ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ

ಸಾವಿರಾರು ಎಕರೆ ಪ್ರದೇಶದಲ್ಲಿ ಸಜ್ಜೆ, ಶೇಂಗಾ, ಸೂರ್ಯಕಾಂತಿ ಬೆಳೆ ಬೆಳೆಯುತ್ತಿದ್ದು, ಮಾರ್ಚ್ ಅಂತ್ಯದವರೆಗೆ ನೀರು ಹರಿಸದಿದ್ದಲ್ಲಿ ರೈತರು ಸಾಲದ ಸುಳಿಯಲ್ಲಿ ಸಿಲುಕಲಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಾರ್ಚ್ ಅಂತ್ಯದವರೆಗೂ ನೀರು ಬಿಡುವಂತೆ ಡಿಸಿ ಕಚೇರಿ ಮುಂದೆ ಸಮಿತಿ ಕಾರ್ಯಕರ್ತರು ಧರಣಿ ಕುಳಿತರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ರೈತರ ಸಮಸ್ಯೆ ನನಗೆ ತಿಳಿಯುತ್ತೆ. ಆದರೆ ಈ ನೀರು ಬೀಡುವುದು ನನ್ನ ಕೈಯಲ್ಲಿ ಇಲ್ಲ, ಸರಕಾರದ ಕೈಯಲ್ಲಿ ಇದೆ ಎಂದು ಕೈಚೆಲ್ಲಿದರು. ಈ ಬಗ್ಗೆ ಸರಕಾರಕ್ಕೆ ಫ್ಯಾಕ್ಸ್ ಮುಖಾಂತರ ನಿಮ್ಮ ಬೇಡಿಕೆಯನ್ನು ಕಳುಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೆ ರೈತರು ನೀವು ಕೂಡಲೇ ಕಳುಹಿಸಿ ಕೊಡಿ, ಹಾಗೂ ಸರಕಾರದ ಅಧಿಕಾರಿಗಳ ಜೊತೆನೂ ಮಾತನಾಡಿ. ಕಾಲುವೆಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಲು ಅನುಮತಿ ಪಡೆಯಿರಿ. ಅಲ್ಲಿವರೆಗೂ ಇಲ್ಲೇ ಕುಳಿತು ಕೊಳ್ಳುತ್ತೇವೆ ಎಂದು ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತರು. ಸುಮಾರು ಎರಡು ಗಂಟೆವರೆಗೂ ಸರಕಾರದ ಉತ್ತರಕ್ಕಾಗಿ ಕಾದು ಕುಳಿತ ರೈತರು, ಬಿಸಿಲು ನೆತ್ತಿ ಮೇಲೆ ಬರುತ್ತಲೇ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗತೊಡಗಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಕಚೇರಿಯ ಗೇಟ್ ಬಂದ್ ಮಾಡಿದರು.
ರೈತರನ್ನು ಸಮಾಧಾನ ಮಾಡಲೆತ್ನಿಸಿದ ಜಿಲ್ಲಾಧಿಕಾರಿ, ನಾನು ಈಗಾಗಲೇ ತಮ್ಮ ಬೇಡಿಕೆಯನ್ನು ಸರಕಾರಕ್ಕೆ ಕಳುಹಿಸಿ ಕೊಟ್ಟಿದೇನೆ. ಸರಕಾರದ ಸುತ್ತೋಲೆ ಪ್ರಕಾರ, 2013 ಫೆ. 6ರಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪ-ಸಮಿತಿಯಲ್ಲಿ, ಜಲಾಶಗಳ ನೀರಿನ ಮಟ್ಟ ಬಸಿಯುತ್ತಿರುವ ಬಗ್ಗೆ ಚರ್ಚಿಸಲಾಗಿದ್ದು, ಫೆ.15ರಿಂದ ಆಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿ ಬೆಳೆಗಳಿಗೆ ಉಪಯೋಗಿಸುವುದನ್ನು ನಿಷೇಧಿಸಿ, ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಬೇಕೆಂದು ಸೂಚಿಸಿದೆ ಎಂಬುದನ್ನು ತಿಳಿಸಿದರು.
ಅಷ್ಟರಲ್ಲಿ ರೈತರ ಮದ್ಯದಿಂದ ಎದ್ದ ರೈತನೊಬ್ಬ, ರೈತರು ಸಾಲ ಮಾಡಿ ಬೀಜ ತಂದು ಬಿತ್ತಿದ ಬೆಳೆ ಕೈಗೆ ಬಾರದಿದ್ದ ಮೇಲೆ ನಾವು ಇದ್ದರೂ ಸತ್ತಂತೆ ಎಂದು ಡಿಸಿ ಮುಂದೆಯೇ ಕ್ರಿಮಿನಾಶಕ ಕುಡಿಯಲು ಯತ್ನಿಸಿದ. ಪಕ್ಕದಲ್ಲಿ ಇದ್ದ ರೈತರು ಕೂಡಲೆ ಆ ಬಾಟಲಿಯನ್ನು ಕಸಿದು ಎಸೆದರು. ನಂತರ ಜಿಲ್ಲಾಧಿಕಾರಿಗಳು ಮನವೊಲಿಸಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಂಡರು.












Click it and Unblock the Notifications