ಭತ್ತ ಬೆಳೆದ ರೈತರ ಗೋಳು ಕೇಳೋರಿಲ್ಲ: ಕಟಾವು ಮಾಡಲು ಪರದಾಟ!

ಮೈಸೂರು, ಡಿಸೆಂಬರ್‌ 19: ಒಂದೆಡೆ ಚಂಡಮಾರುತ ಮತ್ತೊಂದೆಡೆ ಸಕಾಲಕ್ಕೆ ಬಾರದ ಕಟಾವು ಯಂತ್ರಗಳು ಹೀಗೆ ಹಲವು ಸಮಸ್ಯೆಗಳಿಂದ ಭತ್ತ ಬೆಳೆದ ರೈತರು ಪರದಾಡುತ್ತಿದ್ದು, ಸದ್ಯ ನಿರೀಕ್ಷಿಸಿದಷ್ಟು ಕಟಾವು ಯಂತ್ರಗಳು ಬಾರದ ಕಾರಣದಿಂದಾಗಿ ಕೊಯ್ಲುಗೆ ಸಮಸ್ಯೆಯಾಗುತ್ತಿದ್ದು, ದುಬಾರಿ ಹಣ ನೀಡುತ್ತೇನೆಂದರೂ ಕಟಾವು ಮಾಡಲು ಯಂತ್ರ ಸಿಗದೆ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಬೆಳೆದು ನಿಂತ ಭತ್ತದ ಬೆಳೆ ಉದುರಲಾರಂಭಿಸಿದೆ.

ಈ ಬಾರಿ ಫೆಂಗಲ್ ಚಂಡಮಾರುತದಿಂದಾಗಿ ಭತ್ತದ ಕೊಯ್ಲು ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಏಕಕಾಲದಲ್ಲಿ ರೈತರು ಕಟಾವು ಯಂತ್ರಕ್ಕೆ ಮೊರೆ ಹೋಗಿರುವ ಕಾರಣದಿಂದ ಬೇಡಿಕೆಗಳು ಹೆಚ್ಚಾಗುತ್ತಿವೆ. ಜತೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಟಾವು ಯಂತ್ರಗಳು ಬಂದಿಲ್ಲ. ಇದರಿಂದ ಇರುವ ಯಂತ್ರಗಳನ್ನೇ ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರು ಹೇಳಿದ ದಿನಕ್ಕಾಗಿ ಕಾಯುವಂತಾಗಿದೆ. ಇದರಿಂದ ಕೊಯ್ಲು ತಡವಾಗುತ್ತಿದ್ದು, ಗದ್ದೆಯಲ್ಲಿಯೇ ಭತ್ತ ಉದುರುವಂತಾಗಿದೆ.

Farmers Face Harvesting Challenges In KR Nagar Due To Delayed Machines

ಇನ್ನು ಕೆಲವೆಡೆ ರೈತರು ಹಿಂದಿನಿಂದಲೂ ಕಾರ್ಮಿಕರನ್ನು ಆಶ್ರಯಿಸಿ ಕಟಾವು ಮಾಡುತ್ತಿದ್ದು, ಆದರೆ ಈಗೀಗ ಕೂಲಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಅಲ್ಲದೆ ಕೂಲಿ ವೆಚ್ಚವೂ ಹೆಚ್ಚಾಗುತ್ತಿರುವುದರಿಂದ ಅದನ್ನು ನೀಡಿ ಕೊಯ್ಲು ಮಾಡಿಸಿ ಭತ್ತವನ್ನು ಮನೆಗೆ ತರುವುದು ಕಷ್ಟವಾಗುತ್ತಿದೆ. ಕೂಲಿ ಕಾರ್ಮಿಕರು ದೊರೆಯದೆ ಅವರಿಗಾಗಿ ಕಾಯುತ್ತಿರುವುದು ರೈತರಿಗೆ ತಲೆನೋವಾಗುತ್ತಿದೆ.

ರೈತರಿಗೆ ಲಾಭಕ್ಕಿಂತ ನಷ್ಟ ಜಾಸ್ತಿ

ಜಿಲ್ಲೆಗೊಂದು ಸುತ್ತು ಹೊಡೆದರೆ ಕೆ.ಆರ್.ನಗರ, ನಂಜನಗೂಡು, ತಿ.ನರಸೀಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಅದರಲ್ಲೂ ಭತ್ತದ ಕಣಜ ವೆಂದೇ ಖ್ಯಾತಿಯಾಗಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯಾದ್ಯಂತ ಭತ್ತದ ಫಸಲು ಕಟಾವಿಗೆ ಬಂದಿದ್ದು ಕೂಲಿ ಕಾರ್ಮಿಕರ ಕೊರತೆಯಿಂದ ಕಟವಾಗಬೇಕಿರುವ ಬೆಳೆ ಜಮೀನುಗಳಲ್ಲೇ ಉದುರುತ್ತಿರುವುದು ಎದ್ದು ಕಾಣಿಸುತ್ತಿದೆ.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭತ್ತವನ್ನು ರೈತರು ಖುಷಿಯಿಂದಲೇ ಬೆಳೆದಿದ್ದರು. ಇದರಿಂದ ಒಂದಷ್ಟು ಆರ್ಥಿಕ ಸುಧಾರಣೆಯಾಗುತ್ತದೆ ಎಂದು ನಂಬಿದ್ದರು. ಆದರೆ ಈಗ ಕೊಯ್ಲು ತಡವಾಗುತ್ತಿದೆಯಲ್ಲದೆ, ಭತ್ತದ ಬೆಲೆಯೂ ಕುಸಿತ ಕಾಣುತ್ತಿದೆ. ಹಿಂದೆ ಭತ್ತ ಬೆಳೆದು ಲಾಭ ಪಡೆಯಬಹುದಾಗಿತ್ತಾದರೂ ಈಗಿನ ದುಬಾರಿ ಬದುಕಿನಲ್ಲಿ ಎಲ್ಲದಕ್ಕೂ ಹಣ ನೀಡಲೇ ಬೇಕಾಗಿರುವುದರಿಂದ ಲಾಭಕ್ಕಿಂತ ನಷ್ಟವಾಗುತ್ತಿದೆ.

Farmers Face Harvesting Challenges In KR Nagar Due To Delayed Machines

ಭತ್ತದ ಬೆಳೆಗೆ ಎಕರೆಗೆ 50 ಸಾವಿರ ಖರ್ಚು

ಲಾಭದಾಯಕ ಬೆಳೆಯಾಗಿತ್ತು ಆದರೆ ಯಂತ್ರೋಪಕರಣಗಳು ದಾಂಗಡಿ ಇಟ್ಟು ಬಿತ್ತನೆ ಬೀಜ ಉಳುಮೆ ಗದ್ದೆ ಹದ ಮಾಡಲು ಟ್ರ್ಯಾಕ್ಟರ್ ಗಳನ್ನೇ ಅವಲಂಭಿಸಿದ ಕಾರಣ ಭತ್ತ ನಾಟಿ ಮಾಡುವ ವೇಳೆಗೆ ಕಡಿಮೆ ಎಂದರು 25 ರಿಂದ 28000 ವೆಚ್ಚ ತಗುಲುತ್ತಿರುವುದು ಭತ್ತದ ಕೃಷಿಕರಿಗೆ ಹೊರೆಯಾಗಿ ಪರಿಣಮಿಸಿದೆ ನಾಟಿ ಕಾರ್ಯದಿಂದ ಕಟಾವು ತನಕ ಹಣವನ್ನು ಹಾಕಿರುವ ರೈತರು ಈಗ ಪರದಾಡುತ್ತಿದ್ದಾರೆ.

ಈ ಹಿಂದೆ ಕೂಲಿ ದರ ಎಕರೆಗೆ ಮೂರರಿಂದ ನಾಲ್ಕು ಸಾವಿರಕ್ಕೆ ಆರಂಭವಾಗುತ್ತಿದ್ದು, ಈ ಬಾರಿ ಅದು ಹತ್ತು ಸಾವಿರ ರೂ.ಗಳನ್ನು ತಲುಪಿದ್ದು ಕಟಾವು ಮಾಡಿ ಯಂತ್ರದ ಸಹಾಯದಿಂದ ಹುಲ್ಲಿನಿಂದ ಭತ್ತ ಬೇರ್ಪಡಿಸಲು ಯಂತ್ರದ ಮಾಲೀಕರಿಗೆ ಎಕರೆಗೆ ನಾಲ್ಕರಿಂದ ಐದು ಚೀಲ ಭತ್ತ ನೀಡಲಾಗುತ್ತಿದ್ದು, ನಂತರ ಒಣಹುಲ್ಲು ಕಟ್ಟಲು ಒಂದು ಕಂತೆಗೆ 10 ರೂ.ಗಳಂತೆ ನೀಡಬೇಕಿದ್ದು, ಕಟಾವಿಗೆ 20,000 ನಾಟಿ ಕಾರ್ಯಕ್ಕೆ 25,000 ಒಟ್ಟು 45ರಿಂದ 50 ಸಾವಿರ ರೂ ಖರ್ಚು ಮಾಡುವುದು ಅನಿವಾರ್ಯವಾಗುತ್ತಿದೆ.

ತೋಟಗಳಾಗಿ ಮಾರ್ಪಾಡಾಗುವ ಭಯ

ಇದೀಗ ಸರ್ಕಾರ ಮಾದರಿ ಭತ್ತಕ್ಕೆ 2300 ರೂಗಳನ್ನು ನಿಗದಿ ಮಾಡಿದ್ದರೂ ಕಟಾವು ಆರಂಭವಾಗಿ ಎರಡು ವಾರ ಕಳೆದರೂ ಇನ್ನೂ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು 1900ರೂ.ಗಳಿಗೆ ಮಾರಾಟ ಮಾಡವಂತಾಗಿದ್ದು ಸರ್ಕಾರಕ್ಕೆ ಅಧಿಕಾರಿಗಳಿಗೆ ತಿಳಿಯದ ವಿಚಾರವೇನು ಅಲ್ಲ. ಆದರೆ ಭತ್ತ ಬೆಳೆದ ರೈತರು ಕಟಾವು ವೆಚ್ಚ, ಸಾಲವನ್ನೆಲ್ಲ ತೀರಿಸಲೇ ಬೇಕಾದ ಅನಿವಾರ್ಯತೆಯಿಂದಾಗಿ ಭತ್ತವನ್ನು ಕಡಿಮೆ ಬೆಲೆಗೆ ನೀಡಲೇ ಬೇಕಾಗಿದೆ.

ಬಹಳಷ್ಟು ಕಡೆಗಳಲ್ಲಿ ಭತ್ತ ಬೆಳೆಯುವುದು ಕಷ್ಟವಾಗುತ್ತಿರುವ ಕಾರಣ ಮತ್ತು ಖರ್ಚುವೆಚ್ಚಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಗದ್ದೆಯನ್ನು ಅಡಿಕೆ ತೆಂಗಿನ ತೋಟಗಳಾಗಿ ಮಾರ್ಪಡಿಸಲಾಗುತ್ತಿದ್ದು, ಇದರಿಂದ ಭತ್ತದ ಗದ್ದೆ ವ್ಯಾಪ್ತಿ ಕಿರಿದಾಗುತ್ತಿದೆ. ಹೀಗಿರುವಾಗ ಕೊಯ್ಲು ಸಮಯದಲ್ಲಿ ರೈತರು ಹತ್ತು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+