ಫೆಬ್ರವರಿ 6ರಂದು ರೈತರ ಬೆಂಗಳೂರು ಚಲೋ
ಬೆಂಗಳೂರು, ಫೆಬ್ರವರಿ 04: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಹಿನ್ನಲೆಯಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. 2024ರ ರಾಜ್ಯ ಬಜೆಟ್ ಅನ್ನು ಕೃಷಿಗೆ ಪೂರಕವಾಗಿ ಮಂಡಿಸಲು ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.

2024-25ರಲ್ಲಿ ಮಂಡಿಸುವ ರಾಜ್ಯ ಬಜೆಟ್ ರೈತ ಪರವಾಗಿರುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಬ್ಬು ಬೆಳೆಗಾರರು ಹಾಗೂ ಗ್ರೀನ್ ಬಡ್ಸ್ ಮಹಿಳೆಯರಿಂದ ಫೆಬ್ರವರಿ 6ರಂದು 'ಬೆಂಗಳೂರು ಚಲೋ' ಹಮ್ಮಿಕೊಳ್ಳಲಾಗಿದೆ ಎಂದರು.
ರೈತರ ಬೇಡಿಕೆಗಳು ಏನು?; ಕುರುಬೂರು ಶಾಂತಕುಮಾರ್ ರೈತರ ಬೇಡಿಕೆಗಳ ಕುರಿತು ಮಾಹಿತಿ ನೀಡಿದರು. "ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದೆ. ಅದೇ ರೀತಿ ರಾಜ್ಯದಲ್ಲಿಯೂ ಸಾಲ ಮನ್ನಾ ಮಾಡಬೇಕು" ಎಂದರು.
"ಕಬ್ಬಿನ ಎಫ್‌ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಈಗಾಗಲೇ ಕಬ್ಬು ಕಟಾವು, ಸಾಗಾಣಿಕೆ ದರ ಎಂದು ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣವನ್ನು ರೈತರಿಗೆ ವಾಪಸ್ ಕೊಡಿಸಬೇಕು. ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂಎಸ್‌ಪಿ ಖರೀದಿ ಕೇಂದ್ರಗಳನ್ನು ತೆರೆಯಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದರು.
"ಬರ ಪೀಡಿತ ಪ್ರದೇಶಗಳ ರೈತರಿಗೆ ಕೂಡಲೇ ಎಕರೆಗೆ 25,000 ರೂ. ಪರಿಹಾರ ನೀಡಬೇಕು. ಅತಿವೃಷ್ಟಿ, ಪ್ರಕೃತಿ ವಿಕೋಪ, ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಸಂಪೂರ್ಣ ಬೆಳೆ ನಷ್ಟ ಪರಿಹಾರ ಸಿಗುವಂತಾಗಬೇಕು. ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು" ಎಂದರು.
"ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನ ಮೀಸಲಿಡಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರಾಕ್ಟರ್ ಬಿಡಿ ಭಾಗಗಳಿಗೆ ಜಿಎಸ್‌ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು" ಎಂದು ಎಂದು ಹೇಳಿದರು.
"ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿಪೂರ್ವಕ ವಾದ ಯೋಜನೆಗಳನ್ನು ಜಾರಿಗೆ ತರಬೇಕು. ಬೆಂಗಳೂರು ಚಲೋ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಫೆಬ್ರವರಿ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗುತ್ತದೆ" ಎಂದರು.












Click it and Unblock the Notifications