗಳು ನೀಡುವ ಸಲಹೆಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಂಡರೆ ಜೀವನ ಸುಧಾರಿಸುವುದು" ಎಂದು ಹೇಳಿದರು.












Click it and Unblock the Notifications