Rain in Chikkamagaluru : ಕಾಫಿನಾಡು ಚಿಕ್ಕಮಗಳೂರಿನ ರೈತರ ಮುಖದಲ್ಲಿ ಮಂದಹಾಸ ತರಿಸಿದ ವರ್ಷಧಾರೆ
ಕಾಫಿನಾಡಿನ ಮಲೆನಾಡು ಭಾಗದದ ಅಲ್ಲಲ್ಲಿ ಧಾರಾಕಾರ ಮಳೆಯಾಗಿದ್ದು, ಬಿಸಿಲಝಳದಿಂದ ರೋಸಿಹೋಗಿದ್ದ ರೈತರು, ಸಾರ್ವಜನಿಕರು ದಿಢೀರ್ ಸುರಿದ ಅಕಾಲಿಕ ಮಳೆಯಿಂದ ಸಂತಸಗೊಂಡಿದ್ದಾರೆ.
ಚಿಕ್ಕಮಗಳೂರು, ಮಾರ್ಚ್, 15: ಕಾಫಿನಾಡಿನ ಮಲೆನಾಡು ಭಾಗದದ ಅಲ್ಲಲ್ಲಿ ಮಂಗಳವಾರ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ಬಿಸಿಲಝಳದಿಂದ ರೋಸಿಹೋಗಿದ್ದ ರೈತರು, ಸಾರ್ವಜನಿಕರು ದಿಢೀರ್ ಸುರಿದ ಅಕಾಲಿಕ ಮಳೆಯ ಸಿಂಚನದಿಂದಾಗಿ ಸಂತಸಗೊಂಡಿದ್ದಾರೆ.
ಕಾಫಿನಾಡಿನಲ್ಲಿ ಕಳೆದ ಕೆಲ ತಿಂಗಳುಗಳಿಂದ ಬಿಸಿಲ ತಾಪ ಗರಿಷ್ಠಮಟ್ಟಕ್ಕೆ ತಲುಪಿತ್ತು. ಸಾರ್ವಜನಿಕರು ಬಿಸಿಲ ತಾಪದಿಂದ ಹೈರಾಣಾಗಿದ್ದರೇ, ಬಿಸಿಲಿನಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಪಡುತ್ತಿದ್ದರು. ಆದ್ದರಿಂದ ಇಲ್ಲಿನ ಜನರು ಆಕಾಶದತ್ತ ಮುಖ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದರು. ಸದ್ಯ ಮಂಗಳವಾರ ಮಧ್ಯಾಹ್ನದ ಬಳಿಕ ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ದಿಢೀರ್ ಧಾರಾಕಾರ ಮಳೆ ಸುರಿದಿದೆ.

ಕಾಫಿನಾಡಿನ ಹಲವೆಡೆ ಮಳೆಯ ಸಿಂಚನ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಕಳಸ ತಾಲೂಕಿನ ಹೊರನಾಡು, ಜಾಂಬಳೆ, ಸಂಸೆ, ಬಲಿಗೆ, ಕುದುರೆಮುಖ, ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ, ನೆಮ್ಮಾರ್, ಕೊಪ್ಪ ತಾಲೂಕಿನ ಜಯಪುರ, ಹೇರೂರು ಹಾಗೂ ಎನ್.ಆರ್.ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಅಲ್ಲಲ್ಲಿ ಧಾರಾಕಾರ ಮಳೆ ಸುರಿದಿದ್ದರೇ, ಮತ್ತೊಂದೆಡೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರ ಸಂಜೆ ವೇಳೆ ಮೋಡಕವಿದ ವಾತಾವರಣ ಇದ್ದು, ಮಳೆಯ ಸುಳಿವಿರಲಿಲ್ಲ.
ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಬಿಸಿಲ ಝಳ ತೀವ್ರಗೊಂಡಿದ್ದು, ಸಾರ್ವಜನಿಕರು ಬಿಸಿಲ ತಾಪ ತಣಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಲೇ ಇದ್ದಾರೆ. ಕಾಫಿ, ಅಡಿಕೆ ಬೆಳೆಗಾರರು ತೋಟ ಉಳಿಸಿಕೊಳ್ಳಲು ನದಿ, ಹಳ್ಳಗಳ ಮೂಲಕ ನೀರು ಹಾಯಿಸಲು ಪರದಾಡುತ್ತಿದ್ದರು. ಆದರೆ ವಿದ್ಯುತ್ ಸಮಸ್ಯೆಯಿಂದಾಗಿ ತೋಟಗಳಿಗೆ ನೀರು ಹಾಯಿಸಲು ಭಾರೀ ಸಮಸ್ಯೆ ಎದುರಿಸುವಂತಾಗಿತ್ತು.

ಬಿಸಿಲ ಧಗೆಯಿಂದ ಬೇಸತ್ತಿದ್ದ ಜನ
ಪರಿಣಾಮ ಡೀಸೆಲ್ ಪಂಪ್‌ಸೆಟ್‍ಗಳ ಮೂಲಕ ನೀರು ಹಾಯಿಸಿ ಬಿಸಿಲಿನಿಂದ ತೋಟಗಳ ರಕ್ಷಣೆಗೆ ಮುಂದಾಗಿದ್ದರು. ಸದ್ಯ ದಿಢೀರ್ ಸುರಿದ ಮಳೆ ಕಾಫಿ, ಅಡಿಕೆ ತೋಟಗಳಿಗೆ ತಂಪೆರೆದಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಮಳೆ ಇನ್ನು ಕೆಲ ದಿನಗಳ ಕಾಲ ಸುರಿದಲ್ಲಿ ತಾಪಮಾನದಲ್ಲಿ ಇಳಿಕೆಯಾಗಿ ಬಿಸಿಲಝಳದಿಂದ ಮುಕ್ತಿ ಸಿಗಲಿದೆ. ಹಾಗೆಯೇ ರೈತರ ಬೆಳೆ ರಕ್ಷಣೆ ಸಾಧ್ಯವಾಗಲಿದೆ ಎಂಬುದು ಕಾಫಿನಾಡಿನ ಜನರು ಅಭಿಪ್ರಾಯವಾಗಿದೆ.












Click it and Unblock the Notifications