ರೈತರ ಪ್ರತಿಭಟನೆ: ಇಂದು ದೇಶಾದ್ಯಂತ ರೈಲು ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು, ಫೆಬ್ರವರಿ 18: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಇಂದು (ಫೆ 18) ದೇಶಾದ್ಯಂತ ರೈಲು ತಡೆ ಚಳವಳಿ ನಡೆಸಲಿದ್ದಾರೆ. ಕರ್ನಾಟಕದಲ್ಲಿಯೂ ವಿವಿಧೆಡೆ ರೈಲು ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದರಿಂದ ಮಧ್ಯಾಹ್ನ 12ರಿಂದ 3ರವರೆಗೆ ಮೂರು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಇರುವವರು ಇಂದು ಶಾಂತಿಯುತವಾಗಿ ರೈಲು ತಡೆ ಚಳವಳಿ ನಡಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಜನವರಿ 26ರಂದು ಟ್ರ್ಯಾಕ್ಟರ್ ಮೆರವಣಿಗೆ ಹಾಗೂ ಫೆಬ್ರವರಿ 6ರಂದು 'ಚಕ್ಕಾ ಜಾಮ್'ಗೆ ರೈತ ಸಂಘಟನೆಗಳು ಕರೆ ನೀಡಿದ್ದವು. ಈಗ ರೈಲು ತಡೆದು ಪ್ರತಿಭಟಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೈತ ಸಂಘಟನೆಗಳು ನಾಲ್ಕು ಗಂಟೆಗಳ ಕಾಲ ರೈಲು ತಡೆ ನಡೆಸಲಿವೆ. ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ರೈಲು ತಡೆಗೆ ಉದ್ದೇಶಿಸಲಾಗಿದೆ. ಆದರೆ ರಾಜ್ಯದಲ್ಲಿನ ರೈತ ಸಂಘಟನೆಗಳು ಮೂರು ಗಂಟೆಗಳ ಕಾಲ ರೈಲು ತಡೆ ನಡೆಸುವುದಾಗಿ ತಿಳಿಸಿವೆ.

ರಾಜ್ಯಾದ್ಯಂತ ಮೂರು ಗಂಟೆಗಳ ರೈಲು ತಡೆ ಚಳವಳಿ ನಡೆಸಲು ಕರೆ ನೀಡಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲ ಕಡೆ ರೈಲು ತಡೆಯಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಲು ರೈತ ಸಂಘಟನೆಗಳು ಮನವಿ ಮಾಡಿವೆ. ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವ ಬದಲು ಬಿಜೆಪಿಸರ್ಕಾರ ಅದಕ್ಕೆ ಪ್ರತಿಯಾಗಿ ಕ್ರಮ ತೆಗೆದುಕೊಂಡು ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇನ್ನೂ ವಿಳಂಬ ಮಾಡದೆ ಕೂಡಲೇ ಸರ್ಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮತ್ತಷ್ಟು ರೈತರನ್ನು ಸೇರಿಸಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.












Click it and Unblock the Notifications