Donkey Milk: ಕತ್ತೆ ಹಾಲು ಮಾರಾಟದಲ್ಲಿ 13 ಕೋಟಿ ಹಗರಣ, ಸಿಐಡಿ ತನಿಖೆಗೆ ಆದೇಶ
ವಿಜಯನಗರ, ಅಕ್ಟೋಬರ್ 23: ಕತ್ತೆ ಹಾಲಿಗೆ ಬಹಳ ಬೇಡಿಕೆ ಇರುವುದನ್ನು ದುರುಪಯೋಗ ಮಾಡಿಕೊಂಡು ರೈತರಿಗೆ ವಂಚನೆ ಮಾಡಲಾಗಿದೆ. ಹಳ್ಳಿಗಳಲ್ಲಿ ರೈತರ ಬಳಿ ಕತ್ತೆ ಹಾಲು ಕೊಳ್ಳುತ್ತೇವೆ ಎಂದು ಭರವಸೆ ನೀಡಿ, ಲಕ್ಷಾಂತರ ರೂಪಾಯಿ ಪಡೆದು ಕತ್ತೆಗಳನ್ನು ನೀಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಈ ವಂಚನೆ ನಡೆದಿದೆ. ಸುಮಾರು 318 ರೈತರು ದೂರು ನೀಡಿದ್ದು, ಸರ್ಕಾರ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕತ್ತೆ ಮಾರಾಟ ಮತ್ತು ಅದರ ಹಾಲು ಖರೀದಿಯಲ್ಲಿ ವಂಚನೆ ನಡೆಯುತ್ತಿದೆ ಎಂಬ ದೂರು ಸೆಪ್ಟೆಂಬರ್ ತಿಂಗಳಿನಲ್ಲಿ ಕೇಳಿ ಬಂದಿತ್ತು. ಕತ್ತೆ ಹಾಲು ಖರೀದಿ ಮಾಡುತ್ತೇವೆ ಎಂದು ಬಹುಕೋಟೆ ರೂಪಾಯಿ ವಂಚನೆ ಮಾಡಲಾಗಿದೆ. ಈ ವಂಚನೆ ಪ್ರಕರಣವನ್ನು ಈಗ ಸಿಐಡಿ ಅಪರಾಧ ತನಿಖಾ ವಿಭಾಗದಕ್ಕೆ ವರ್ಗಾವಣೆ ಮಾಡಲಾಗುತ್ತಿದೆ.

ಆಂಧ್ರ ಪ್ರದೇಶದ ಮೂಲದ ಜೆನ್ನಿಮಿಲ್ಕ್ ಕಂಪನಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶಾಖೆ ಆರಂಭಿಸಿತ್ತು. ಕತ್ತೆ ಸಾಕಲು ಮೂರು ವರ್ಷದ ಒಪ್ಪಂದ ಮಾಡಿಕೊಂಡು, ರೈತರಿಂದ ತಲಾ 3 ಲಕ್ಷ ಪಡೆದು, ಮೂರು ಹೆಣ್ಣು ಕತ್ತೆಗಳನ್ನು ನೀಡಿತ್ತು. ಕತ್ತೆ ಹಾಲನ್ನು ಲೀಟರ್‌ಗೆ 2,350 ರೂ. ದರದಲ್ಲಿ ಕೊಂಡುಕೊಳ್ಳುವುದಾಗಿ ಕಂಪನಿ ಭರವಸೆ ನೀಡಿತ್ತು.
ಸದ್ಯದ ಮಾಹಿತಿ ಪ್ರಕಾರ 318 ರೈತರು ಕತ್ತೆಗಳನ್ನು ಖರೀದಿ ಮಾಡಿದ್ದಾರೆ. ಕತ್ತೆ ಹಾಲನ್ನು ಖರೀದಿ ಮಾಡಿದರೂ ಸಹ ಹಣ ಪಾವತಿ ಮಾಡಿರಲಿಲ್ಲ. ಈ ಕುರಿತು ಮೊದಲು ಸೆಪ್ಟೆಂಬರ್ 19ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
13 ಕೋಟಿ ರೂ. ಹಗರಣ: ರೈತರು ನೀಡಿದ ವಂಚನೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಜೆನ್ನಿಮಿಲ್ಕ್ ಕಂಪನಿಯ 5 ಶಾಖೆಗಳನ್ನು ಜಪ್ತಿ ಮಾಡಿದ್ದರು. ಮುರಳಿ, ಉಮಾಶಂಕರ ರೆಡ್ಡಿ, ಸೈಯದ್ ಮಹಮ್ಮದ್ ಗೌಸ್ ಎಂಬುವವರನ್ನು ಬಂಧಿಸಿದ್ದರು. ರಾಜ್ಯ ಹೊರ ರಾಜ್ಯಕ್ಕೆ ಈ ಜಾಲ ಹಬ್ಬಿದ್ದು ಸುಮಾರು 13 ಕೋಟಿ ರೂ. ವಂಚನೆಯಾಗಿದೆ. ಆದ್ದರಿಂದ ಹೆಚ್ಚಿನ ತನಿಖೆಗಾಗಿ ಸರ್ಕಾರ ಸಿಐಡಿಗೆ ಪ್ರಕರಣವನ್ನು ಹಸ್ತಾಂತರ ಮಾಡಿದೆ.
ಕತ್ತೆ ಹಾಲು ಕೊಳ್ಳುವ ಭರವಸೆ, ಕತ್ತೆಯನ್ನು ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾಧ್ಯಕ್ಷ ಟಿ. ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್ ಅವರಿಗೆ ದೂರು ಸಹ ಸಲ್ಲಿಸಿದ್ದವು. ಕತ್ತೆಗಳ ಸಾಕಾಣಿಕೆ ಯೋಜನೆ ಕಂಪನಿಯಾದ ಜೆನ್ನಿಮಿಲ್ಕ್ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಕತ್ತೆ ಹಾಲನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುವುದಾಗಿ ಭರವಸೆಯನ್ನು ನೀಡಿ 3 ಲಕ್ಷಕ್ಕೆ 3 ಕತ್ತೆಗಳನ್ನು ಮಾರಾಟ ಮಾಡಿ ರೈತರಲ್ಲಿ ಗೊಂದಲವನ್ನು ಕಂಪನಿ ಸೃಷ್ಟಿ ಮಾಡುತ್ತಿದೆ. ಇದರಿಂದಾಗಿ ಹಳ್ಳಿಗಳ ರೈತರು ಆರ್ಥಿಕವಾಗಿ ನಷ್ಟ ಉಂಟು ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಇದರಿಂದಾಗಿ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ಕತ್ತೆಗಳ ಸಾಕಾಣಿಕೆ ಮಾಡಿ, ಹಾಲು ಮಾರಾಟ ಮಾಡಿ ಎಂದು ಪ್ರತಿ ಹಳ್ಳಿಗಳಲ್ಲಿ ರೈತರನ್ನು ಗುರಿಯಾಗಿಸಿಕೊಂಡು ವಂಚಿಸಲಾಗುತ್ತಿದೆ. ಕತ್ತೆಗಳ ಸಾಕಾಣಿಕೆ ಕುರಿತು ಸರಿಯಾದ ಮಾಹಿತಿ ನೀಡದೇ, ರೈತರ ಮಕ್ಕಳಿಂದ ಪ್ರತಿ ಒಂದು ಕತ್ತೆಗೆ ಲಕ್ಷ ದಂತೆ 3 ಕತ್ತೆಗಳಿಗೆ 3 ಲಕ್ಷಗಳನ್ನು ದುಡ್ಡು ಕಟ್ಟಿಸಿಕೊಂಡು ಮೂರು ಕತ್ತೆಗಳನ್ನು ಕೊಡುತ್ತಿದ್ದಾರೆ. ಇದು ರೈತರನ್ನು ವಂಚಿಸುವ ಕಂಪನಿಯಾಗಿದೆ ಎಂದು ತಿಳಿಸಲಾಗಿತ್ತು.
ಪ್ರತಿ ಕತ್ತೆಗೆ 20-30 ಸಾವಿರ ಇರುತ್ತದೆ. ಆದರೆ ರೈತರಿಂದ 1 ಲಕ್ಷ ರೂ. ಕಟ್ಟಿಸಿಕೊಂಡು ಕತ್ತೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹಳ್ಳಿಯಲ್ಲಿ ರೈತರ ಮಕ್ಕಳಿಂದ ದುಡ್ಡುಕಟ್ಟಿಸಿಕೊಂಡು ಕಂಪನಿ ಲಾಭ ಮಾಡಿಕೊಳ್ಳುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.












Click it and Unblock the Notifications